ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಟ ಕೊಡುತ್ತಿದ್ದ ಕೋತಿಗಳನ್ನು ಹಿಡಿದು ಅರಣ್ಯಕ್ಕೆ ಬಿಟ್ಟ ಗ್ರಾಮಸ್ಥರು!

ತೊಟ್ಲಿ ಗ್ರಾಮಸ್ಥರಿಗೆ ತೊಂದರೆ; ಆಂಧ್ರದ ಅರಣ್ಯ ಪ್ರದೇಶಕ್ಕೆ 43 ಮಂಗಗಳ ರವಾನೆ
Last Updated 14 ಜನವರಿ 2023, 2:31 IST
ಅಕ್ಷರ ಗಾತ್ರ

ಕೋಲಾರ: ತಾಲ್ಲೂಕಿನ ತೊಟ್ಲಿ ಗ್ರಾಮಸ್ಥರು ಕೋತಿ ಕಾಟ ತಾಳಲಾರದೆ ತಾವೇ ಹಣ ಸಂಗ್ರಹಿಸಿ 43 ಕೋತಿಗಳನ್ನು ಹಿಡಿದು ಟೆಂಪೊದಲ್ಲಿ ಆಂಧ್ರ ಪ್ರದೇಶದ ಗಡಿ ಅರಣ್ಯ ಪ್ರದೇಶಕ್ಕೆ ಬಿಟ್ಟುಬಂದಿದ್ದಾರೆ.

ಹಲವಾರು ದಿನಗಳಿಂದ ಕೋತಿಗಳು ಬೆಳೆ ನಾಶ ಮಾಡುವುದು, ಗ್ರಾಮದ ಮನೆಗಳಿಗೆ ನುಗ್ಗಿ ಸಿಕ್ಕಿದ ವಸ್ತುಗಳನ್ನು ಬಾಚಿಕೊಂಡು ಹೋಗುತ್ತಿದ್ದವು. ಇದರಿಂದ ಗ್ರಾಮದ ಜನ ಬೇಸತ್ತು ಹೋಗಿದ್ದರು.

‘ಕೋತಿ ಹಾವಳಿಗೆ ಕಡಿವಾಣ ಹಾಕುವಂತೆ ಗ್ರಾಮ ಪಂಚಾಯಿತಿ ಹಾಗೂ ಅರಣ್ಯ ಇಲಾಖೆಯ ವಲಯ ಅಧಿಕಾರಿಗೆ ಗ್ರಾಮಸ್ಥರೆಲ್ಲಾ ಸೇರಿ ಕಳೆದ ವರ್ಷ ಸೆಪ್ಟೆಂಬರ್‌ 9ರಂದು ಪತ್ರ ಬರೆದಿದ್ದೆವು. ಅಲ್ಲದೇ, ಪಂಚಾಯಿತಿಯವರು ಅರಣ್ಯ ಇಲಾಖೆಗೆ ಪತ್ರ ರವಾನಿಸಿದ್ದರು. ಆದರೆ, ಊರಿನೊಳಗಿನ ಮಂಗಗಳ ಗಲಾಟೆ ವಿಚಾರ ತಮ್ಮ ವ್ಯಾಪ್ತಿಗೆ ಬರುವುದಿಲ್ಲವೆಂದು ಅರಣ್ಯ ಇಲಾಖೆಯವರು ಗ್ರಾಮ ಪಂಚಾಯಿತಿ ನಿರ್ಧಾರಕ್ಕೆ ಬಿಟ್ಟಿದ್ದರು. ಪಂಚಾಯಿತಿಯವರು ತಮ್ಮ ಬಳಿ ಹಣ ಇಲ್ಲವೆಂದು ನುಣುಚಿಕೊಂಡರು. ಹೀಗಾಗಿ, ಊರಿನವರೇ ಹಣ ಖರ್ಚು ಮಾಡಿ ಕೋತಿಗಳನ್ನು ಬಿಟ್ಟು ಬಂದಿದ್ದೇವೆ’ ಎಂದು ತೊಟ್ಲಿ ಗ್ರಾಮಸ್ಥರು ಹೇಳಿದರು.

ಶ್ರೀನಿವಾಸಪುರದ ರಾಯಲ್ಪಾಡುವಿನ ಕೋತಿ ಹಿಡಿಯುವ ಪರಿಣತರನ್ನು ಈ ಕೆಲಸಕ್ಕೆ ಬಳಸಿಕೊಂಡಿದ್ದಾರೆ. ಕಬ್ಬಿಣದ ಮೆಸ್‌ನ ಬೋನಿನಲ್ಲಿ ಹಾಕಿ ಟೆಂಪೊ ಮೂಲಕ ರಾತ್ರೋರಾತ್ರಿ ಆಂಧ್ರದ ಗಡಿ ಭಾಗದ ಅರಣ್ಯ ಪ್ರದೇಶದಲ್ಲಿ ಬಿಟ್ಟುಬಂದಿದ್ದಾರೆ. ಬಾಳೆಹಣ್ಣು, ಕಡಲೆ ಕಾಯಿ ಹಾಕಿ 43 ಕೋತಿಗಳನ್ನು ಬೋನಿಗೆ ತುಂಬಿಸಿಕೊಂಡಿದ್ದಾರೆ. ಒಂದು ಕೋತಿ ತಪ್ಪಿಸಿಕೊಂಡು ಹೋಗಿದೆ. ಅದಕ್ಕಾಗಿ ₹ 10 ಸಾವಿ ಖರ್ಚು ಮಾಡಿದ್ದಾರೆ.

‘ಕೋತಿಗಳ ಕಾಟದಿಂತ ತುಂಬಾ ತೊಂದರೆ ಆಗುತಿತ್ತು. ಜಮೀನಿನಲ್ಲಿ ಏನು ಬೆಳೆದರೂ ಬಿಡುತ್ತಿರಲಿಲ್ಲ, ಬೆಳೆ ನಾಶ ಮಾಡುತ್ತಿದ್ದವು. ಊರಿಗೆ ನುಗ್ಗಿ ಕೈಸಿಕ್ಕಿದ ವಸ್ತುಗಳನ್ನು ತೆಗೆದುಕೊಂಡು ಹೋಗುತ್ತಿದ್ದವು. ಕಿಟಕಿ, ಬಾಗಿಲ ಬಳಿ ಇಟ್ಟಿದ ದವಸಧಾನ್ಯ, ಆಹಾರವನ್ನು ಚೆಲ್ಲಾಪಿಲ್ಲಿ ಮಾಡುತ್ತಿದ್ದವು. ಶಾಲೆಗೆ ತೆರಳುವ ಮಕ್ಕಳಿಗೂ ಕಾಟ ಕೊಡುತ್ತಿದ್ದವು’ ಎಂದು ತೊಟ್ಲಿ ಗ್ರಾಮದ ಟಿ.ವಿ.ರಮೇಶ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT