ಶನಿವಾರ, ಜೂಲೈ 4, 2020
28 °C
ಪ್ರಕರಣ ಮರೆಮಾಚಲು ಜಮೀನು ಮಾಲೀಕನ ಯತ್ನ

ಮರಳು ದಿಬ್ಬ ಕುಸಿದು ಕಾರ್ಮಿಕ ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೋಲಾರ: ಜಿಲ್ಲೆಯ ಮುಳಬಾಗಿಲು ತಾಲ್ಲೂಕಿನ ಎನ್‌.ವಡ್ಡಹಳ್ಳಿಯಲ್ಲಿ ಬುಧವಾರ ಮರಳಿನ ದಿಬ್ಬ ಕುಸಿದು ಅಯೂಬ್‌ (25) ಎಂಬ ಕಾರ್ಮಿಕ ಮೃತಪಟ್ಟಿದ್ದು, ಮರಳು ದಂಧೆಕೋರರು ಪೊಲೀಸರಿಗೆ ಘಟನೆಯ ವಿಷಯ ತಿಳಿಸದೆ ಶವ ಹೂತಿಟ್ಟು ಪ್ರಕರಣ ಮರೆಮಾಚಲು ಯತ್ನಿಸಿರುವ ಘಟನೆ ನಡೆದಿದೆ.

ಘಟನೆ ನಡೆದಿರುವ ಜಮೀನು ದೇವರಾಜ್‌ ಎಂಬುವರಿಗೆ ಸೇರಿದ್ದು, ಮರಳು ದಂಧೆಯಲ್ಲಿ ಅವರ ಪಾತ್ರವಿರುವ ಬಗ್ಗೆ ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.

ಮುಳಬಾಗಿಲು ನಗರದ ಬೂಸಾಲಕುಂಟೆಯು ಅಯೂಬ್‌ ಇತರೆ ಕಾರ್ಮಿಕರೊಂದಿಗೆ ದೇವರಾಜ್‌ರ ಜಮೀನಿನಲ್ಲಿ ಬೆಳಗಿನ ಜಾವ ಮರಳು ತೆಗೆಯುತ್ತಿದ್ದಾಗ ಈ ದುರ್ಘಟನೆ ನಡೆದಿದೆ. ಮರಳು ದಿಬ್ಬ ಕುಸಿದು ಕೆಳಗೆ ಸಿಲುಕಿದ ಅಯೂಬ್‌ ಉಸಿರುಗಟ್ಟಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಘಟನೆಯಲ್ಲಿ ಇಬ್ಬರು ಕಾರ್ಮಿಕರು ಗಾಯಗೊಂಡಿದ್ದಾರೆ.

ಇದರಿಂದ ಗಾಬರಿಯಾದ ದೇವರಾಜ್‌ ಪೊಲೀಸರು ಪ್ರಕರಣ ದಾಖಲಿಸಬಹುದೆಂಬ ಭಯದಲ್ಲಿ ಅಯೂಬ್‌ರ ಶವ ಹೊರತೆಗೆದು ಬೂಸಾಲಕುಂಟೆಗೆ ಸಾಗಿಸಿದ್ದಾರೆ. ನಂತರ ತರಾತುರಿಯಲ್ಲಿ ಶವ ಹೂತು ಅಂತ್ಯ ಸಂಸ್ಕಾರ ನಡೆಸಿದ್ದಾರೆ. ಈ ಸಂಗತಿ ಸಂಜೆವರೆಗೂ ಗಮನಕ್ಕೆ ಬಂದಿರಲಿಲ್ಲ ಎಂದು ನಂಗಲಿ ಠಾಣೆ ಪೊಲೀಸರು ತಿಳಿಸಿದ್ದಾರೆ.

ಬೂಸಾಲಕುಂಟೆ ಬಡಾವಣೆಯಲ್ಲಿ ಕೆಲ ದಿನಗಳ ಹಿಂದೆ ಕೊರೊನಾ ಸೋಂಕಿತರು ಪತ್ತೆಯಾದ ಕಾರಣ ಜಿಲ್ಲಾಡಳಿತವು ಇಡೀ ಬಡಾವಣೆಯನ್ನು ನಿರ್ಬಂಧಿತ ಪ್ರದೇಶವಾಗಿ (ಕಂಟೈನ್‌ಮೆಂಟ್‌ ಝೋನ್‌) ಘೋಷಿಸಿತ್ತು. ಅಲ್ಲದೇ, ಬಡಾವಣೆಯ ಜನರು ಹೊರ ಹೋಗದಂತೆ ಮತ್ತು ಹೊರಗಿನ ವ್ಯಕ್ತಿಗಳು ಬಡಾವಣೆಗೆ ಬಾರದಂತೆ ಆದೇಶಿಸಿ ಸೀಲ್‌ಡೌನ್‌ ಮಾಡಿತ್ತು. ಇದೇ ಬಡಾವಣೆಯ ಅಯೂಬ್‌ ಅವರು ಹೊರ ಹೋಗಿ ಮೃತಪಟ್ಟಿರುವುದು ಚರ್ಚೆಗೆ ಗ್ರಾಸವಾಗಿದೆ.

ಶವ ತೆಗೆಯುತ್ತೇವೆ: ‘ಘಟನೆ ನಡೆದಿರುವ ಜಮೀನು ಇಲಾಖೆಯ ಎಸ್‌ಐ ಒಬ್ಬರಿಗೆ ಸೇರಿದೆ ಎಂಬ ಆರೋಪ ಕೇಳಿಬಂದಿತ್ತು. ಈ ಬಗ್ಗೆ ಪರಿಶೀಲನೆ ಮಾಡಿದಾಗ ದೇವರಾಜ್‌ ಎಂಬುವರು ಜಮೀನಿನ ಮಾಲೀಕರು ಎಂದು ಗೊತ್ತಾಗಿದೆ’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕಾರ್ತಿಕ್‌ರೆಡ್ಡಿ ‘ಪ್ರಜಾವಾಣಿ’ಗೆ ತಿಳಿಸಿದರು.

‘ಅಯೂಬ್‌, ಕಂಟೈನ್‌ಮೆಂಟ್‌ ಝೋನ್‌ನಿಂದ ಹೇಗೆ ಹೊರ ಬಂದರೆಂದು ಗೊತ್ತಾಗಿಲ್ಲ. ನಂಗಲಿ ಠಾಣೆಯಲ್ಲಿ ಅಸಹಜ ಸಾವು ಪ್ರಕರಣ ದಾಖಲಿಕೊಳ್ಳಲಾಗಿದೆ. ಗುರುವಾರ (ಜೂನ್‌ 4) ಅಯೂಬ್‌ರ ಶವ ಹೊರ ತೆಗೆದು ಮರಣೋತ್ತರ ಪರೀಕ್ಷೆ ನಡೆಸುತ್ತೇವೆ’ ಎಂದು ಹೇಳಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.