ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋಲಾರ: ಸಮಾನತೆಯ ಕ್ರಾಂತಿ ಕಹಳೆ ಮೊಳಗಿಸಿ; ತ್ಯಾಗರಾಜು

ರಾಜ್ಯ ವಚನ ಸಾಹಿತ್ಯ ಪರಿಷತ್‌ ಅಧ್ಯಕ್ಷ ತ್ಯಾಗರಾಜು ಹೇಳಿಕೆ
Last Updated 4 ಅಕ್ಟೋಬರ್ 2020, 13:18 IST
ಅಕ್ಷರ ಗಾತ್ರ

ಕೋಲಾರ: ‘ಮಠಾಧೀಶರು ಜಾತ್ಯಾತೀತರಾಗಿ ಸಮಾನತೆಯ ಕ್ರಾಂತಿ ಕಹಳೆ ಮೊಳಗಿಸಿದರೆ ಮಾತ್ರ ಸಮ ಸಮಾಜ ನಿರ್ಮಾಣ ಸಾಧ್ಯ’ ಎಂದು ರಾಜ್ಯ ವಚನ ಸಾಹಿತ್ಯ ಪರಿಷತ್‌ ಅಧ್ಯಕ್ಷ ಎಂ.ವಿ.ತ್ಯಾಗರಾಜು ಅಭಿಪ್ರಾಯಪಟ್ಟರು.

ಜಿಲ್ಲಾ ವಚನ ಸಾಹಿತ್ಯ ಪರಿಷತ್‌ ಇಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ಕವಿಗೋಷ್ಠಿ ಹಾಗೂ ‘ಕಾಯಕ ಯೋಗಿ’ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿ, ‘ಜಾತಿ ವ್ಯವಸ್ಥೆ ತೊಡೆದು ಹಾಕಿ ಸಮ ಸಮಾಜ ನಿರ್ಮಾಣದ ಉದ್ದೇಶಕ್ಕಾಗಿ ವಚನ ಸಾಹಿತ್ಯ ಉದಯಿಸಿತು. ಬಸವಣ್ಣ ಅವರು ವಚನ ಸಾಹಿತ್ಯದ ಮೂಲಕ ಜಾತಿ ಪದ್ಧತಿ ತೊಲಗಿಸುವ ಕೆಲಸ ಮಾಡಿದರು’ ಎಂದರು.

‘ಶಿವ ಶರಣರು ವಚನ ಸಾಹಿತ್ಯ ಬರೆದರು. ಅವರ ಮಾರ್ಗದರ್ಶನದ ಹಾದಿಯಲ್ಲಿ ಸಾಗಿ ಬಂದವರು ಉಪ ಜಾತಿಗಳನ್ನು ಹುಟ್ಟಿ ಹಾಕಿದರು. ನಂತರ ಜಾತಿಗೊಂದು ಮಠ ಹುಟ್ಟಿಕೊಂಡವು. ಈಗ ಎಲ್ಲಾ ಶರಣರ ಹೆಸರಿನಲ್ಲಿ ಮಠ ಮಾನ್ಯಗಳು ಉದ್ಭವವಾಗಿವೆ’ ಎಂದು ಕಳವಳ ವ್ಯಕ್ತಪಡಿಸಿದರು.

‘ಎಲ್ಲಾ ಕಾಲಘಟ್ಟದಲ್ಲೂ ಪಟ್ಟಭದ್ರ ಹಿತಾಸಕ್ತಿಗಳು ಇರುತ್ತವೆ. ಇವುಗಳನ್ನೆಲ್ಲಾ ಮೀರಿದ ಶಕ್ತಿಯಾಗಿ ಬೆಳೆದ ಬಸವಣ್ಣ, ಗೌತಮ ಬುದ್ಧ ಹಾಗೂ ಅಂಬೇಡ್ಕರ್‌ರ ತತ್ವ ಸಿದ್ಧಾಂತವು ವಿಚಾರಧಾರೆಯಾಗಿದೆ. ಈ ಮೂವರ ಆಶಯ ದೇಶದ ಸಂವಿಧಾನದಲ್ಲಿದೆ’ ಎಂದು ಹೇಳಿದರು.

‘ಪರರಿಗೆ ಉಪಯೋಗವಾಗುವ ಸಾಹಿತ್ಯ ಭಂಡಾರ ವೃದ್ಧಿಸಿಕೊಳ್ಳಬೇಕು. ಜೀವನ ನಡೆಸುವುದಕ್ಕೆ ಸಂಪಾದನೆ ಮುಖ್ಯ. ಆದರೆ, ಹಣ, ಆಸ್ತಿ ಸಂಪಾದನೆಯೇ ಜೀವನವಲ್ಲ. ಸಂಪಾದನೆಯಲ್ಲಿ ದಾನ ನೀಡುವ ಮನೋಭಾವ ಬರಬೇಕು. ಜೀವನದಲ್ಲಿ ಏನಾದರೂ ಸಾಧನೆ ಮಾಡುವ ತವಕ ಇರಬೇಕು ಎಂಬುದು ಶಿವ ಶರಣರ ಆಶಯವಾಗಿದೆ’ ಎಂದು ಚಿತ್ರಕಲಾ ಪರಿಷತ್‌ ಉಪಾಧ್ಯಕ್ಷ ಎ.ರಾಮಕೃಷ್ಣಪ್ಪ ತಿಳಿಸಿದರು.

ಮನಸ್ಸು ಒಗ್ಗೂಡಿಸಿ: ‘ಕವಿಗಳು ಚಲನಶೀಲತೆಯಿಂದ ಕಾಲಘಟ್ಟಕ್ಕೆ ಅನುಗುಣವಾಗಿ ಸಾಹಿತ್ಯ ರಚಿಸುವ ಮೂಲಕ ಸಮಾಜವನ್ನು ಎಚ್ಚರಿಸುವ ಕೆಲಸ ಮಾಡಬೇಕು. ಕಾವ್ಯ ರಚನೆಯ ಜತೆಗೆ ಮನಸ್ಸುಗಳನ್ನು ಒಗ್ಗೂಡಿಸಬೇಕು. ದೌರ್ಜನ್ಯದ ವಿರುದ್ಧ ಧ್ವನಿಯಾಗುವ ಸಾಹಿತ್ಯ ರಚನೆಯಾಗಬೇಕು’ ಎಂದು ಜಿಲ್ಲಾ ಕನ್ನಡ ಪಿಯುಸಿ ಉಪನ್ಯಾಸಕರ ವೇದಿಕೆ ಅಧ್ಯಕ್ಷ ಜೆ.ಜಿ.ನಾಗರಾಜ್ ಆಶಿಸಿದರು.

‘ಕಾರಣಾಂತರದಿಂದ ಜಿಲ್ಲೆಯಲ್ಲಿ ವಚನ ಸಾಹಿತ್ಯದ ಕಾರ್ಯಕ್ರಮಗಳು ನಡೆಯುತ್ತಿಲ್ಲ. ಮುಂದೆ ಮನೆ ಮನೆಗೆ ವಚನ ಸಾಹಿತ್ಯ ತಲುಪಿಸುವ ಕೆಲಸ ಮಾಡುತ್ತೇವೆ. ಶಾಲಾ ಕಾಲೇಜುಗಳಲ್ಲಿ ವಚನ ಸಾಹಿತ್ಯ ಸ್ಪರ್ಧೆ ಏರ್ಪಡಿಸಿ ಮಕ್ಕಳ ಜ್ಞಾನಾರ್ಜನೆಗೆ ಒತ್ತು ಕೊಡುತ್ತೇವೆ. ಜಿಲ್ಲೆ ಮತ್ತು ತಾಲ್ಲೂಕು ಮಟ್ಟದಲ್ಲಿ ಸಮ್ಮೇಳನ ನಡೆಸಿ ಕಾಯಕ ಯೋಗಿ ಪ್ರಶಸ್ತಿ ನೀಡುತ್ತೇವೆ’ ಎಂದು ಜಿಲ್ಲಾ ವಚನ ಸಾಹಿತ್ಯ ಪರಿಷತ್‌ ಅಧ್ಯಕ್ಷ ಮುನಿರಾಜು ವಿವರಿಸಿದರು.

ರಾಜ್ಯ ವಚನ ಸಾಹಿತ್ಯ ಪರಿಷತ್‌ ಕಾರ್ಯದರ್ಶಿ ರಘುನಂದನ್‌ ರಾಜೋಳಿ, ಜಿಲ್ಲಾ ಕನ್ನಡ ಸಿರಿ ಸಾಹಿತ್ಯ ಪರಿಷತ್‌ ಅಧ್ಯಕ್ಷ ಟಿ.ಸುಬ್ಬರಾಮಯ್ಯ, ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್‌ ಅಧ್ಯಕ್ಷ ಟಿ.ನಾರಾಯಣಪ್ಪ, ತಾಲ್ಲೂಕು ವಚನ ಸಾಹಿತ್ಯ ಪರಿಷತ್‌ ಅಧ್ಯಕ್ಷ ಶ್ರೀನಿವಾಸ್‌ ಪಾಲ್ಗೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT