ಕೃಷ್ಣಮೂರ್ತಿ
ಕೆಜಿಎಫ್: ಸಮುದ್ರ ಮಟ್ಟದಿಂದ 2893 ಅಡಿಗಳಷ್ಟು ಮೇಲ್ಮಟ್ಟದಲ್ಲಿದ್ದರೂ ನಗರದ ಹಲವು ಪ್ರದೇಶದಲ್ಲಿ ವರ್ಷವಿಡೀ ನೀರಿನ ಚಿಲುಮೆ ಎದ್ದು ಕಾಣುತ್ತದೆ.
ಪ್ರಮುಖವಾಗಿ ಕೃಷ್ಣಾವರ ಬಳಿಯ ತಗ್ಗು ಪ್ರದೇಶ ಸದಾ ಹಸಿರಿನಿಂದ ಕಂಗೊಳಿಸುತ್ತದೆ. ಅಲ್ಲದೆ, ಬಿಜಿಎಂಎಲ್ ನಿರ್ಮಾಣ ಮಾಡಿದ್ದ ಸಿಂಕ್‌ನಿಂದ ಸದಾ ನೀರು ಭೂಮಿಯಿಂದ ಸುಮಾರು ಇಪ್ಪತ್ತು ಅಡಿಗಳಷ್ಟು ಆಳದಲ್ಲಿ ಸಿಗುತ್ತದೆ. ಎಷ್ಟು ನೀರು ತೆಗೆದರೂ ಈ ಸಿಂಕ್‌ನಲ್ಲಿ ನೀರು ಬತ್ತುವುದಿಲ್ಲ. ಬೇಸಿಗೆಯಲ್ಲಿ ನೀರು ಸ್ವಲ್ಪ ಕೆಳಕ್ಕೆ ಹೋಗಿ ನಂತರ ತನ್ನ ಮಟ್ಟಕ್ಕೆ ಬಂದು ಯಥಾಸ್ಥಿತಿಗೆ ತಲುಪುತ್ತದೆ. ಮಳೆಗಾಲದಲ್ಲಿ ಮಾತ್ರ ನೀರು ಅಕ್ಷಯಪಾತ್ರೆ ಇದ್ದ ರೀತಿಯಲ್ಲಿ ಇರುತ್ತದೆ.
ಕೃಷ್ಣಾವರಂ ಬಳಿಯ ಈ ಪ್ರದೇಶದಲ್ಲಿ ಕೃಷ್ಣಮೃಗಗಳು ಅಪಾರ ಸಂಖ್ಯೆಯಲ್ಲಿದೆ. ಬೇಸಿಗೆಯಲ್ಲಿ ಕುಡಿಯುವ ನೀರಿಗೆ ಅರಿಸಿ ಇಲ್ಲಿಯವರೆವಿಗೂ ಬರುತ್ತವೆ.
ನಗರಸಭೆಯಿಂದ ಬೃಹತ್ ನೆಲಮಟ್ಟದ ಟ್ಯಾಂಕ್ ಕಟ್ಟಿಸಿ ಅದರ ಮೂಲಕ ನಗರ ಪ್ರದೇಶಕ್ಕೆ ನೀರು ಸರಬರಾಜು ಮಾಡುವ ಪ್ರಕ್ರಿಯೆ ಮೊದಲು ನಡೆಸಲಾಗಿತ್ತು. ಆದರೆ, ಕಾರಣಾಂತರಗಳಿಂದ ಚಾಲು ಆಗಿದ್ದ ಯೋಜನೆ ಸ್ಥಗಿತಗೊಂಡಿತು. ಈಗಾಗಲೇ ಜಲಮಂಡಳಿಯು ಕೆಲ ಕೊಳವೆ ಬಾವಿಗಳನ್ನು ಇಲ್ಲಿ ಕೊರೆದು ಅದರ ಮೂಲಕ ಊರಿಗಾಂ, ಕೋರಮಂಡಲ್ ಮೊದಲಾದ ಪ್ರದೇಶಗಳಿಗೆ ನೀರನ್ನು ನೀಡುತ್ತಿದೆ.
ಬಿಜಿಎಂಎಲ್ ನಿರ್ಮಾಣ ಮಾಡಿದ ಸಿಂಕ್ ನೀರಿನ ಕಣಜವಾಗಿದೆ. ಬೆಮಲ್ ಸಂಸ್ಥೆ ಈ ನೀರನ್ನು ಟ್ರಾಕ್ಟರ್ ಮೂಲಕ ಪ್ರತಿನಿತ್ಯ ಸಾಗಿಸುತ್ತಿದೆ. ಅದಕ್ಕೆ ಸುತ್ತಲೂ ಬೇಲಿ ಹಾಕಿ, ಜಾಗೃತೆಯಿಂದ ಸ್ಥಳವನ್ನು ಕಾಪಾಡುತ್ತಿದೆ. ಆದರೆ, ಇದು ಗಣಿಯೊಳಗಿನ ನೀರಾಗಿರುವುದರಿಂದ ವಿಷಕಾರಕ ಅಂಶಗಳು ಇರಬಹುದು ಎಂಬ ಆತಂಕದಿಂದ ನೀರನ್ನು ಕುಡಿಯಲು ಉಪಯೋಗಿಸುತ್ತಿಲ್ಲ. ಸಿಂಕ್‌ನಲ್ಲಿ ಎಂದೂ ನೀರು ಬತ್ತುವುದಿಲ್ಲ ಎಂಬ ನಂಬಿಕೆಯಿಂದ ಹಿಂದಿನ ಜಿಲ್ಲಾಧಿಕಾರಿ ಮನೋಜ್ ಕುಮಾರ್ ಮೀನಾ ನೀರನ್ನು ಸದ್ಭಳಕೆ ಮಾಡಿಕೊಳ್ಳಲು ಯೋಜನೆ ರೂಪಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದರು. ಆದರೆ, ಅವರ ವರ್ಗಾವಣೆಯ ನಂತರ ಯೋಜನೆ ನೆನೆಗುದಿಗೆ ಬಿದ್ದಿದೆ.
ಈ ಪ್ರದೇಶ ಪಾಲಾರ್ ಮುಖಜ ಭೂಮಿಯಾಗಿದೆ. ನೀರಿನ ಒಳಹರಿವು ಸಹಜವಾಗಿ ಹರಿಯುತ್ತದೆ. ಗಣಿಯೊಳಗೆ ಇರುವ ಕೆಟ್ಟ ಗಾಳಿ ಹೊರ ಬರಲು ಇಲ್ಲವೇ ಅಪಘಾತವಾಗುವ ಸಂಭವ ಬಂದಾಗ ಕಾರ್ಮಿಕರು ತುರ್ತಾಗಿ ಬರಲು ಇಂತಹ ಸಿಂಕ್ ನಿರ್ಮಾಣ ಮಾಡುತ್ತಿದ್ದರು. ಪಾಲಾರ್ ಮುಖಜ ಭೂಮಿಯಲ್ಲಿ ಚಿನ್ನ ಇದ್ದರೂ ಅತಿಯಾದ ನೀರಿನ ಹರಿವಿನಿಂದಾಗಿ ಗಣಿಗಾರಿಕೆ ಈ ಪ್ರದೇಶದಲ್ಲಿ ನಡೆದಿಲ್ಲ ಎಂಬುದು ಭೂ ವಿಜ್ಞಾನಿ ನಾಗರಾಜ್ ಅವರ ಮಾತಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.