ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ವಯಂ ಉದ್ಯೋಗದಿಂದ ನೆಮ್ಮದಿ

Last Updated 12 ನವೆಂಬರ್ 2019, 19:45 IST
ಅಕ್ಷರ ಗಾತ್ರ

ಕೋಲಾರ: ‘ಬೇರೊಬ್ಬರ ಕೈ ಕೆಳಗೆ ಕೆಲಸ ಮಾಡುವುದಕ್ಕಿಂತ ಸ್ವಯಂ ಉದ್ಯೋಗದಿಂದ ನೆಮ್ಮದಿಯ ಜೀವನ ನಡೆಸಬಹುದು’ ಎಂದು ಜಿಲ್ಲಾ ಉಪ ಕಾರಾಗೃಹದ ಸೂಪರಿಂಟೆಂಡೆಂಟ್‌ ಮೋಹನ್‌ಕುಮಾರ್ ಅಭಿಪ್ರಾಯಪಟ್ಟರು.

ಸಿ.ಸಿ ಕ್ಯಾಮೆರಾ ಅಳವಡಿಕೆಯ ತರಬೇತಿ ಪಡೆದ ಶಿಬಿರಾರ್ಥಿಗಳಿಗೆ ಇಲ್ಲಿನ ಕೆನರಾ ಬ್ಯಾಂಕ್ ಗ್ರಾಮೀಣ ಕೈಗಾರಿಕಾ ಸ್ವಯಂ ಉದ್ಯೋಗ ತರಬೇತಿ ಸಂಸ್ಥೆಯಲ್ಲಿ ಮಂಗಳವಾರ ಪ್ರಮಾಣಪತ್ರ ವಿತರಿಸಿ ಮಾತನಾಡಿ, ‘ಪದವಿ ಪಡೆದರೂ ಉದ್ಯೋಗಕ್ಕಾಗಿ ಅಲೆದಾಡುವ ಪರಿಸ್ಥಿತಿಯಿದೆ. ಶಿಕ್ಷಣಕ್ಕೆ ತಕ್ಕಂತೆ ಉದ್ಯೋಗ ಸಿಗುವುದು ಕಷ್ಟವಾಗಿದ್ದು, ಸ್ವಉದ್ಯೋಗದ ಮೂಲಕ ಇತರರಿಗೂ ಉದ್ಯೋಗಾವಕಾಶ ಕಲ್ಪಿಸಬೇಕು’ ಎಂದರು.

‘ಸುರಕ್ಷತೆ ದೃಷ್ಟಿಯಿಂದ ಎಲ್ಲೆಡೆ ಸಿ.ಸಿ ಕ್ಯಾಮೆರಾ ಅಳವಡಿಸಲಾಗುತ್ತಿದೆ. ಇದರಿಂದ ಅಪರಾಧ ಕೃತ್ಯಗಳನ್ನು ತಡೆಯಬಹುದು. ಸರ್ಕಾರಿ ಕಚೇರಿಗಳು ಹಾಗೂ ಬ್ಯಾಂಕ್‌ಗಳಲ್ಲಿ ಸಿ.ಸಿ ಕ್ಯಾಮೆರಾ ಬಳಸಲಾಗುತ್ತಿದೆ. ಇದರಿಂದ ಸಿ.ಸಿ ಕ್ಯಾಮೆರಾ ಮಾರಾಟ ಮತ್ತು ಸರ್ವಿಸ್‌ ವೃತ್ತಿಯಲ್ಲಿರುವವರಿಗೆ ವೃತ್ತಿಪರವಾಗಿ ಅನುಕೂಲವಾಗಿದೆ’ ಎಂದು ತಿಳಿಸಿದರು.

‘ಸಿ.ಸಿ ಕ್ಯಾಮೆರಾ ಕ್ಷೇತ್ರದಲ್ಲಿ ಬೆಳೆಯಲು ವ್ಯವಹಾರ ಜ್ಞಾನದ ಜತೆಗೆ ತಾಂತ್ರಿಕ ಜ್ಞಾನ ಹೊಂದಿರಬೇಕು. ದಿನ ಕಳೆದಂತೆ ತಾಂತ್ರಿಕ ವಲಯದಲ್ಲಿ ಸಾಕಷ್ಟು ಬದಲಾವಣೆ ಆಗುತ್ತಿವೆ. ಈ ಬೆಳವಣಿಗೆಗಳು ನಮ್ಮ ಊಹೆಗೂ ಸಿಗುವುದಿಲ್ಲ’ ಎಂದು ಹೇಳಿದರು.

‘ಸ್ವಯಂ ಉದ್ಯೋಗ ಮಾಡಿ ಆರ್ಥಿಕವಾಗಿ ಸಶಕ್ತರಾಗಲು ವಿಪುಲ ಅವಕಾಶಗಳಿವೆ. ಪ್ರಾಮಾಣಿಕತೆ ಹಾಗೂ ಗ್ರಾಹಕರ ಹಿತ ರಕ್ಷಣೆಯ ಭಾವನೆ ಹೊಂದಿದ್ದರೆ ಮಾತ್ರ ಸ್ವಯಂ ಉದ್ಯೋಗದಲ್ಲಿ ಅಧಿಪತ್ಯ ಸಾಧಿಸಲು ಸಾಧ್ಯ’ ಎಂದು ಕಿವಿಮಾತು ಹೇಳಿದರು.

ಸ್ವಉದ್ಯೋಗ ಸೂಕ್ತ: ‘ಕೆಲಸ ಸಿಕ್ಕಿಲ್ಲ ಎಂದು ಸುಮ್ಮನಿರುವ ಬದಲು ಆಸಕ್ತಿ ಕ್ಷೇತ್ರದಲ್ಲಿ ಕೌಶಲ ತರಬೇತಿ ಪಡೆದು ಸ್ವಉದ್ಯೋಗ ಆರಂಭಿಸುವುದು ಸೂಕ್ತ’ ಎಂದು ಕಾರಾಗೃಹ ಇಲಾಖೆ ಅಧಿಕಾರಿ ಹೊಸೂರ್ ಸಲಹೆ ನೀಡಿದರು.

‘ಸಿ.ಸಿ ಕ್ಯಾಮೆರಾ ವಹಿವಾಟು ಮತ್ತು ವೃತ್ತಿಯ ವ್ಯಾಪ್ತಿ ವಿಸ್ತಾರವಾಗಿ ಬೆಳೆಯುತ್ತಿದೆ. ಸಿ.ಸಿ ಕ್ಯಾಮೆರಾ ಆವಿಷ್ಕಾರದ ನಂತರ ಅಪರಾಧ ಚಟುವಟಿಕೆಗ ಪ್ರಮಾಣ ಕಡಿಮೆಯಾಗಿದೆ. ಜತೆಗೆ ಅಪರಾಧಿಗಳ ಪತ್ತೆಗೆ ಸಹಕಾರಿಯಾಗಿದೆ. ಇತ್ತೀಚಿನ ದಿನಗಳಲ್ಲಿ ಈ ವಲಯ ಉದ್ಯಮವಾಗಿ ಬೆಳೆಯುತ್ತಿದೆ’ ಎಂದರು.

‘ತಾಂತ್ರಿಕ ವಲಯದಲ್ಲಿ ನಿಪುಣರಾಗಿರುವವರಿಗೆ ಆರ್ಥಿಕವಾಗಿ ಸದೃಢರಾಗಲು ಸಾಕಷ್ಟು ಅವಕಾಶಗಳಿವೆ’ ಎಂದು ಕೆನರಾ ಬ್ಯಾಂಕ್ ಗ್ರಾಮೀಣ ಕೈಗಾರಿಕಾ ಸ್ವಯಂ ಉದ್ಯೋಗ ತರಬೇತಿ ಸಂಸ್ಥೆ ನಿರ್ದೇಶಕ ರಮಾಕಾಂತ್‌ ಬಿ.ಯಾದವ್‌ ತಿಳಿಸಿದರು.

ಕೆನರಾ ಬ್ಯಾಂಕ್ ತರಬೇತಿ ಸಂಸ್ಥೆ ನಿರ್ದೇಶಕ ಸಿ.ರಾಧಕೃಷ್ಣನ್, ತರಬೇತುದಾರರಾದ ಕೆ.ವಿ.ವಿಜಯ್‌ಕುಮಾರ್, ಎನ್.ಗಿರೀಶ್‌ರೆಡ್ಡಿ, ಎನ್.ವಿ.ನಾರಾಯಣಸ್ವಾಮಿ, ಗುರುರಾಜ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT