ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋಲಾರ: ಆಡಳಿತದಲ್ಲಿ ಕನ್ನಡ ಭಾಷೆ ಬಳಕೆ ಕಡ್ಡಾಯ

ಅಧಿಕಾರಿಗಳಿಗೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ನಾಗಾಭರಣ ಸೂಚನೆ
Last Updated 8 ಏಪ್ರಿಲ್ 2021, 14:03 IST
ಅಕ್ಷರ ಗಾತ್ರ

ಕೋಲಾರ: ‘ಭಾಷೆಯು ಸಂವಹನ ವಸ್ತು. ಭಾಷಾ ಜ್ಞಾನವಿಲ್ಲದಿದ್ದರೆ ಸಂವಹನ ಅಸಾಧ್ಯ. ರಾಜ್ಯದ ಮಾತೃ ಭಾಷೆಯೇ ಆಡಳಿತ ಭಾಷೆ ಆಗಿರಬೇಕು. ಆಡಳಿತದಲ್ಲಿ ಕಡ್ಡಾಯವಾಗಿ ಕನ್ನಡ ಭಾಷೆ ಬಳಕೆಯಾಗಬೇಕು’ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್.ನಾಗಾಭರಣ ಅಧಿಕಾರಿಗಳಿಗೆ ಸೂಚಿಸಿದರು.

ಇಲ್ಲಿ ಗುರುವಾರ ನಡೆದ ಕನ್ನಡ ಅನುಷ್ಠಾನದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿ, ‘ಎಲ್ಲಾ ಅಂಗಡಿಗಳ ನಾಮಫಲಕಗಳಲ್ಲಿ ಮೊದಲು ಕನ್ನಡ ಭಾಷೆ ಇರಬೇಕು. ನಂತರ ಇತರೆ ಭಾಷೆ ಇರಬಹುದು’ ಎಂದು ತಿಳಿಸಿದರು.

‘ರಾಜ್ಯದಲ್ಲಿ ಫೆಬ್ರುವರಿ ತಿಂಗಳಲ್ಲಿ ನಾಮಫಲಕ ಅಭಿಯಾನ ಆರಂಭಿಸಲಾಯಿತು. ಬ್ಯಾಂಕ್‌ ಚಲನ್‌ಗಳಲ್ಲಿ ಹಾಗೂ ಎಟಿಎಂಗಳಲ್ಲಿ ಕನ್ನಡ ಭಾಷೆ ಬಳಸುವಂತೆ ಮಾಡಲಾಗಿದೆ. ಏ.24ರಂದು ರಾಜ್‌ಕುಮಾರ್‌ ಹುಟ್ಟು ಹಬ್ಬದ ದಿನ ಅಭಿಮಾನಿ ದಿನ ಅಭಿಯಾನ ಆಚರಿಸಲಾಗುತ್ತದೆ. ಗ್ರಾಹಕರ ಬಳಕೆಯಲ್ಲಿ ಕನ್ನಡ ಅಭಿಯಾನ ದಿನ ಆಚರಿಸಲಾಗುತ್ತದೆ. ಮೇ 1ರಂದು ಕಾರ್ಮಿಕರಲ್ಲಿ ಕನ್ನಡ ಬಳಕೆ, ಜೂನ್ 1ರಂದು ವ್ಯೆದ್ಯರಲ್ಲಿ ಕನ್ನಡ ಬಳಕೆ ಅಭಿಯಾನ ನಡೆಸಲಾಗುತ್ತದೆ’ ಎಂದರು.

‘ಕರ್ನಾಟಕದಲ್ಲಿ ಕನ್ನಡವೇ ಸಾರ್ವಭೌಮ ಭಾಷೆಯಾಗಬೇಕು. ಗಡಿನಾಡು, ಹೊರನಾಡು ಎನ್ನದೆ ಎಲ್ಲಾ ಕಡೆ ಕನ್ನಡ ಬಳಕೆಯಾಗಬೇಕು. ಪ್ರಾಧಿಕಾರ ಕನ್ನಡ ಉಳಿಸಿ ಬೆಳೆಸುವ ಕಾರ್ಯ ಮಾಡುತ್ತಿದೆ. ಮುಖ್ಯಮಂತ್ರಿಗಳು ಈ ವರ್ಷ ಕನ್ನಡ ಕಾಯಕ ವರ್ಷವೆಂಬ ಘೋಷವಾಕ್ಯ ಘೋಷಿಸಿದ್ದಾರೆ’ ಎಂದು ಪ್ರಾಧಿಕಾರದ ಕಾರ್ಯದರ್ಶಿ ಗವಿಸಿದ್ದಯ್ಯ ಹೇಳಿದರು.

‘ಆಡಳಿತದಲ್ಲಿ ಕಡ್ಡಾಯವಾಗಿ ಕನ್ನಡ ಭಾಷೆ ಬಳಕೆ ಮಾಡಬೇಕು. ಪ್ರತಿ ಇಲಾಖೆಯ ಅಂತರ್ಜಾಲ ತಾಣದಲ್ಲಿ ಕನ್ನಡ ಇರಬೇಕು. ಜಿಲ್ಲೆಯಾದ್ಯಂತ ಎಲ್ಲಾ ಅಂಗಡಿಗಳ ನಾಮಫಲಕಗಳು ಕನ್ನಡದಲ್ಲಿರಬೇಕು, ಇಲ್ಲದಿದ್ದರೆ ವಾಣಿಜ್ಯ ಪರವಾನಗಿ ರದ್ದುಪಡಿಸಬೇಕು ಅಥವಾ ಅಂಗಡಿ ಮಾಲೀಕರಿಗೆ ₹ 500 ದಂಡ ವಿಧಿಸಬೇಕು. ಸರ್ಕಾರಿ ಕಚೇರಿಗಳಲ್ಲಿನ ಹೊರಗುತ್ತಿಗೆಯ ಗ್ರೂಪ್ ಸಿ ಹಾಗೂ ಡಿ ಗುಂಪಿನ ನೌಕರರು ಕಡ್ಡಾಯವಾಗಿ ಸ್ಥಳೀಯರೇ ಇರಬೇಕು’ ಎಂದು ಸೂಚನೆ ನೀಡಿದರು.

ಸ್ಥಳೀಯರಿಗೆ ಉದ್ಯೋಗ: ‘ಕೆಲ ಅಂಗಡಿಗಳ ನಾಮಫಲಕಗಳಲ್ಲಿ ಕನ್ನಡವನ್ನು ಚಿಕ್ಕದಾಗಿ ಹಾಕಿ, ಇತರೆ ಭಾಷೆಯನ್ನು ದೊಡ್ಡದಾಗಿ ಬಳಸಲಾಗಿದೆ. ಇದನ್ನು ಬದಲಾಯಿಸಿ ಕನ್ನಡದಲ್ಲಿ ನಾಮಫಲಕ ದೊಡ್ಡದಾಗಿರಬೇಕು. ಜಿಲ್ಲೆಯ ಕೈಗಾರಿಕೆಗಳಲ್ಲಿ ಸ್ಥಳೀಯರಿಗೆ ಉದ್ಯೋಗ ನೀಡುವಂತೆ ಸೂಚಿಸಲಾಗಿದೆ. ಗ್ರೂಪ್‌ ಡಿ ಹುದ್ದೆಗಳಲ್ಲಿ ಶೇ 100ರಷ್ಟು ಹುದ್ದೆಗಳನ್ನು ಸ್ಥಳೀಯರಿಗೆ ಮೀಸಲಿಡುವಂತೆ ತಿಳಿಸಲಾಗಿದೆ’ ಎಂದು ಜಿಲ್ಲಾಧಿಕಾರಿ ಆರ್.ಸೆಲ್ವಮಣಿ ವಿವರಿಸಿದರು.

‘ಜಿಲ್ಲೆಯ ಗಡಿ ಭಾಗದಲ್ಲೂ ಕನ್ನಡ ಸರ್ಕಾರಿ ಶಾಲೆಗಳಿವೆ. ಗಡಿ ಭಾಗದಲ್ಲಿ ಕನ್ನಡ ಭಾಷೆಯ ಬಳಕೆಗೆ ಹೆಚ್ಚು ಒತ್ತು ನೀಡಲಾಗುತ್ತಿದೆ’ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಎನ್.ಎಂ.ನಾಗರಾಜ್‌ ಹೇಳಿದರು.

ಕೆಜಿಎಫ್ ಪೊಲೀಸ್ ಜಿಲ್ಲಾ ವರಿಷ್ಠಾಧಿಕಾರಿ ಇಲಕ್ಕಿಯಾ ಕರುಣಾಗರನ್, ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿ ಜಾಹ್ನವಿ, ಉಪ ವಿಭಾಗಾಧಿಕಾರಿ ಸೋಮಶೇಖರ್, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ವೀರಶೆಟ್ಟಿ, ಸದಸ್ಯ ಕಿಶೋರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯ ನಿರ್ದೇಶಕ ರವಿಕುಮಾರ್‌ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT