ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಂದೇ ಸೂರಿನಡಿ ರೈತರಿಗೆ ಅಗತ್ಯ ಪರಿಕರ: ಶಾಸಕ ರಮೇಶ್‌ಕುಮಾರ್‌ ಹೇಳಿಕೆ

Last Updated 28 ಅಕ್ಟೋಬರ್ 2021, 16:26 IST
ಅಕ್ಷರ ಗಾತ್ರ

ಕೋಲಾರ: ‘ರೈತರಿಗೆ ಅಗತ್ಯವಾದ ಎಲ್ಲಾ ಪರಿಕರಗಳು ಒಂದೇ ಸೂರಿನಡಿ ಸಿಗುವಂತೆ ಮಾಡಲು ನಬಾರ್ಡ್ ಮತ್ತು ಡಿಸಿಸಿ ಬ್ಯಾಂಕ್ ಸಹಯೋಗದಲ್ಲಿ ರೈತ ಮಾಲ್ ಸ್ಥಾಪನೆಗೆ ಚಿಂತನೆ ನಡೆಸಲಾಗಿದೆ. ರೈತರ ಋಣ ತೀರಿಸುವ ಸಣ್ಣ ಪ್ರಯತ್ನ ಇದಾಗಿದ್ದು, ಅಂತಿಮ ರೂಪ ನೀಡಲು ನ.13ರಂದು ಮತ್ತೆ ಸಭೆ ಕರೆಯುತ್ತೇವೆ’ ಎಂದು ಶಾಸಕ ಕೆ.ಆರ್.ರಮೇಶ್‌ಕುಮಾರ್ ಹೇಳಿದರು.

ಇಲ್ಲಿ ಗುರುವಾರ ನಡೆದ ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಯ ಶಾಸಕರು, ಸಹಕಾರಿ ಕ್ಷೇತ್ರದ ಮುಖಂಡರ ಸಭೆಯಲ್ಲಿ ಮಾತನಾಡಿ, ‘ರೈತರಿಗೆ ಅಗತ್ಯವಾದ ಗೊಬ್ಬರ, ಕೃಷಿ ಯಂತ್ರೋಪಕರಣ, ಕೀಟನಾಶಕಗಳು ಒಂದೇ ಸೂರಿನಡಿ ಸಿಗುವಂತೆ ಮಾಡಲು ಟಿಎಪಿಸಿಎಂಎಸ್ ಆಶ್ರಯದಲ್ಲಿ ರೈತ ಮಾಲ್ ಸ್ಥಾಪಿಸಲು ನಿರ್ಧರಿಸಲಾಗಿದೆ. ರೈತರು ಕ್ರೆಡಿಟ್ ಕಾರ್ಡ್ ಬಳಸಿ ಖರೀದಿ ಮಾಡಬಹುದು’ ಎಂದರು.

‘ರೈತರಿಗೆ ಡಿಸಿಸಿ ಬ್ಯಾಂಕ್‌ನಿಂದ ಕ್ರೆಡಿಟ್ ಕಾರ್ಡ್ ನೀಡಲಾಗುತ್ತದೆ. ಕಂಪನಿಗಳಿಂದ ರೈತರಿಗೆ ಅಗತ್ಯವಾದ ಉತ್ಪನ್ನಗಳನ್ನು ನೇರವಾಗಿ ಮಾಲ್ ಪಡೆಯುವುದರಿಂದ ಮಾರುಕಟ್ಟೆಗಿಂತ ಕಡಿಮೆ ಬೆಲೆಗೆ ಉತ್ಪನ್ನ ಸಿಗಲಿವೆ. ವಾಣಿಜ್ಯ ಬ್ಯಾಂಕ್‌ಗಳಿಗಾ ಹಾಗೂ ಚಿನ್ನದ ಸಾಲ ನೀಡುವ ಬ್ಯಾಂಕ್‌ಗಳಿಗೆ ರೈತರ ಬಗ್ಗೆ ಕರುಣೆ ಇಲ್ಲ. ರೈತರ ಮೇಲೆ ಶೋಷಣೆ ನಡೆಯುತ್ತಿದೆ. ಇದನ್ನು ತಪ್ಪಿಸಿ ರೈತರ ಋಣ ತೀರಿಸುವ ಸದುದ್ದೇಶಕ್ಕೆ ಮಾಲ್‌ ಆರಂಭಿಸಲಾಗುತ್ತಿದೆ’ ಎಂದು ವಿವರಿಸಿದರು.

‘ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ರೈತ ಮಾಲ್ ಸ್ಥಾಪಿಸುವ ಮೂಲಕ ರೈತರಿಗೆ ನೆರವಾಗುವ ಪ್ರಯತ್ನ ಶ್ಲಾಘನೀಯ. ಇದರ ಜತೆಗೆ ರೈತರಿಗೆ ನ್ಯಾನೋ ಗೊಬ್ಬರ ಬಳಕೆಗೆ ಅರಿವು ಮೂಡಿಸುವ ಅಗತ್ಯವಿದೆ’ ಎಂದು ಶಾಸಕ ಕೆ.ಶ್ರೀನಿವಾಸಗೌಡ ಸಲಹೆ ನೀಡಿದರು.

ಮಾರುಕಟ್ಟೆ ಒದಗಿಸಬೇಕು: ‘ಕೇಂದ್ರ ಸರ್ಕಾರದ ಇತ್ತೀಚಿನ ನೀತಿ ಖಾಸಗೀಕರಣದತ್ತ ಸಾಗಿದೆ. ರೈತ ಮಾಲ್ ಜತೆಗೆ ರೈತ ಉತ್ಪಾದಕ ಸಂಸ್ಥೆಗಳನ್ನು ಬಲಿಷ್ಠಗೊಳಿಸು ರೈತರ ಕೃಷಿ ಉತ್ಪನ್ನಗಳಿಗೆ ಮಾರುಕಟ್ಟೆ ಒದಗಿಸುವ ಪ್ರಯತ್ನ ಆಗಬೇಕು’ ಎಂದು ಶಾಸಕ ಶಿವಶಂಕರರೆಡ್ಡಿ ತಿಳಿಸಿದರು.

‘ರೈತರಿಗೆ ಅಗತ್ಯ ಸಲಕರಣೆ ಒದಗಿಸುವುದರ ಜತೆಗೆ ರೈತರು ಬೆಳೆದ ಬೆಳೆಗಳ ಮಾರಾಟಕ್ಕೆ ಮಧ್ಯವರ್ತಿಗಳ ಕಾಟ ತಪ್ಪಿಸಲು ಪ್ರಯತ್ನ ಮಾಡೋಣ. ಕೆ.ಸಿ ವ್ಯಾಲಿ ಯೋಜನೆಗಾಗಿ ರಮೇಶ್‌ಕುಮಾರ್‌ ಅವರು ಸದನದಲ್ಲಿ ಕಣ್ಣೀರು ಹಾಕಿದ್ದನ್ನು ಮರೆಯಲು ಸಾಧ್ಯವಿಲ್ಲ’ ಎಂದು ಶಾಸಕ ಎಸ್.ಎನ್.ನಾರಾಯಣಸ್ವಾಮಿ ಹೇಳಿದರು.

ಸಂಸ್ಕರಣಾ ಘಟಕ: ‘ರೈತ ಮಾಲ್ ಜತೆಗೆ ಜಿಲ್ಲೆಯಲ್ಲಿ ಆಹಾರ ಸಂಸ್ಕರಣಾ ಘಟಕ ಸ್ಥಾಪನೆಗೆ ಒತ್ತು ನೀಡಬೇಕು. ಕೃಷಿ ಉತ್ಪನ್ನಗಳ ರಫ್ತಿಗೆ ಹೆಚ್ಚು ಒತ್ತು ಕೊಡಬೇಕು’ ಎಂದು ವಿಧಾನ ಪರಿಷತ್ ಸದಸ್ಯ ನಜೀರ್‌ ಅಹಮ್ಮದ್ ಮನವಿ ಮಾಡಿದರು.

‘ರೈತ ಮಾಲ್‌ ಸ್ಥಾಪನೆ ದೇಶದಲ್ಲೇ ಮೊದಲ ಪ್ರಯೋಗ. ಇದಕ್ಕೆ ಎಲ್ಲರ ಸಹಮತ ಇದೆ. ಕ್ರೆಡಿಟ್ ಕಾರ್ಡ್ ವಹಿವಾಟಿನಿಂದ ಬ್ಯಾಂಕ್ ಮತ್ತು -ಗ್ರಾಹಕರ ನಡುವೆ ಸಂಪರ್ಕ ವೃದ್ಧಿಯಾಗುತ್ತದೆ’ ಎಂದು ಶಾಸಕ ಕೆ.ವೈ.ನಂಜೇಗೌಡ ಅಭಿಯಪ್ರಾಯಪಟ್ಟರು.

‘ಸಹಕಾರಿ ವ್ಯವಸ್ಥೆಯಲ್ಲಿ ಅಸಾಧ್ಯ ಎಂಬುದಿಲ್ಲ. ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು ಮತ್ತು ಟಿಎಪಿಸಿಎಂಎಸ್‌ಗಳಿಗೆ ಶೇ 1ರ ಬಡ್ಡಿ ದರದಲ್ಲಿ ನಬಾರ್ಡ್ ಸಾಲ ನೀಡಲಿದ್ದು, ರೈತ ಮಾಲ್ ಸ್ಥಾಪನೆಯ ಹಾದಿ ಸುಗಮವಾಗಿದೆ. ರೈತ ಮಾಲ್‌ ಸ್ಥಾಪನೆಯಿಂದ ಸಹಕಾರಿ ವ್ಯವಸ್ಥೆಯ ಗೌರವ ಹೆಚ್ಚಲಿದೆ’ ಎಂದು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಎಂ.ಗೋವಿಂದಗೌಡ ಹೇಳಿದರು.

ಜಿ.ಪಂ ಮಾಜಿ ಅಧ್ಯಕ್ಷ ಶ್ರೀನಿವಾಸನ್, ಕೋಚಿಮುಲ್ ಮಾಜಿ ಅಧ್ಯಕ್ಷ ಎನ್‌.ಜಿ.ಬ್ಯಾಟಪ್ಪ, ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ನಾಗರಾಜ್, ನಿರ್ದೇಶಕರಾದ ಹನುಮಂತರೆಡ್ಡಿ, ಸೋಮಣ್ಣ, ಎಂ.ಎಲ್.ಅನಿಲ್‌ಕುಮಾರ್‌, ಚೆನ್ನರಾಯಪ್ಪ, ಎಸ್.ವಿ.ಸುಧಾಕರ್, ಗೋವಿಂದರಾಜು, ವೆಂಕಟರೆಡ್ಡಿ, ಜಿಲ್ಲಾ ಸಹಕಾರಿ ಒಕ್ಕೂಟದ ಅಧ್ಯಕ್ಷ ಅ.ಮು.ಲಕ್ಷ್ಮೀನಾರಾಯಣ ಪಾಲ್ಗೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT