ಗುರುವಾರ , ಸೆಪ್ಟೆಂಬರ್ 23, 2021
26 °C
ಬಯಲುಸೀಮೆಯಲ್ಲಿ ಪ್ರಯೋಗಕ್ಕೆ ಮುಂದಾದ ರೈತ

ಮಾವಿನ ಮಡಿಲಲ್ಲಿ ಬೆಣ್ಣೆ ಹಣ್ಣಿನ ಘಮ

ಆರ್.ಚೌಡರೆಡ್ಡಿ Updated:

ಅಕ್ಷರ ಗಾತ್ರ : | |

Prajavani

ಶ್ರೀನಿವಾಸಪುರ: ತಾಲ್ಲೂಕಿನ ಕಾಡುದೇವಂಡಹಳ್ಳಿಯ ರೈತರೊಬ್ಬರು ತಮ್ಮ ತೋಟದಲ್ಲಿ ಬೆಣ್ಣೆ ಹಣ್ಣು ಬೆಳೆಯುವ ಮೂಲಕ ಜನರ ಗಮನ ಸೆಳೆದಿದ್ದಾರೆ.

ಪ್ರಗತಿಪರ ರೈತ ಸಿ. ವೆಂಕಟೇಶಪ್ಪ ಎರಡು ಎಕರೆ ವಿಸ್ತೀರ್ಣದಲ್ಲಿ ಇಂಗ್ಲಿಷ್‌ನಲ್ಲಿ ‘ಬಟರ್ ಫ್ರೂಟ್’ ಎಂದು ಕರೆಯಲ್ಪಡುವ ಬೆಣ್ಣೆ ಹಣ್ಣು ಬೆಳೆದಿದ್ದಾರೆ. ಆ ಮೂಲಕ ತಾಲ್ಲೂಕಿನಲ್ಲಿ ಈ ಹಣ್ಣಿನ ಬೆಳೆ ಬೆಳೆದ ಮೊದಲ ರೈತ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಬೆಣ್ಣೆ ಹಣ್ಣನ್ನು ಸಾಮಾನ್ಯವಾಗಿ ಮಲೆನಾಡಿನಲ್ಲಿ ಬೆಳೆಯುತ್ತಾರೆ. ಇಷ್ಟು ದಿನ ಈ ಬೆಳೆ ಬಯಲುಸೀಮೆಗೆ ಒಗ್ಗುವುದಿಲ್ಲ ಎಂಬ ಅಭಿಪ್ರಾಯವಿತ್ತು. ಆದರೆ, ಅದನ್ನು ಹುಸಿಗೊಳಿಸಿದ್ದಾರೆ. ತಮ್ಮ ಫಲವತ್ತಾದ ಜಮೀನಿನಲ್ಲಿ ಗಿಡಗಳನ್ನು ನಾಟಿ ಮಾಡಿ ಹನಿ ನೀರಾವರಿ ಅಳವಡಿಸಿದ್ದಾರೆ. ಗಿಡಗಳು ಸಮೃದ್ಧವಾಗಿ ಬೆಳೆಯುತ್ತಿವೆ.

ಮೊದಲ ಬಾರಿಗೆ ಗಿಡಗಳಲ್ಲಿ ಇಲ್ಲೊಂದು ಅಲ್ಲೊಂದು ಕಾಯಿ ಕಾಣಿಸಿಕೊಂಡಿದೆ. ಈ ಭಾಗದ ರೈತರಿಗೆ ಅದರ ಪರಿಚಯ ಇಲ್ಲದಿರುವುದರಿಂದ ಬೆಳೆಯನ್ನು ಬೆರಗುಗಣ್ಣಿನಿಂದ ಗಮನಿಸುತ್ತಿದ್ದಾರೆ. ತನಗೆ ಅಪರಿಚಿತವಾದ ಪರಿಸರದಲ್ಲಿ ಬೆಣ್ಣೆ ಹಣ್ಣಿನ ಗಿಡ ಹೇಗೆ ಬೆಳೆಯುತ್ತದೆ. ಹಣ್ಣು ಹೇಗೆ ಬಿಡುತ್ತದೆ ಎಂಬ ಕುತೂಹಲ ತೊಟಗಾರಿಕಾ ತಜ್ಞರನ್ನೂ ಕಾಡುತ್ತಿದೆ. ಇದರಿಂದಾಗಿಯೇ ತೋಟಗಾರಿಕೆ ಇಲಾಖೆ ಅಧಿಕಾರಿಗಳು ಹಾಗೂ ತೋಟಗಾರಿಕಾ ತಜ್ಞರು ಆಗಿಂದಾಗ್ಗೆ ತೋಟಕ್ಕೆ ಭೇಟಿ ನೀಡಿ ಅಧ್ಯಯನ ಮಾಡುತ್ತಿದ್ದಾರೆ.

ವೆಂಕಟೇಶಪ್ಪ ಮೊದಲಿನಿಂದಲೂ ರೇಷ್ಮೆ ಕೃಷಿಗೆ ಆದ್ಯತೆ ನೀಡಿದ್ದರು. ವೈಜ್ಞಾನಿಕ ವಿಧಾನ ಅನುಸರಿಸಿ ಹುಳು ಸಾಕಾಣಿಕೆ ಮಾಡುತ್ತಿದ್ದರು. ಆದರೆ, ತಮ್ಮ ಸಂಬಂಧಿ ಹಾಗೂ ಹೊಸ ಬೆಳೆ ಬೆಳೆಯುವುದರಲ್ಲಿ ಅತೀವ ಆಸಕ್ತಿ ಹೊಂದಿರುವ ಹರೀಶ್ ಅವರ ಪ್ರೋತ್ಸಾಹದ ಫಲವಾಗಿ ಬೆಣ್ಣೆ ಹಣ್ಣು ಬೆಳೆದಿದ್ದಾರೆ. ಆ ಮೂಲಕ ದಾಖಲೆ ಮಾಡಲು ಹೊರಟಿದ್ದಾರೆ.

‘ಬೆಣ್ಣೆ ಹಣ್ಣು ಪೌಷ್ಟಿಕ ಆಹಾರ ಮಾತ್ರವಲ್ಲದೆ, ಔಷಧೀಯ ಗುಣಗಳನ್ನೂ ಹೊಂದಿರುವುದರಿಂದ ಮಾರುಕಟ್ಟೆಯಲ್ಲಿ ಒಳ್ಳೆಯ ಬೇಡಿಕೆ ಇದೆ. ನಗರ ಪ್ರದೇಶದ ಮಾರುಕಟ್ಟೆಗಳಲ್ಲಿ ಈ ಹಣ್ಣಿನ ಬೆಲೆ ಕೆ.ಜಿ.ಯೊಂದಕ್ಕೆ
₹ 300 ಇದೆ. ಆದರೆ, ಬೆಳೆಗಾರರಿಗೆ ಈ ಬೆಲೆ ಸಿಗುವುದಿಲ್ಲ. ಎಲ್ಲ ಹಣ್ಣಿನ ಬೆಳೆಗಳಂತೆ ಇದರ ಲಾಭದ ಸಿಂಹಪಾಲು ಮಧ್ಯವರ್ತಿಗಳ ಪಾಲಾಗುತ್ತಿದೆ' ಎಂದು ವೆಂಕಟೇಶಪ್ಪ ‘ಪ್ರಜಾವಾಣಿ’ಗೆ ತಿಳಿಸಿದರು.

‘ಬಟರ್ ಫ್ರೂಟ್ ಬೆಳೆಯುವುದು ಸುಲಭದ ಮಾತಲ್ಲ. ಊಜಿ ನೊಣದ ಹಾವಳಿ ಹಣ್ಣಿಗೆ ಮಾರಕವಾಗಿ ಪರಿಣಮಿಸಿದೆ. ಅದರ ನಿಯಂತ್ರಣ ಮಾಡದ ಹೊರತು ಹಣ್ಣಿನ ಆರೋಗ್ಯ ಉಳಿಯುವುದಿಲ್ಲ. ಊಜಿ ನೊಣ ನಿಯಂತ್ರಿಸಲು ಮೋಹಕ ಬಲೆ ಅಳವಡಿಸಬೇಕು. ನಿಯಮಿತವಾಗಿ ರೋಗ ಹಾಗೂ ಕೀಟನಾಶಕ ಸಿಂಪಡಣೆ ಮಾಡಬೇಕು’ ಎಂದು ಹೇಳಿದರು.

‘200 ಗಿಡ ನಾಟಿ ಮಾಡಿದ್ದೇನೆ. ಆರಂಭದ ಹಂತದಲ್ಲಿ ಫಸಲು ಸಹಜವಾಗಿಯೇ ಕಡಿಮೆ ಇರುತ್ತದೆ. ವರ್ಷಕ್ಕೆ ಎರಡು ಬೆಳೆ ಬರುತ್ತದೆ ಎಂದು ಹೇಳಲಾಗುತ್ತಿದೆ. ಮಾರುಕಟ್ಟೆ ಬಗ್ಗೆ ಹೆಚ್ಚಾಗಿ ಗೊತ್ತಿಲ್ಲ. ಆದರೆ, ತೋಟಗಾರಿಕಾ ತಜ್ಞರು ನೀಡುವ ಸಲಹೆ, ಸೂಚನೆ ಅನುಸರಿಸಿ ಬೇಸಾಯ ಮಾಡುತ್ತೇನೆ. ಲಾಭ ನಷ್ಟದ ಬಗ್ಗೆ ಈ ಹಂತದಲ್ಲಿ ಹೇಳಲಾಗದು’
ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು