ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟಿಪ್ಪು ಜಯಂತಿ ರದ್ದು: ಪ್ರತಿಭಟನೆ

ರಸ್ತೆ ತಡೆ ಮಾಡಿ ಬಿಜೆಪಿ ವಿರುದ್ಧ ಪ್ರತಿಭಟನಾಕಾರರ ಆಕ್ರೋಶ
Last Updated 31 ಜುಲೈ 2019, 14:10 IST
ಅಕ್ಷರ ಗಾತ್ರ

ಕೋಲಾರ: ಟಿಪ್ಪು ಜಯಂತಿ ಆಚರಣೆ ರದ್ದುಪಡಿಸಿರುವ ಸರ್ಕಾರದ ಕ್ರಮ ಖಂಡಿಸಿ ಕರ್ನಾಟಕ ಟಿಪ್ಪು ಸೆಕ್ಯೂಲರ್‌ ಸೇನೆ ಸದಸ್ಯರು ಇಲ್ಲಿ ಬುಧವಾರ ಪ್ರತಿಭಟನೆ ಮಾಡಿದರು.

ಮೆಕ್ಕೆ ವೃತ್ತದಲ್ಲಿ ರಸ್ತೆ ತಡೆ ಮಾಡಿದ ಪ್ರತಿಭಟನಾಕಾರರು, ‘ಕೋಮುವಾದಿ ಬಿಜೆಪಿ ಸರ್ಕಾರವು ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಒಂದು ವಾರದಲ್ಲೇ ಟಿಪ್ಪು ಜಯಂತಿ ಆಚರಣೆ ನಿಷೇಧಿಸಿದೆ. ಮನುವಾದಿ ಬಿಜೆಪಿಯು ಅಲ್ಪಸಂಖ್ಯಾತ ವಿರೋಧಿ ಧೋರಣೆ ತೋರುತ್ತಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಕಾಂಗ್ರೆಸ್‌ ಸರ್ಕಾರ ಅಧಿಕಾರದಲ್ಲಿದ್ದಾಗ 2016ರಲ್ಲಿ ಟಿಪ್ಪು ಜಯಂತಿ ಆಚರಿಸುವ ನಿರ್ಧಾರ ಕೈಗೊಂಡಿತು. ಮೈಸೂರು ಹುಲಿ ಎಂದು ಹೆಸರಾಗಿದ್ದ ಟಿಪ್ಪು ಸುಲ್ತಾನ್ ಬ್ರಿಟೀಷರ ವಿರುದ್ಧ ಹೋರಾಡಿದ ದೇಶದ ಮೊದಲ ಸ್ವಾತಂತ್ರ್ಯ ಹೋರಾಟಗಾರ. ಟಿಪ್ಪು ಯಾವುದೇ ಧರ್ಮಕ್ಕೆ ಸೇರಿದವನಲ್ಲ. ಆತ ಇಡೀ ದೇಶದ ಆಸ್ತಿ’ ಎಂದು ಸಂಘಟನೆಯ ರಾಜ್ಯ ಘಟಕದ ಅಧ್ಯಕ್ಷ ಸೈಯದ್ ಆಸೀಫ್ ಹೇಳಿದರು.

‘ಆರ್‌ಎಸ್‌ಎಸ್‌ ಹಾಗೂ ಸಂಘ ಪರಿವಾರದ ಕೈಗೊಂಬೆಯಾಗಿರುವ ಬಿಜೆಪಿ ಸರ್ಕಾರ ರಾಜಕೀಯ ಕಾರಣಕ್ಕೆ ಟಿಪ್ಪು ಜಯಂತಿ ಆಚರಣೆ ನಿಷೇಧಿಸಿದೆ. ಮೊದಲಿನಿಂದಲೂ ಟಿಪ್ಪು ಜಯಂತಿಗೆ ವಿರೋಧ ವ್ಯಕ್ತಪಡಿಸಿದ್ದ ಬಿಜೆಪಿಯು ಅಲ್ಪಸಂಖ್ಯಾತ ಸಮುದಾಯಕ್ಕೆ ನೋವುಂಟು ಮಾಡಿದೆ’ ಎಂದು ಆರೋಪಿಸಿದರು.

ರಾಜಕಾರಣ ಸರಿಯಲ್ಲ: ‘ದೇಶದ ಇತರ ರಾಜರು ಬ್ರಿಟೀಷರಿಗೆ ಶರಣಾದರೂ ಟಿಪ್ಪು ಸುಲ್ತಾನ್‌ ಮಾತ್ರ ಹೋರಾಟ ಮಾಡುತ್ತಲೇ ಯುದ್ಧ ಭೂಮಿಯಲ್ಲಿ ವೀರ ಮರಣವನ್ನಪ್ಪಿದ. ರಾಜ್ಯದ ಹಿತಾಸಕ್ತಿಗಾಗಿ ತನ್ನ ಮಕ್ಕಳನ್ನೇ ಒತ್ತೆಯಿಟ್ಟ ನಾಡ ಪ್ರೇಮಿ. ಇಂತಹ ಸ್ವಾತಂತ್ರ್ಯ ಹೋರಾಟಗಾರನ ವಿಚಾರದಲ್ಲಿ ರಾಜಕಾರಣ ಮಾಡುವುದು ಸರಿಯಲ್ಲ’ ಎಂದು ಪ್ರತಿಭಟನಾಕಾರರು ಅಸಮಾಧಾನ ವ್ಯಕ್ತಪಡಿಸಿದರು.

‘ಈ ದೇಶ ಒಂದು ವರ್ಗ ಅಥವಾ ಧರ್ಮದಿಂದ ಕಟ್ಟಿದ್ದಲ್ಲ. ಎಲ್ಲರೂ ಜತೆಗೂಡಿ ಹೋರಾಟ ಮಾಡಿದ್ದರಿಂದ ಸ್ವತಂತ್ರ ದೇಶವಾಗಿದೆ. ಅಪ್ರತಿಮ ದೇಶ ಭಕ್ತನಾಗಿದ್ದ ಟಿಪ್ಪು ಸುಲ್ತಾನ್‌ ಎಲ್ಲಾ ಧರ್ಮ ಜಾತಿಗಳಿಗೂ ಸಾಮಾಜಿಕ ನ್ಯಾಯ ಕಲ್ಪಿಸಿದ. ಆದರೆ, ಕೋಮುವಾದಿ ಬಿಜೆಪಿಯು ಸ್ವಾರ್ಥಕ್ಕಾಗಿ ಜನರ ದಿಕ್ಕು ತಪ್ಪಿಸಿ ಟಿಪ್ಪು ವಿರುದ್ಧ ಅಪಪ್ರಚಾರ ನಡೆಸುತ್ತಿದೆ’ ಎಂದು ಕಿಡಿಕಾರಿದರು.

ಆದೇಶ ಹಿಂಪಡೆಯಬೇಕು: ‘ದೇಶದ ಸಂವಿಧಾನದಲ್ಲಿ ಜಾತಿಗೊಂದು ಕಾನೂನು ಮಾಡಿಲ್ಲ. ಎಲ್ಲಾ ಭಾರತೀಯರಿಗೂ ಇರುವುದು ಒಂದೇ ಸಂವಿಧಾನ. ಟಿಪ್ಪು ಜಯಂತಿ ಆಚರಣೆ ರದ್ದುಪಡಿಸಿರುವ ಆದೇಶ ಹಿಂಪಡೆಯಬೇಕು. ಇಲ್ಲದಿದ್ದರೆ ಎಲ್ಲಾ ಜಯಂತಿಗಳನ್ನು ರದ್ದುಪಡಿಸಬೇಕು. ಸಮುದಾಯದ ಬೇಡಿಕೆ ಈಡೇರಿಸದಿದ್ದರೆ ರಾಜ್ಯದೆಲ್ಲೆಡೆ ತೀವ್ರ ಹೋರಾಟ ನಡೆಸುತ್ತೇವೆ’ ಎಂದುಎಚ್ಚರಿಕೆ ನೀಡಿದರು.

ಸಂಘಟನೆ ಪದಾಧಿಕಾರಿಗಳಾದ ತಬ್ರೇಜ್‌, ಮುಜ್ಬುಲ್‌, ಬಾಬಾಜಾನ್, ಜಾವೀದ್‌ ಪಾಷಾ, ಮುಜೀದ್‌, ಚಾನ್‌ ಪಾಷಾ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT