ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಕ್ತದಾನದಿಂದ ಅಡ್ಡ ಪರಿಣಾಮ ಬೀರಲ್ಲ

Last Updated 6 ಅಕ್ಟೋಬರ್ 2019, 13:50 IST
ಅಕ್ಷರ ಗಾತ್ರ

ಕೋಲಾರ: ‘ರಕ್ತದಾನ ಮಾಡುವುದರಿಂದ ಆರೋಗ್ಯದ ಮೇಲೆ ಯಾವುದೇ ರೀತಿ ಅಡ್ಡ ಪರಿಣಾಮ ಬೀರುವುದಿಲ್ಲ’ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಚ್.ವಿ.ದರ್ಶನ್ ತಿಳಿಸಿದರು.

ನಗರ ಹೊರವಲಯದಲ್ಲಿನ ಎಸ್‌ಡಿಸಿ ಕಾಲೇಜಿನಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಶುಕ್ರವಾರ ಹಮ್ಮಿಕೊಂಡಿದ್ದ ರಾಷ್ಟ್ರೀಯ ಸ್ವಯಂ ಪ್ರೇರಿತ ರಕ್ತದಾನ ದಿನಾಚರಣೆಗೆ ಚಾಲನೆ ನೀಡಿ ಮಾತನಾಡಿ, ‘ಯುವಕರು ರಕ್ತದಾನ ಮಹತ್ವದ ಬಗ್ಗೆ ಅರಿಯ ಬೇಕು. ವರ್ಷಕ್ಕೆ 2 ಬಾರಿಯಾದರೂ ರಕ್ತದಾನ ಮಾಡಿ ಆರೋಗ್ಯವಂತರಾಗಬೇಕು’ ಎಂದು ಸಲಹೆ ನೀಡಿದರು.

‘ಮನುಷ್ಯನು ರಕ್ತ ನೀಡುವುದರಿಂದ ಸಣ್ಣಗಾಗುತ್ತಾನೆ ಎಂಬ ತಪ್ಪು ಭಾವನೆ ಬಿಡಬೇಕು. ರಕ್ತದಾನದಿಂದ ಯಾವುದೇ ರೀತಿಯ ಅಡ್ಡ ಪರಿಣಾಮಗಳು ಆಗುವುದಿಲ್ಲ. ಅಷ್ಟೇ ಅಲ್ಲದೆ ಉತ್ತಮ ಆರೋಗ್ಯ ದೊರೆಯುತ್ತದೆ. ಅದರಂತೆ ನಾನು ಸಹ ಸುಮಾರು 12 ರಿಂದ 13 ಬಾರಿ ರಕ್ತದಾನ ಮಾಡಿದ್ದೇನೆ’ ಎಂದು ಹೇಳಿದರು.

‘ರಕ್ತದಾನ ಮಾಡುವುದರಿಂದ ಒಂದು ಜೀವವನ್ನು ಉಳಿಸಲು ಸಾಧ್ಯ. ನಾವು ಉಳಿಸಿದ ಜೀವವು ಸಾಕಷ್ಟು ಜೀವಗಳನ್ನು ಉಳಿಸುತ್ತದೆ. ಕಾಣದ ಕುಟುಂಬಕ್ಕೆ ನಾವು ಮಾಡುವ ರಕ್ತದಾನದಿಂದ ಉಪಯೋಗವಾಗುತ್ತದೆ. ಹಾಗಾಗಿ ಎಲ್ಲರೂ ರಕ್ತದಾನ ಮಾಡಲು ಪಣ ತೊಡಬೇಕು’ ಎಂದು ಸಲಹೆ ನೀಡಿದರು.

‘ರಕ್ತದಾನದ ರೀತಿಯಲ್ಲಿ ನೇತ್ರದಾನದ ಬಗ್ಗೆಯೂ ಜಾಗೃತಿ ಮೂಡಿಸುವ ಕೆಲಸ ಆಗಬೇಕು. ಅಂಕಿ ಅಂಶಗಳ ಪ್ರಕಾರ ದೇಶದಲ್ಲಿ ನಿಧನರಾಗುತ್ತಿರುವವರಲ್ಲಿ ಶೇ.15 ರಿಂದ 20 ರಷ್ಟು ಮಂದಿ ನೇತ್ರದಾನ ಮಾಡಿದ್ದೇ. ಆದರೆ ದೇಶದಲ್ಲಿ ಯಾರೊಬ್ಬರೂ ಸಹ ಕುರುಡರು ಇರುವುದಿಲ್ಲ. ಹಾಗಾಗಿ ನೇತ್ರದಾನದ ಬಗ್ಗೆ ಜನರಿಗೆ ಅರಿವು ಮೂಡಿಸಬೇಕು’ ಎಂದು ತಿಳಿಸಿದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ವಿಜಯ್ ಕುಮಾರ್ ಮಾತನಾಡಿ, ‘ಜಿಲ್ಲೆಯಲ್ಲಿ ಪ್ರತಿ ವರ್ಷ ಸುಮಾರು 16 ಸಾವಿರ ಯುನಿಟ್ ರಕ್ತದ ಅವಶ್ಯಕತೆ ಇದೆ. ಇದೀಗ 11 ರಿಂದ 12 ಸಾವಿರ ಯುನಿಟ್ ರಕ್ತ ಸಂಗ್ರಹಣೆ ಆಗುತ್ತಿದ್ದು ಇನ್ನೂ 4 ರಿಂದ 5 ಸಾವಿರ ಯುನಿಟ್ ರಕ್ತ ಕೊರತೆ ಎದುರಾಗುತ್ತಿದೆ’ ಎಂದು ಹೇಳಿದರು.

ಜಿಲ್ಲಾ ಏಡ್ಸ್ ಮತ್ತು ಕ್ಷಯ ರೋಗ ನಿಯಂತ್ರಣಾಧಿಕಾರಿ ಡಾ.ಜಗದೀಶ್ ಮಾತನಾಡಿ, ‘ಸ್ವಯಂ ಪ್ರೇರಿತ ರಕ್ತದಾನ ದೇಶದಲ್ಲಿ 1975ರಿಂದ ಆರಂಭವಾಗಿದೆ. ದೇಶದ ಒಟ್ಟು ಜನಸಂಖ್ಯೆಯಲ್ಲಿ ಶೇ.1 ರಷ್ಟು ಮಂದಿಗೆ ರಕ್ತದ ಅವಶ್ಯಕತೆ ಇದೆ’ ಎಂದರು.

‘ಒಬ್ಬ ವ್ಯಕ್ತಿಯು ರಕ್ತದಾನ ಮಾಡುವುದರಿಂದ 4 ಜನರ ಪ್ರಾಣ ಉಳಿಸಬಹುದು. 350 ರಿಂದ 450 ಎಂಎಲ್ ರಕ್ತ ತೆಗೆದುಕೊಳ್ಳಬಹುದು. ಇದರಿಂದ ವ್ಯಕ್ತಿಯು ಚುರುಕುಗೊಳ್ಳುವುದೇ ಅಲ್ಲದೆ ಹೃದಯಾಘಾತ ಕಡಿಮೆಯಾಗುತ್ತವೆ. ಈ ಕುರಿತು ಯುವಕರಲ್ಲಿ ಜಾಗೃತಿ ಮೂಡಿಸಲಾಗುವುದು’ ಎಂದು ಹೇಳಿದರು.ಎಸ್‌ಡಿಸಿ ಕಾಲೇಜಿನ ಕಾರ್ಯದರ್ಶಿ ಉಷಾ ಗಂಗಾಧರ್, ಜಿಲ್ಲಾ ಸಂತಾನೋತ್ಪತ್ತಿ ಮತ್ತು ಮಕ್ಕಳ ಅಭಿವೃದ್ಧಿ ಅಧಿಕಾರಿ ಡಾ.ಚಂದನ್, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಪ್ರಸನ್ನ, ಜಿಲ್ಲಾ ಮೇಲ್ವಿಚಾರಕಿ ಎಚ್.ಹೇಮಲತಾ, ಪ್ರಾಂಶುಪಾಲೆ ಪುಷ್ಪಲತಾ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT