ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತದಾರರ ಪಟ್ಟಿಗೆ ನೂಕುನುಗ್ಗಲು

ನಗರಸಭೆ ಚುನಾವಣೆ: ಮತದಾನಕ್ಕೆ ದಿನಗಣನೆ
Last Updated 7 ನವೆಂಬರ್ 2019, 10:31 IST
ಅಕ್ಷರ ಗಾತ್ರ

ಕೋಲಾರ: ನಗರಸಭೆ ಚುನಾವಣೆ ಮತದಾನಕ್ಕೆ ದಿನಗಣನೆ ಆರಂಭವಾಗಿದ್ದು, ವಾರ್ಡ್‌ವಾರು ಮತದಾರರ ಪಟ್ಟಿ ಪಡೆಯಲು ಇಲ್ಲಿ ಬುಧವಾರ ನೂಕುನುಗ್ಗಲು ಉಂಟಾಯಿತು.

ಮತದಾನಕ್ಕೆ 5 ದಿನ ಬಾಕಿಯಿದ್ದರೂ ಚುನಾವಣಾ ಶಾಖೆಯು ಕೋಲಾರ ನಗರಸಭೆ ವ್ಯಾಪ್ತಿಯ ಅಭ್ಯರ್ಥಿಗಳಿಗೆ ವಾರ್ಡ್‌ವಾರು ಮತದಾರರ ಪಟ್ಟಿ ನೀಡಲು ವಿಳಂಬ ಮಾಡಿದೆ. ಬುಧವಾರ ಬೆಳಿಗ್ಗೆ ಮತದಾರರ ಪಟ್ಟಿ ವಿತರಿಸಲಾಗುತ್ತದೆ ಎಂದು ತಿಳಿದ ಅಭ್ಯರ್ಥಿಗಳು ತಮ್ಮ ಬೆಂಬಲಿಗರನ್ನು ತಹಶೀಲ್ದಾರ್‌ ಕಚೇರಿಗೆ ಕಳುಹಿಸಿದ್ದರು.

ಗುಂಪು ಗುಂಪಾಗಿ ಬಂದ ಅಭ್ಯರ್ಥಿಗಳ ಬೆಂಬಲಿಗರು ಹಾಗೂ ರಾಜಕೀಯ ಪಕ್ಷಗಳ ಮುಖಂಡರು ತಹಶೀಲ್ದಾರ್‌ ಕಚೇರಿ ಆವರಣದಲ್ಲಿ ಗಂಟೆಗಟ್ಟಲೇ ಸಾಲುಗಟ್ಟಿ ನಿಂತಿದ್ದರು. ಆದರೆ, ಅಧಿಕಾರಿಗಳು ಮತದಾರರ ಪಟ್ಟಿ ನೀಡದೆ ಸತಾಯಿಸಿದರು. ಇದರಿಂದ ಆಕ್ರೋಶಗೊಂಡ ಅಭ್ಯರ್ಥಿಗಳ ಬೆಂಬಲಿಗರು ಹಾಗೂ ರಾಜಕೀಯ ಮುಖಂಡರು ಅಧಿಕಾರಿಗಳ ವಿರುದ್ಧ ಹರಿಹಾಯ್ದರು.

ಅಧಿಕಾರಿಗಳು ಮತ್ತು ಅಭ್ಯರ್ಥಿಗಳ ಬೆಂಬಲಿಗರ ನಡುವೆ ಮಾತಿನ ಚಕಮಕಿ ನಡೆದು ಸ್ಥಳದಲ್ಲಿ ಗೊಂದಲದ ವಾತಾವರಣ ಸೃಷ್ಟಿಯಾಯಿತು. ಮಾತಿನ ಚಕಮಕಿ ಮತ್ತಷ್ಟು ವಿಕೋಪಕ್ಕೆ ತಿರುಗಿ ಅಭ್ಯರ್ಥಿಗಳ ಬೆಂಬಲಿಗರು ಅಧಿಕಾರಿಗಳನ್ನು ಏಕವಚನದಲ್ಲಿ ನಿಂದಿಸಿದರು. ಬಳಿಕ ಪೊಲೀಸರು ಮಧ್ಯಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಿದರು.

ಮೀನಮೇಷ: ‘ಮತದಾನಕ್ಕೆ 5 ದಿನವಷ್ಟೇ ಬಾಕಿಯಿದೆ. ಮತದಾರರ ಪಟ್ಟಿಗೆ ಈಗಾಗಲೇ ಅರ್ಜಿ ಸಲ್ಲಿಸಿದ್ದೇವೆ. ಆದರೆ, ಅಧಿಕಾರಿಗಳು ಮತದಾರರ ಪಟ್ಟಿ ನೀಡಲು ಮೀನಮೇಷ ಎಣಿಸುತ್ತಿದ್ದಾರೆ. ಇದರಿಂದ ಚುನಾವಣಾ ಪ್ರಚಾರಕ್ಕೆ ಸಮಸ್ಯೆಯಾಗಿದೆ. ಅಧಿಕಾರಿಗಳು ಸಮಸ್ಯೆ ಅರಿಯದೆ ಬೇಜವಾಬ್ದಾರಿ ತೋರುತ್ತಿದ್ದಾರೆ’ ಎಂದು ರಾಜಕೀಯ ಮುಖಂಡರು ಕಿಡಿಕಾರಿದರು.

‘ವಾರ್ಡ್‌ ಪುನರ್‌ ವಿಂಗಡಣೆ ಬಳಿಕ ಮತದಾರರ ಹೆಸರು ಅಕ್ಕಪಕ್ಕದ ವಾರ್ಡ್‌ಗಳಲ್ಲಿ ಸೇರಿ ಹೋಗಿದೆ. ಕೆಲ ಬಡಾವಣೆಗಳು ಸಹ ಬೇರೆ ವಾರ್ಡ್‌ಗಳಿಗೆ ಸೇರ್ಪಡೆಯಾಗಿವೆ. ಹೀಗಾಗಿ ವಾರ್ಡ್‌ನ ವ್ಯಾಪ್ತಿ ಮತ್ತು ಮತದಾರರ ವಿವರದ ಬಗ್ಗೆ ಸ್ಪಷ್ಟತೆ ಇಲ್ಲವಾಗಿದೆ. ಮತದಾರರ ಮಾಹಿತಿಯೇ ಇಲ್ಲದೆ ಮತ ಯಾಚಿಸುವುದು ಹೇಗೆ?’ ಎಂದು ಅಭ್ಯರ್ಥಿಗಳ ಬೆಂಬಲಿಗರು ಪ್ರಶ್ನಿಸಿದರು.

ಗೊಂದಲವಾಗಿದೆ: ‘ವಾರ್ಡ್‌ವಾರು ಮೀಸಲಾತಿ ಬದಲಾಗಿರುವುದರಿಂದ ಸಾಕಷ್ಟು ಅಭ್ಯರ್ಥಿಗಳು ಹೊಸ ವಾರ್ಡ್‌ಗಳಿಗೆ ವಲಸೆ ಹೋಗಿ ಸ್ಪರ್ಧೆ ಮಾಡಿದ್ದಾರೆ. ಅಧಿಕಾರಿಗಳು ವಾರ್ಡ್‌ವಾರು ಮತದಾರರ ಪಟ್ಟಿ ಕೊಡದಿರುವುದರಿಂದ ಸಾಕಷ್ಟು ಗೊಂದಲವಾಗಿದೆ. ಜಿಲ್ಲೆಯ ಮುಳಬಾಗಿಲು ಮತ್ತು ಕೆಜಿಎಫ್‌ ನಗರಸಭೆ ವ್ಯಾಪ್ತಿಯ ವಾರ್ಡ್‌ವಾರು ಮತದಾರರ ಪಟ್ಟಿಯನ್ನು ಈಗಾಗಲೇ ವಿತರಣೆ ಮಾಡಲಾಗಿದೆ. ಆದರೆ, ಕೋಲಾರ ನಗರಸಭೆ ವ್ಯಾಪ್ತಿಯಲ್ಲಿ ವಿಳಂಬವಾಗಿದೆ’ ಎಂದು ದೂರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT