ಶನಿವಾರ, ಜೂನ್ 6, 2020
27 °C
ಸಭೆಯಲ್ಲಿ ಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಗೋವಿಂದಗೌಡ ಹೇಳಿಕೆ

ಬೆಳೆ ಸಾಲಕ್ಕೆ ಹಣದ ಕೊರತೆಯಿಲ್ಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋಲಾರ: ‘ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಸರ್ಕಾರ ನಿಗದಿಪಡಿಸಿದ ಗುರಿಗಿಂತಲೂ ಹೆಚ್ಚು ಸುಮಾರು ₹ 62 ಕೋಟಿ ಬೆಳೆ ಸಾಲ ನೀಡಲಾಗಿದ್ದು, ಮತ್ತಷ್ಟು ರೈತರಿಗೆ ಸಾಲ ವಿತರಿಸಲು ಬ್ಯಾಂಕ್ ಸಶಕ್ತವಾಗಿದೆ’ ಎಂದು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಎಂ.ಗೋವಿಂದಗೌಡ ಹೇಳಿದರು.

ಇಲ್ಲಿ ಶನಿವಾರ ನಡೆದ ಬ್ಯಾಂಕ್‌ನ ಆರ್ಥಿಕ ಸ್ಥಿತಿಗತಿಯ ಅವಲೋಕನ ಹಾಗೂ ಬೆಲೆ ಸಾಲ ವಿತರಣೆಗೆ ಕೈಗೊಳ್ಳಬೇಕಾದ ಕ್ರಮಗಳ ಕುರಿತ ಸಭೆಯಲ್ಲಿ ಮಾತನಾಡಿ, ‘ರೈತರು ಮೀಟರ್ ಬಡ್ಡಿ ಸಾಲಕ್ಕೆ ಸಿಲುಕಬಾರದು. ಅವರನ್ನು ಗುರುತಿಸಿ ಮೊದಲ ಆದ್ಯತೆಯಾಗಿ ಸಾಲ ನೀಡುವುದು ಬ್ಯಾಂಕ್‌ನ ಜವಾಬ್ದಾರಿ’ ಎಂದರು.

‘ಬೆಳೆ ಸಾಲ ವಿತರಣೆಗಾಗಿ ಈಗಾಗಲೇ ಗೌರಿಬಿದನೂರು ಶಾಖೆಗೆ ₹ 11 ಕೋಟಿ, ಬಾಗೇಪಲ್ಲಿ ಶಾಖೆಗೆ ₹ 6 ಕೋಟಿ ಸೇರಿದಂತೆ ಎಲ್ಲಾ ಶಾಖೆಗಳಿಗೂ ಅಗತ್ಯ ಹಣ ನೀಡಲಾಗಿದೆ. ಬೆಳೆ ಸಾಲ ನೀಡಲು ಹಣದ ಕೊರತೆಯಿಲ್ಲ. ಫಲಾನುಭವಿಗಳು ಬೆಳೆ ಸಾಲವನ್ನು ನಬಾರ್ಡ್ ಸೂಚನೆಯಂತೆ ರೂಪೇ ಕಾರ್ಡ್ ಮೂಲಕವೇ ಎಟಿಎಂನಲ್ಲಿ ಡ್ರಾ ಮಾಡಿಕೊಳ್ಳಬೇಕು. ಇದರಿಂದ ಭ್ರಷ್ಟಾಚಾರಕ್ಕೆ ಕಡಿವಾಣ ಬೀಳುತ್ತದೆ’ ಎಂದು ಕೋರಿದರು.

‘ಕೆಸಿಸಿ ಸಾಲ ಹಾಗೂ ಸ್ತ್ರೀಶಕ್ತಿ ಸಂಘಗಳಿಗೆ ಸಾಲ ನೀಡಿಕೆಯಲ್ಲಿ ದಾಖಲೆಪತ್ರಗಳು ತಪ್ಪಾಗಿದ್ದರೆ ಅದಕ್ಕೆ ಶಾಖೆ ವ್ಯವಸ್ಥಾಪಕರು ಮತ್ತು ಮೇಲ್ವಿಚಾರಕರೇ ಹೊಣೆ. ಸಿಬ್ಬಂದಿ ಕುಟುಂಬಗಳಿಗೆ ₹ 3 ಲಕ್ಷ ಆರೋಗ್ಯ ವಿಮೆ ನೀಡಿದ್ದೇವೆ. ಬ್ಯಾಂಕ್ ಸಿಬ್ಬಂದಿಗೆ ಅನ್ನ ನೀಡುತ್ತಿದ್ದು, ಅದಕ್ಕೆ ತಕ್ಕಂತೆ ನ್ಯಾಯ ಒದಗಿಸುತ್ತಿದ್ದೇವೆಯೇ ಎಂದು ಆತ್ಮಾವಲೋಕನ ಮಾಡಿಕೊಳ್ಳಿ’ ಎಂದು ತಿಳಿಸಿದರು.

ಕಿರುಕುಳ ಕೊಡಬೇಡಿ: ‘ಸಿಬ್ಬಂದಿ ಬ್ಯಾಂಕ್‌ನಲ್ಲಿ ಕುಳಿತಿದ್ದರೆ ಪ್ರಯೋಜನವಿಲ್ಲ. ರೈತರು, ಮಹಿಳಾ ಸ್ವಸಹಾಯ ಸಂಘಗಳ ಪ್ರತಿನಿಧಿಗಳ ಮನೆಗಳಿಗೆ ಹೋಗಿ ಕಿರುಕುಳ ಕೊಡಬೇಡಿ. ಬ್ಯಾಂಕ್‌ನ ಆರ್ಥಿಕ ಪರಿಸ್ಥಿತಿಯನ್ನು ರೈತರು ಮತ್ತು ಮಹಿಳಾ ಸ್ವಸಹಾಯ ಸಂಘಗಳ ಪ್ರತಿನಿಧಿಗಳಿಗೆ ಮನವರಿಕೆ ಮಾಡಿಕೊಡಿ. ಶಕ್ತಿ ಇದ್ದವರು ಖಂಡಿತ ಲಾಕ್‌ಡೌನ್‌ ಸಂಕಷ್ಟದಲ್ಲೂ ಸಾಲ ಮರುಪಾವತಿಸುತ್ತಾರೆ’ ಎಂದು ಸೂಚಿಸಿದರು.

‘ತನಿಖಾ ತಂಡವು ಸೊಸೈಟಿಗಳಲ್ಲಿ ಸಮರ್ಪಕವಾಗಿ ಪರಿಶೀಲನೆ ನಡೆಸಬೇಕು. ಸೊಸೈಟಿಗಳಲ್ಲಿ ದಾಖಲೆಪತ್ರ ನಿರ್ವಹಣೆಯಲ್ಲಿ ವಿಫಲವಾಗುವ ಸಿಇಒಗಳು ಹಾಗೂ 60 ವರ್ಷ ವಯೋಮಿತಿ ಮೀರಿದವರನ್ನು ಕೆಲಸದಿಂದ ತೆಗೆದು ಹಾಕಲು ಸಲಹೆ ನೀಡಿ. ಗಣಕೀಕರಣ ಪ್ರಕ್ರಿಯೆ ಶೀಘ್ರವೇ ಪೂರ್ಣಗೊಳಿಸಿ ಮುಗಿಸಿ ಆನ್‌ಲೈನ್ ವಹಿವಾಟು ಆರಂಭಿಸಬೇಕು’ ಎಂದು ಸೂಚಿಸಿದರು.

ಸ್ಪಂದಿಸುತ್ತಿಲ್ಲ: ‘ಬ್ಯಾಂಕ್‌ನ ಶಾಖಾ ವ್ಯವಸ್ಥಾಪಕರು ನಿರ್ದೇಶಕರ ಕರೆಗೆ ಸ್ಪಂದಿಸುತ್ತಿಲ್ಲ’ ಎಂದು ಬ್ಯಾಂಕ್‌ನ ನಿರ್ದೇಶಕರಾದ ಸೊಣ್ಣೇಗೌಡ, ಮೋಹನ್‌ರೆಡ್ಡಿ ಮತ್ತು ನಾಗಿರೆಡ್ಡಿ ಅಸಮಾಧಾನ ವ್ಯಕ್ತಪಡಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಗೋವಿಂದಗೌಡರು, ‘ನಿರ್ದೇಶಕರು ಜವಾಬ್ದಾರಿ ಸ್ಥಾನದಲ್ಲಿದ್ದಾರೆ. ಅವರು ಕರೆ ಮಾಡಿದಾಗ ಸ್ಪಂದಿಸಿ ಗೌರವ ನೀಡಿ. ಇಲ್ಲವಾದರೆ ಗಂಭೀರ ಪರಿಣಾಮ ಎದುರಿಸಬೇಕಾದೀತು’ ಎಂದು ಎಚ್ಚರಿಕೆ ನೀಡಿದರು.

ಎಟಿಎಂ ಕಾರ್ಡ್: ‘ಜಿಲ್ಲೆಯ 454 ಹಾಲು ಉತ್ಪಾದಕರ ಸಹಕಾರ ಸಂಘಗಳ ಹಾಲಿನ ಬಟವಾಡೆ ಹಣ ಕೋಚಿಮುಲ್‌ನಿಂದ ಡಿಸಿಸಿ ಬ್ಯಾಂಕ್ ಶಾಖೆಗಳಿಗೆ ಬರುತ್ತಿದೆ. ಈ ಸಂಘಗಳ ಹಾಲು ಉತ್ಪಾದಕ ರೈತರ ಖಾತೆಗಳನ್ನು ಡಿಸಿಸಿ ಬ್ಯಾಂಕ್‌ನಲ್ಲಿ ತೆರೆಸಬೇಕು. ಅವರು ಡಿಸಿಸಿ ಬ್ಯಾಂಕ್‌ನಲ್ಲೇ ವಹಿವಾಟು ನಡೆಸುವಂತೆ ಮಾಡಿ ಎಟಿಎಂ ಕಾರ್ಡ್‌ ವಿತರಿಸಬೇಕು’ ಎಂದು ಸಲಹೆ ನೀಡಿದರು.

ಬ್ಯಾಂಕ್ ನಿರ್ದೇಶಕರಾದ ಸೋಮಣ್ಣ, ಎಂ.ಎಲ್.ಅನಿಲ್‌ಕುಮಾರ್‌, ನಾರಾಯಣರೆಡ್ಡಿ, ವ್ಯವಸ್ಥಾಪಕ ನಿರ್ದೇಶಕ ರವಿ ಹಾಜರಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು