ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಂಜಾರ ಸಮುದಾಯದ ಚಿಂತನೆ ಅನುಕರಣೀಯ

ಸಂತ ಸೇವಾಲಾಲ್ ಜಯಂತಿಯಲ್ಲಿ ಜಿ.ಪಂ ಅಧ್ಯಕ್ಷ ವೆಂಕಟೇಶ್‌ ಹೇಳಿಕೆ
Last Updated 18 ಫೆಬ್ರುವರಿ 2020, 14:40 IST
ಅಕ್ಷರ ಗಾತ್ರ

ಕೋಲಾರ: ‘ಭಾರತವು ಜಾತ್ಯಾತೀತ ರಾಷ್ಟ್ರವಾಗಿದೆ. ದೇಶದಲ್ಲಿ ಎಲ್ಲಾ ಸಮುದಾಯಗಳಿಗೆ ಸಾಮಾಜಿಕ ನ್ಯಾಯ ಸಿಗಬೇಕು. ಜತೆಗೆ ರಾಜಕೀಯ ಪ್ರಾತಿನಿಧ್ಯ ನೀಡಬೇಕು’ ಎಂದು ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಸಿ.ಎಸ್.ವೆಂಕಟೇಶ್ ಹೇಳಿದರು.

ಜಿಲ್ಲಾಡಳಿತವು ಇಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಸಂತ ಸೇವಾಲಾಲ್ ಜಯಂತಿಯಲ್ಲಿ ಮಾತನಾಡಿ, ‘ಸರ್ಕಾರವು ಸಣ್ಣ ಪುಟ್ಟ ಸಮುದಾಯಗಳ ಮಹನೀಯರನ್ನು ಗುರುತಿಸಿ ಅವರ ಜಯಂತಿ ಆಚರಿಸುವ ಮೂಲಕ ಜನಾಂಗವನ್ನು ಮುಖ್ಯವಾಹಿನಿಗೆ ತರುವ ಪ್ರಯತ್ನ ಮಾಡುತ್ತಿರುವುದು ಶ್ಲಾಘನೀಯ’ ಎಂದರು.

‘ಬಂಜಾರ ಸಮುದಾಯದ ಸಂಸ್ಕೃತಿಯು ಸಮೃದ್ಧಿಯ ಸಂಕೇತವಾಗಿ ಭತ್ತ ನಾಟಿ ಮಾಡಿ 9 ದಿನದ ನಂತರ ಎಲ್ಲರಿಗೂ ಪೈರು ಹಂಚುತ್ತಾರೆ. ನಾಡಿಗೆ ಸದಾ ಒಳಿತು ಬಯಸುವ ಬಂಜಾರ ಸಮುದಾಯದ ಚಿಂತನೆ ಅನುಕರಣೀಯ. ಬಂಜಾರ ಸಮುದಾಯದ ಜನ ವಿದ್ಯಾವಂತರಾಗಿ ಸಮಾಜದ ಮುಖ್ಯವಾಹಿನಿಗೆ ಬರಬೇಕು’ ಎಂದು ಕಿವಿಮಾತು ಹೇಳಿದರು.

‘ಬಂಜಾರ ಜನಾಂಗವು ವಿಶಿಷ್ಟ ಭಾಷೆ ಹಾಗೂ ಸಂಸ್ಕೃತಿಯಿಂದ ಗುರುತಿಸಿಕೊಂಡಿದೆ. ಸರ್ಕಾರವು ಸೇವಾಲಾಲ್ ಜಯಂತಿ ಆಚರಿಸುವ ಮೂಲಕ ಜನಾಂಗದವರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದೆ. ಸೇವಾಲಾಲ್ ಸಮಾಜ ಸುಧಾರಕರಾಗಿ ಜನಾಂಗದ ಅಭಿವೃದ್ಧಿಗೆ ಮಹತ್ತರ ಕೊಡುಗೆ ನೀಡಿದರು’ ಎಂದು ಸ್ಮರಿಸಿದರು.

ಶ್ರೀಮಂತ ಸಂಸ್ಕೃತಿ: ‘ಬಂಜಾರ ಸಮುದಾಯದ ಸಂಸ್ಕೃತಿ ಶ್ರೀಮಂತವಾಗಿದೆ. ಸಂಸ್ಕೃತಿಯ ವಿಚಾರದಲ್ಲಿ ಯಾವ ಸಮುದಾಯವು ಈ ಜನಾಂಗದ ಸಂಸ್ಕೃತಿಯನ್ನು ತಲುಪಲು ಸಾಧ್ಯವಿಲ್ಲ. ಕಂದಾಯ ಇಲಾಖೆ ವತಿಯಿಂದ ಬಂಜಾರ ಸಮುದಾಯ ಭವನ ನಿರ್ಮಾಣಕ್ಕೆ ಜಮೀನು ಮಂಜೂರು ಮಾಡುತ್ತೇವೆ’ ಎಂದು ತಹಶೀಲ್ದಾರ್ ಶೋಭಿತಾ ಭರವಸೆ ನೀಡಿದರು.

‘ಸರ್ಕಾರ ಯಾವುದೇ ಸೌಲಭ್ಯ ಪಡೆಯಲು ಮತ್ತು ಶಾಲೆಗಳಲ್ಲಿ ಮಕ್ಕಳ ದಾಖಲಾತಿಗೆ ಜಾತಿ ಪ್ರಮಾಣಪತ್ರ ಅತ್ಯಗತ್ಯವಾಗಿ ಬೇಕು. ಅಧಿಕಾರಿಗಳು ಸಮರ್ಪಕವಾಗಿ ಪರಿಶೀಲಿಸಿ ಯಾವುದೇ ಲೋಪದೋಷ ಆಗದಂತೆ ಜಾತಿ ಪ್ರಮಾಣಪತ್ರ ವಿತರಿಸುತ್ತಿದ್ದಾರೆ’ ಎಂದು ತಿಳಿಸಿದರು.

‘ದರಖಾಸ್ತು ಅರ್ಜಿ ಸಲ್ಲಿಸಲು ಸಮುದಾದಯವರಿಗೆ ಅವಕಾಶವಿದೆ. ಅರ್ಜಿ ಸಲ್ಲಿಸಿದ ಅರ್ಹರಿಗೆ ಸಾಗುವಳಿ ಚೀಟಿ ಮತ್ತು ಹಕ್ಕುಪತ್ರ ನೀಡಲಾಗುತ್ತದೆ. ಸಮುದಾಯದವರು ಸರ್ಕಾರದ ಯೋಜನೆಗಳ ಬಗ್ಗೆ ಚರ್ಚಿಸಿದರೆ ಎಲ್ಲರಿಗೂ ಯೋಜನೆಗಳ ಅರಿವು ಮೂಡುತ್ತದೆ. ಎಲ್ಲರೂ ಸರ್ಕಾರಿ ಸೌಲಭ್ಯ ಸದುಪಯೋಗಪಡಿಸಿಕೊಳ್ಳಿ’ ಎಂದು ಸಲಹೆ ನೀಡಿದರು.

ಏಳಿಗೆಗೆ ಶ್ರಮಿಸಿದರು: ‘ಜಿಲ್ಲೆಯ 81 ತಾಂಡಾದಲ್ಲಿ ಬಂಜಾರ ಜನಾಂಗದವರು ನೆಲೆಸಿದ್ದಾರೆ. ಸುಕಾಲಿ, ಚವಾನ್, ಲಂಬಾಣಿ ಎಂಬ ಹೆಸರುಗಳಿಂದ ಈ ಸಮುದಾಯದವರನ್ನು ಗುರುತಿಸಲಾಗುತ್ತಿದೆ. ಸಮುದಾಯದ ಸಂತ ಸೇವಾಲಾಲ್ ಚಿಂತಕರಾಗಿ ಸೇವಾ ತತ್ಪರತೆಯಿಂದ ಜನಾಂಗವನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ದರು. ಅಲ್ಲದೇ, ಆರ್ಥಿಕವಾಗಿ, ಸಾಮಾಜಿಕವಾಗಿ ಶೈಕ್ಷಣಿಕವಾಗಿ ಸಮುದಾಯದ ಏಳಿಗೆಗೆ ಶ್ರಮಿಸಿದರು’ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಚಿಕ್ಕಬಳ್ಳಾಪುರ ಜಿಲ್ಲಾ ಸಹಾಯಕ ನಿರ್ದೇಶಕ ಬಿ.ಎನ್.ವೆಂಕಟಾಚಲಪತಿ ಹೇಳಿದರು.

‘ಸೇವಾಲಾಲರು ಸೇವೆಗೆ ಪ್ರಾಮುಖ್ಯತೆ ನೀಡಿದರು. ಸಮಾಜವನ್ನು ತಿದ್ದಿ ಸರಿ ದಾರಿಯಲ್ಲಿ ಕೊಂಡೊಯ್ಯವ ದೈವಿಕ ಶಕ್ತಿ ಹೊಂದಿದ್ದರು. ಸಮಾಜದಲ್ಲಿನ ಕೆಟ್ಟ ಪದ್ಧತಿಗಳ ವಿರುದ್ಧ ಹೋರಾಡಿ ಉತ್ತಮ ಸಮಾಜ ನಿರ್ಮಾಣದಲ್ಲಿ ನಿರ್ಣಾಯಕ ಪಾತ್ರ ವಹಿಸಿದರು’ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ನಾಗಾನಂದ ಕೆಂಪರಾಜು ಬಣ್ಣಿಸಿದರು.

ಬಂಜಾರ ಸಮುದಾಯದ ಸಮೃದ್ಧಿಯ ಸಂಕೇತವಾದ ಗೋಧಿ ಸಸಿಗಳನ್ನು ಹಂಚಲಾಯಿತು. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಮುದಾಯದ ಸಾಧಕರನ್ನು ಸನ್ಮಾನಿಸಲಾಯಿತು. ಕನ್ನಡ ಮತ್ತು ಸಂಸ್ಕೃತಿಕ ಇಲಾಖೆ ಸಹಾಯಕ ನಿರ್ದೇಶಕ ರವಿಕುಮಾರ್, ಉಪನ್ಯಾಸಕ ರವಿ, ಜಿಲ್ಲಾ ಬಂಜಾರ ಸಂಘದ ಅಧ್ಯಕ್ಷ ಪರಮೇಶ್ವರ್ ನಾಯಕ್ ಹಾಗೂ ಸಮುದಾಯದ ಮುಖಂಡರು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT