ಕೋಲಾರ: ನಗರದ ಗಲ್‌ಪೇಟೆ ಪೊಲೀಸರು ಕಾರ್ಯಾಚರಣೆಯಲ್ಲಿ ದ್ವಿಚಕ್ರ ವಾಹನ ಹಾಗೂ ಮೊಬೈಲ್ ಕಳ್ಳರಿಬ್ಬರನ್ನು ಬಂಧಿಸಿ ಅವರಿಂದ ₹ 30 ಲಕ್ಷ ಮೌಲ್ಯದ 30 ವಿವಿಧ ಮಾದರಿ ದ್ವಿಚಕ್ರ ವಾಹನಗಳು ಹಾಗೂ ₹ 3 ಲಕ್ಷ ಮೌಲ್ಯದ 50 ಮೊಬೈಲ್‍ಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ನಾರಾಯಣ ತಿಳಿಸಿದರು.
‘ಕೋಲಾರ ನಗರದ ಕಾರಂಜಿಕಟ್ಟೆಯ ಸಂಜಯ್ ಜಯಚಂದ್ರನ್, ನಗರದ ಕುಂಬಾರಪೇಟೆಯ ನದೀಂ, ನಗರದ ಕ್ಲಾಕ್ ಟವರ್‌ನ ದರ್ಗಾ ಮೊಹಲ್ಲಾ ವಾಸಿ ಸೈಯದ್ ಇಮ್ರಾನ್ ಎಂಬ ಮೂವರನ್ನು ಬಂಧಿಸಲಾಗಿದೆ’ ಎಂದರು.
‘ಚೋರರ ಪತ್ತೆಗೆ ವಿಶೇಷ ತಂಡ ಯತ್ನಿಸುತ್ತಿರುವಾಗಲೇ ಗಸ್ತಿನಲ್ಲಿದ್ದ ಸಂದರ್ಭದಲ್ಲಿ ನಗರದ ಆರ್.ಜಿ.ಬಡಾವಣೆಯ ಕಡೆ ಯಾರೋ ಇಬ್ಬರು ವ್ಯಕ್ತಿಗಳು ಒಂದು ನಂಬರ್ ಪ್ಲೇಟ್ ಇಲ್ಲದ ಹೋಂಡಾ ಡಿಯೋದಲ್ಲಿ ಪೊಲೀಸರನ್ನು ನೋಡಿ ಪರಾರಿಯಾಗಲು ಯತ್ನಿಸಿದಾಗ ಪೊಲೀಸರು ಅವರನ್ನು ಹಿಡಿದು ವಿಚಾರಣೆ ನಡೆಸಿದಾಗ ಈ ಪ್ರಕರಣ ಬೆಳಕಿಗೆ ಬಂದಿದೆ’ ಎಂದು ತಿಳಿಸಿದರು.
‘ವಿಚಾರಣೆಗೆ ಒಳಪಡಿಸಿದಾಗ ಆರೋಪಿಗಳಿಬ್ಬರು ನಗರದ ಕ್ಲಾಕ್ ಟವರ್‌ನ ದರ್ಗಾ ಮೊಹಲ್ಲಾ ವಾಸಿ ಸೈಯದ್ ಇಮ್ರಾನ್ ಎಂಬಾತನ ಜೊತೆ ಸೇರಿಕೊಂಡು ಗಲ್‌ಪೇಟೆ, ಕೋಲಾರ ನಗರ, ಕೋಲಾರ ಗ್ರಾಮಾಂತರ, ಬೆಂಗಳೂರು ನಗರದ ಶಿವಾಜಿನಗರ, ಸಂಪಿಗೆಹಳ್ಳಿ, ಕೆ.ಆರ್.ಪುರಂ, ಗೋವಿಂದರಾಜನಗರ, ಭರತ್ ನಗರ, ಹೊಸಕೋಟೆ ಮುಂತಾದ ಠಾಣೆಗಳ ಸರಹದ್ದಿನಲ್ಲಿ 30 ದ್ವಿಚಕ್ರ ವಾಹನಗಳು, 50 ಮೊಬೈಲ್ ಕದ್ದಿರುವುದಾಗಿ ಒಪ್ಪಿಕೊಂಡಿದ್ದು, ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಎಲ್ಲಾ ದುಬಾರಿ ಮೌಲ್ಯದ ಮೊಬೈಲ್‌ಗಳು’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.