ಶನಿವಾರ, ಜನವರಿ 28, 2023
20 °C

ಪ್ರಾಣ ಬೆದರಿಕೆ: ಶಾಸಕ ಎಸ್.ಎನ್.ನಾರಾಯಣಸ್ವಾಮಿ ವಿರುದ್ಧ ಎಸ್‌ಪಿಗೆ ದೂರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಂಗಾರಪೇಟೆ: ‘ಪಟ್ಟಣದ ಒಬ್ಬಟ್ಲು ಕೆರೆಯಲ್ಲಿ ಅಂಬೇಡ್ಕರ್ ಭವನ ನಿರ್ಮಿಸಲು ತಡೆಯಾಜ್ಞೆ ತಂದಿರುವುದಕ್ಕೆ ಶಾಸಕ ಎಸ್.ಎನ್.ನಾರಾಯಣಸ್ವಾಮಿ ಅವರು ತಮ್ಮ ಬೆಂಬಲಿಗರ ಮೂಲಕ ಬೆದರಿಕೆ ಹಾಕಿದ್ದಾರೆ. ನನಗೆ ಹಾಗೂ ನನ್ನ ಕುಟುಂಬಕ್ಕೆ ಪ್ರಾಣ ಬೆದರಿಕೆ ಇದ್ದು, ರಕ್ಷಣೆ ನೀಡಬೇಕು’ ಎಂದು ಗಂಗಮ್ಮನಪಾಳ್ಯದ ಶ್ರೀಧರ್ ಮೂರ್ತಿ ಶುಕ್ರವಾರ ನೋಂದಣಿ ಅಂಚೆ ಮೂಲಕ ಕೆಜಿಎಫ್ ಪೊಲೀಸ್ ವರಿಷ್ಠಾಧಿಕಾರಿಗೆ ಮನವಿ ಸಲ್ಲಿಸದ್ದಾರೆ.

ಪಟ್ಟಣದ ಸರ್ವೆ ನಂ.137ರ ಒಬ್ಬಟ್ಲು ಕೆರೆ ಜಾಗದಲ್ಲಿ ಅಂಬೇಡ್ಕರ್ ಭವನ ನಿರ್ಮಾಣಕ್ಕೆ ಅಕ್ರಮವಾಗಿ ಜಾಗ ಗುರುತಿಸಲಾಗಿತ್ತು. ಈ ಬಗ್ಗೆ ಕರ್ನಾಟಕ ಭೂಕಬಳಿಕೆ ತಡೆ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಪ್ರಕರಣ ದಾಖಲಿಸಲಾಗಿತ್ತು . ವಿಚಾರಣೆ ನಡೆಸಿದ ನ್ಯಾಯಾಲಯ ಕೆರೆ ಒತ್ತುವರಿ ತೆರವುಗೊಳಿಸುವಂತೆ ಜಿಲ್ಲಾಧಿಕಾರಿಗಳಿಗೆ ಸೂಚಿಸಿತು. ಅದರಂತೆ ಸರ್ವೆ ಮಾಡಿದ್ದು, 3 ಎಕರೆ ಒತ್ತುವರಿ ಆಗಿರುವುದು ದೃಢಪಟ್ಟಿದೆ ಎಂದು ತಿಳಿಸಿದ್ದಾರೆ.

ಆ ಒತ್ತುವರಿ ಜಾಗದಲ್ಲಿ ಕನ್ನಡ ಭವನ, ತೋಟಗಾರಿಕೆ ಇಲಾಖೆ ಕಟ್ಟಡ, ಸಾರ್ವಜನಿಕ ವಿದ್ಯಾರ್ಥಿ ನಿಲಯ, ಪ್ರಾಥಮಿಕ ಶಾಲೆ ನಿರ್ಮಿಸಲಾಗಿದೆ. ಈಗ ಅಂಬೇಡ್ಕರ್ ಭವನ ನಿರ್ಮಿಸುವುದಾಗಿ ಶಾಸಕರು ಘೋಷಿಸಿದ್ದಾರೆ. ಇದನ್ನು ಪ್ರಶ್ನಿಸಿ ನ್ಯಾಯಾಲಯಕ್ಕೆ ಮೊರೆ ಹೋಗಿದ್ದು, ತಡೆಯಾಜ್ಞೆ ನೀಡಲಾಗಿದೆ.

‘ಈ ಕಾರಣದಿಂದ ಶಾಸಕರು ತಮ್ಮ ಬೆಂಬಲಿತರಾದ ಸೂಲಿಕುಂಟೆ ರಮೇಶ್, ಹುಣಸನಹಳ್ಳಿ ವೆಂಕಟೇಶ್, ಚಿಕ್ಕನಾರಾಯಣ, ಮಣಿವಣ್ಣನ್ ಸೇರಿಸಿ ನನ್ನ ಮನೆ ಮುಂದೆ ಧರಣಿ ಮಾಡುವ ಬೆದರಿಕೆ ಹಾಕಿದ್ದಾರೆ. ಜತೆಗೆ ಅ.19ರ ಒಳಗೆ ಇತ್ಯರ್ಥವಾಗದಿದ್ದಲ್ಲಿ ಬಂಗಾರಪೇಟೆ ಬಂದ್‌ಗೆ ಕರೆ ನೀಡುವುದಾಗಿ ಧಮಕಿ ಹಾಕಿದ್ದಾರೆ’ ಎಂದು ಶ್ರೀಧರ್‌ ಮೂರ್ತಿ ದೂರಿದ್ದಾರೆ.

‘ನನಗೆ ಹಾಗೂ ನನ್ನ ಕುಟುಂಬಕ್ಕೆ ಪ್ರಾಣ ಬೆದರಿಕೆ ಇದ್ದು ಅದಕ್ಕೆ ಶಾಸಕ ಹಾಗೂ ಬೆಂಬಲಿಗರು ನೇರ ಹೊಣೆ ಆಗಿರುತ್ತಾರೆ’ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು