ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಡಾನೆ ದಾಳಿ: ಶಾಶ್ವತ ಪರಿಹಾರಕ್ಕೆ ಆಗ್ರಹ

ರೈತಸಂಘದ ಸದಸ್ಯರಿಂದ ತೊಪ್ಪನಹಳ್ಳಿ ಕ್ರಾಸ್‌ನಲ್ಲಿ ಪ್ರತಿಭಟನೆ
Last Updated 24 ಜುಲೈ 2021, 5:50 IST
ಅಕ್ಷರ ಗಾತ್ರ

ಬಂಗಾರಪೇಟೆ: ಕಾಡಾನೆ ತಡೆಗೆ ಶಾಶ್ವತ ಕ್ರಮಕೈಗೊಂಡು, ಆನೆದಾಳಿಗೆ ಬಲಿಯಾದವರ ಕುಟುಂಬಕ್ಕೆ ₹25 ಲಕ್ಷ ಪರಿಹಾರ ಕೊಡಬೇಕು ಎಂದು ಆಗ್ರಹಿಸಿ ರೈತಸಂಘದ ಸದಸ್ಯರು ತೊಪ್ಪನಹಳ್ಳಿ ಕ್ರಾಸ್‌ನಲ್ಲಿ ಪ್ರತಿಭಟನೆ ನಡೆಸಿದರು.

ಪ್ರತಿ ಎಕರೆಗೆ ₹5 ಲಕ್ಷ ಪರಿಹಾರ ಕಲ್ಪಿಸುವ ಜತೆಗೆ ಅರಣ್ಯ ಇಲಾಖೆ ಅಧಿಕಾರಿಗಳಿಂದ ರೈತರಿಗೆ ಆಗುತ್ತಿರುವ ತೊಂದರೆಯನ್ನು ತಪ್ಪಿಸಬೇಕು ಎಂದು ಒತ್ತಾಯಿಸಿದರು.

ಗಡಿಭಾಗದ ಗ್ರಾಮೀಣ ಪ್ರದೇಶದ ರೈತರಿಗೆ ದಶಕದಿಂದ ಕಾಡುಪ್ರಾಣಿಗಳ ಹಾವಳಿ ಹೆಚ್ಚಿದೆ. ಅವುಗಳಿಂದ ಆಗುವ ಅನಾಹುತಗಳಿಗೆ ಶಾಶ್ವತ ಪರಿಹಾರ ಕಲ್ಪಿಸುವಲ್ಲಿ ಸರ್ಕಾರ ಹಾಗೂ ಜಿಲ್ಲಾಡಳಿತ ಸಂಪೂರ್ಣ ವಿಫಲವಾಗಿವೆ ಎಂದು ಪ್ರತಿಭಟನೆ ನೇತೃತ್ವ ವಹಿಸಿದ್ದ ರೈತಸಂಘದ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ ಅವರು ಆಕ್ರೋಶ ವ್ಯಕ್ತಪಡಿಸಿದರು.

ಕೊರೊನಾ ಸಂದರ್ಭದಲ್ಲೂ ಇಲ್ಲಿನ ರೈತರು ಖಾಸಗಿ ಸಾಲ ಮಾಡಿ ಟೊಮೆಟೊ, ಕ್ಯಾಪ್ಸಿಕಂ, ಬಾಳೆ ಮುಂತಾದ ವಾಣಿಜ್ಯ ಬೆಳೆ ಸಮೃದ್ಧವಾಗಿ ಬೆಳೆದಿದ್ದರು. ಉತ್ತಮ ಫಸಲು ಸಿಗುವ ಹಂತದಲ್ಲಿ ರಾತ್ರೋರಾತ್ರಿ ಕಾಡಾನೆಗಳು ತೋಟಗಳಿಗೆ ನುಗ್ಗಿ ನಾಶ ಮಾಡುತ್ತಿವೆ ಎಂದರು.

ಪ್ರಾಣದ ಹಂಗು ತೊರೆದು ತೋಟಕ್ಕೆ ನೀರು ಹಾಯಿಸಲು ರಾತ್ರಿ ವೇಳೆ ಪಂಪ್‌ಸೆಟ್ ಬಳಿ ಹೋಗುವ ರೈತರು ಪ್ರಾಣ ಕಳೆದುಕೊಳ್ಳುವ ಪರಿಸ್ಥಿತಿ ಎದುರಾಗಿದೆ. ಅವರನ್ನೇ ನೆಚ್ಚಿಕೊಂಡಿರುವ ಕುಟುಂಬಗಳು ಬೀದಿ ಪಾಲಾಗುತ್ತಿವೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಕಾಡಾನೆ ಹಾವಳಿಗೆ ಶಾಶ್ವತ ಪರಿಹಾರ ನೀಡುತ್ತೇವೆ ಎಂದು ನೆಪ ಮಾತ್ರಕ್ಕೆ ಹೇಳಿಕೆ ಕೊಟ್ಟಿರುವ ಜಿಲ್ಲಾ ಉಸ್ತುವಾರಿ ವಹಿಸಿಕೊಂಡಿರುವ ಅರವಿಂದ ಲಿಂಬಾವಳಿ ಅವರು, ಸೌಜನ್ಯಕ್ಕಾದರೂ ಗಡಿಭಾಗದ ಪ್ರದೇಶಗಳಿಗೆ ಭೇಟಿ ನೀಡಿಲ್ಲ ಎಂದು ದೂರಿದರು.

ಜಿಲ್ಲಾಧ್ಯಕ್ಷ ಐತಾಂಡಹಳ್ಳಿ ಮಂಜುನಾಥ್, ಕಾಡಾನೆ ದಾಳಿಗೆ ನಷ್ಟವಾದ ಪ್ರತಿ ಹೆಕ್ಟೇರ್ ಬೆಳೆಗೆ ₹6 ಸಾವಿರ, ದಾಳಿಗೆ ಮೃತಪಟ್ಟ ರೈತ ಕುಟುಂಬಕ್ಕೆ ಸರ್ಕಾರ ಅಲ್ಪ ಹಣ ಕೊಟ್ಟು ಕೈತೊಳೆದುಕೊಳ್ಳುತ್ತಿದೆ. ರೈತರನ್ನು ಭಿಕ್ಷುಕರಂತೆ ನೋಡುತ್ತಿದ್ದು, ಅವಮಾನ ಮಾಡುತ್ತಿದೆ ಎಂದರು.

ಪರಿಹಾರ ಕೊಡುವುದಕ್ಕಿಂತ ಕಾಡಾನೆಗಳ ಹಾವಳಿಗೆ ಶಾಶ್ವತ ಪರಿಹಾರ ಕೊಡಿ. ನಾವೇ ಭಿಕ್ಷೆಯೆತ್ತಿ ಆನೆ ಕಾರಿಡಾರ್‌ಗೆ ಹಣ ಕೊಡುತ್ತೇವೆ ಎಂದರು.

ಕಾಮಸಮುದ್ರ ಹಾಗೂ ತಳೂರು ಗ್ರಾಮದ ಸರ್ವೆ ನಂಬರ್ 11ರಲ್ಲಿನ ಗೋಮಾಳ ಜಮೀನು ಅರಣ್ಯ ಇಲಾಖೆ ವ್ಯಾಪ್ತಿಗೆ ಸೇರಿದ್ದು ಎಂದು ರೈತರ ಮೇಲೆ ದೌರ್ಜನ್ಯ ಮಾಡುವುದನ್ನು ನಿಲ್ಲಿಸಬೇಕು. ಇಲ್ಲವಾದರೆ ರೈತರೇ ನೇರವಾಗಿ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಪಾಠ ಕಲಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ತಿಂಗಳ ಒಳಗೆ ಕಾಡಾನೆ ತಡೆಗೆ ಶಾಶ್ವತ ಪರಿಹಾರ ಕಲ್ಪಿಸಿ, ಗೋಮಾಳ ಜಮೀನು ಸಾಗುವಳಿ ಮಾಡುತ್ತಿರುವ ರೈತರಿಗೆ ಅರಣ್ಯ ಅಧಿಕಾರಿಗಳ ತೊಂದರೆ ತಪ್ಪಿಸದಿದ್ದರೆ ನೂರಾರು ಟ್ರ್ಯಾಕ್ಟರ್‌ಗಳಲ್ಲಿ ಬೆಳೆ ಸಮೇತ ವಿಧಾನಸೌಧ ಮುತ್ತಿಗೆ ಹಾಕುವ ಎಚ್ಚರಿಕೆ ನೀಡಿದರು.

ಜಿಲ್ಲಾ ಕಾರ್ಯಾಧ್ಯಕ್ಷ ಮರಗಲ್ ಮುನಿಯಪ್ಪ, ಹಸಿರುಸೇನೆ ಜಿಲ್ಲಾಧ್ಯಕ್ಷ ಕಿರಣ್, ರಾಮಮೂರ್ತಿ, ಮಂಜುನಾಥ್, ಗುಲ್ಲಟ್ಟಿ, ಬೂದಿಕೋಟೆ ಹೋಬಳಿ ಅಧ್ಯಕ್ಷ ನಾಗಯ್ಯ, ಮಂಜುನಾಥ್, ಸಂಪಂಗಿ, ವೆಂಕಟೇಶ್, ಉದಯ್, ಕೃಷ್ಣಪ್ಪ, ಮುನಿಕೃಷ್ಣ, ನರಸಿಂಹ, ಮುನಿಯಪ್ಪ, ನಾರಾಯಣಪ್ಪ, ವೆಂಕಟಪ್ಪ, ದಿನೇಶ್ರಾವ್, ಬಸಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT