ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂವಿಧಾನ ಬದಲಾವಣೆ ಕೂಗು ಸರಿಯಲ್ಲ: ವಿಧಾನ ಪರಿಷತ್ ಮಾಜಿ ಸಭಾಪತಿ ಸುದರ್ಶನ್

Last Updated 17 ಫೆಬ್ರುವರಿ 2020, 19:45 IST
ಅಕ್ಷರ ಗಾತ್ರ

ಕೋಲಾರ: ‘ಅಂಬೇಡ್ಕರ್‌ ವಿಚಾರಧಾರೆ ಅರಿತವರಿಂದ ಮಾತ್ರ ಸಂವಿಧಾನ ಗಟ್ಟಿಗೊಳಿಸಲು ಸಾಧ್ಯ’ ಎಂದು ವಿಧಾನ ಪರಿಷತ್ ಮಾಜಿ ಸಭಾಪತಿ ವಿ.ಆರ್.ಸುದರ್ಶನ್ ಅಭಿಪ್ರಾಯಪಟ್ಟರು.

ಬುಡ್ಡಿದೀಪ ರಂಗ ಶಾಲೆಯು ಅಂಬೇಡ್ಕರ್ ರಂಗ ರಥಯಾನದಡಿ ಇಲ್ಲಿ ಭಾನುವಾರ ಹಮ್ಮಿಕೊಂಡಿದ್ದ ‘ಅಂಬೇಡ್ಕರ್ ಕೊಲಾಜ್’ ನಾಟಕ ಪ್ರದರ್ಶನ ಉದ್ಘಾಟಿಸಿ ಮಾತನಾಡಿ, ‘ದೇಶದಲ್ಲಿ ಸಂವಿಧಾನ ಬದಲಿಸುವ ಕೂಗು ಆಗಾಗ್ಗೆ ಕೇಳಿಬರುತ್ತಿದೆ. ಇದು ಒಳ್ಳೆಯ ಬೆಳವಣಿಗೆಯಲ್ಲ’ ಎಂದು ಕಳವಳ ವ್ಯಕ್ತಪಡಿಸಿದರು.

‘ಅಂಬೇಡ್ಕರ್‌ ಅವರನ್ನು ನಾಟಕಗಳ ಮೂಲಕ ಅರ್ಥ ಮಾಡಿಸುವಲ್ಲಿ ಕೋಟಿಗಾನಹಳ್ಳಿ ರಾಮಯ್ಯರ ನಾಟಕಗಳು ಹೆಚ್ಚು ಪರಿಣಾಮಕಾರಿಯಾಗಿವೆ. ಹೊಸ ಪ್ರಯತ್ನದ ಭಾಗವಾಗಿ ಅಂಬೇಡ್ಕರ್ ಕೊಲಾಜ್ ನಾಟಕ ಪ್ರದರ್ಶನಗೊಳ್ಳುತ್ತಿದೆ. ಈ ನಾಟಕ ರಾಜ್ಯ ಸೇರಿದಂತೆ ದೇಶ ವಿದೇಶದಲ್ಲಿ ಪ್ರದರ್ಶನಗೊಂಡು ಅಂಬೇಡ್ಕರ್‌ ವಿಚಾರಧಾರೆಯನ್ನು ಜನರಿಗೆ ತಲುಪಿಸಲಿ’ ಎಂದು ಆಶಿಸಿದರು.

‘ಕೋಟಿಗಾನಹಳ್ಳಿ ರಾಮಯ್ಯ ಆದಿಮ ಸಂಸ್ಥೆ ಕಟ್ಟಿ ನಾಟಕಗಳ ಮೂಲಕ ಸಮಾಜ ಪರಿವರ್ತನೆಯ ಕನಸು ಕಾಣುತ್ತಿದ್ದಾರೆ. ಅವರ ನಾಟಕಗಳು ರಂಗಭೂಮಿಯಲ್ಲಿ ವಿನೂತನ ಪ್ರಯೋಗಗಳಿಂದ ಗಮನ ಸೆಳೆದಿದ್ದು, ಈ ಸಾಲಿಗೆ ಅಂಬೇಡ್ಕರ್ ಕೊಲಾಜ್ ನಾಟಕ ಸೇರ್ಪಡೆಯಾಗಿದೆ’ ಎಂದು ಸಾಹಿತಿ ಮೋಹನ್ ಕೊಂಡಜ್ಜಿ ಹೇಳಿದರು.

‘ಭಾರತ ಹಾಗೂ ವಿಶ್ವದ 42ಕ್ಕೂ ಹೆಚ್ಚು ರಾಷ್ಟ್ರಗಳು ಅಂಬೇಡ್ಕರ್ ತತ್ವ ಸಿದ್ಧಾಂತದಡಿ ಸಾಗುತ್ತಿವೆ. ಮಹಾ ಭಾರತದ 18 ಪರ್ವಗಳಂತೆ ಅಂಬೇಡ್ಕರ್ ಜೀವನಗಾಥೆಯನ್ನು 18 ನಾಟಕಗಳ ಭೀಮಪರ್ವದ ಮೂಲಕ ಪ್ರದರ್ಶಿಸಲಾಗುತ್ತದೆ. ಈ ಸರಣಿಯ 3ನೇ ನಾಟಕ ಅಂಬೇಡ್ಕರ್ ಕೊಲಾಜ್’ ಎಂದು ಸಾಹಿತಿ ಕೋಟಿಗಾನಹಳ್ಳಿ ರಾಮಯ್ಯ ವಿವರಿಸಿದರು.

ವಿದೇಶದಲ್ಲಿ ಪ್ರದರ್ಶನ: ‘ರಾಜ್ಯದ ವಿವಿಧ ಜಿಲ್ಲೆಗಳಿಂದ ಯುವಕ ಯುವತಿಯರನ್ನು ಆಯ್ಕೆ ಮಾಡಿಕೊಂಡು ಬುಡ್ಡಿದೀಪ ರಂಗ ತಂಡದ ಮೂಲಕ ಅಂಬೇಡ್ಕರ್ ಓದು ಹಾಗೂ ನಾಟಕ ಪ್ರದರ್ಶನದ ರಂಗ ರಥಯಾನ ಅನುಷ್ಠಾನಗೊಳಿಸಲಾಗುತ್ತಿದೆ. ಕೋಲಾರ ಸೇರಿದಂತೆ ದೇಶ ವಿದೇಶದಲ್ಲಿ ನಾಟಕ ಪ್ರದರ್ಶಿಸುವ ಗುರಿಯಿದೆ’ ಎಂದು ಮಾಹಿತಿ ನೀಡಿದರು.

‘ಪ್ರತಿಯೊಬ್ಬರೂ ಅಂಬೇಡ್ಕರ್ ಅವರನ್ನು ಅರ್ಥ ಮಾಡಿಕೊಳ್ಳಬೇಕಾದ ಅನಿವಾರ್ಯತೆ ಪ್ರಸ್ತುತ ಸಮಾಜದಲ್ಲಿ ನಿರ್ಮಾಣವಾಗಿದೆ’ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ನಾಗಾನಂದ ಕೆಂಪರಾಜ್ ಅಭಿಪ್ರಾಯಪಟ್ಟರು.

ರಂಗಕರ್ಮಿ ಚಿದಂಬರರಾವ್ ಜಂಬೆ ನಿರ್ದೇಶನದ ಅಂಬೇಡ್ಕರ್‌ ಕೊಲಾಜ್‌ ನಾಟಕದಲ್ಲಿ ಜನಪದ ಗಾಯಕಿ ಉಮಾ ಸೇರಿದಂತೆ 20ಕ್ಕೂ ಹೆಚ್ಚು ಕಲಾವಿದರು ಅಂಬೇಡ್ಕರ್‌ ಜೀವನದ ವಿವಿಧ ಹಂತಗಳಲ್ಲಿ ಜರುಗಿದ ಘಟನಾವಳಿಗಳನ್ನು ವ್ಯಂಗ್ಯ, ವಿಡಂಬನೆ ಮೂಲಕ ಪ್ರಚಲಿತ ವಿದ್ಯಮಾನಗಳಿಗೆ ಸಮೀಕರಿಸಿದರು. ಅಂಬೇಡ್ಕರ್ ವಾದಿಗಳ ಚಿಂತನೆ, ದಲಿತ ಚಳವಳಿಯ ಅವ್ಯವಸ್ಥೆ, ಮತಾಂತರ, ಅಂಬೇಡ್ಕರ್ ಸಾಹಿತ್ಯವನ್ನು ನಿರ್ಲಕ್ಷಿಸುತ್ತಿರುವ ಪರಿ ಇತ್ಯಾದಿ ವಿಚಾರಗಳನ್ನು ಸೂಕ್ಷ್ಮವಾಗಿ ಪ್ರತಿಪಾದಿಸಿದರು.

ಜನಪದ ಗಾಯಕ ಪಿಚ್ಚಳ್ಳಿ ಶ್ರೀನಿವಾಸ್, ಜನವಾದಿ ಮಹಿಳಾ ಸಂಘಟನೆ ರಾಜ್ಯ ಘಟಕದ ಉಪಾಧ್ಯಕ್ಷೆ ವಿ.ಗೀತಾ, ಜಿಲ್ಲಾ ಪರಿಶಿಷ್ಟ ಜಾತಿ ಸರ್ಕಾರಿ ನೌಕರರ ಸಂಘದ ಅಧ್ಯಕ್ಷೆ ವಿಜಯಮ್ಮ, ದಲಿತ ಮುಖಂಡ ರಾಜಪ್ಪ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT