ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಂಬಾಕು ಸೇವನೆ ಸ್ವಪ್ರೇರಿತ ಅಪರಾಧ: ಸೆಲ್ವಮಣಿ

ವಿದ್ಯಾರ್ಥಿಗಳಿಗೆ ಅರಿವು ಮೂಡಿಸಿ: ಜಿಲ್ಲಾಧಿಕಾರಿ ಸೆಲ್ವಮಣಿ ಸೂಚನೆ
Last Updated 13 ಆಗಸ್ಟ್ 2021, 16:05 IST
ಅಕ್ಷರ ಗಾತ್ರ

ಕೋಲಾರ: ‘ತಂಬಾಕು ಉತ್ಪನ್ನ ಸೇವನೆ ಚಟ ತ್ಯಜಿಸುವ ಮೂಲಕ ಆರೋಗ್ಯವಂತ ಸಮಾಜ ನಿರ್ಮಾಣ ಮಾಡಬೇಕು’ ಎಂದು ಜಿಲ್ಲಾಧಿಕಾರಿ ಆರ್.ಸೆಲ್ವಮಣಿ ಕಿವಿಮಾತು ಹೇಳಿದರು.

ರಾಷ್ಟ್ರೀಯ ತಂಬಾಕು ನಿಯಂತ್ರಣ ಕಾರ್ಯಕ್ರಮ ಹಾಗೂ ಸಿಗರೇಟ್ ಮತ್ತು ಇತರೆ ತಂಬಾಕು ಉತ್ಪನ್ನಗಳ ಕಾಯ್ದೆ (ಕೋಟ್ಪಾ) ಅನುಷ್ಠಾನ ಕುರಿತು ಇಲ್ಲಿ ಶುಕ್ರವಾರ ನಡೆದ ಸಭೆಯಲ್ಲಿ ಮಾತನಾಡಿ, ‘ತಂಬಾಕು ಉತ್ಪನ್ನಗಳ ಸೇವನೆಯು ಸ್ವಯಂಪ್ರೇರಿತ ಅಪರಾಧ’ ಎಂದು ಅಭಿಪ್ರಾಯಪಟ್ಟರು.

‘ತಂಬಾಕು ಉತ್ಪನ್ನ ಸೇವಿಸುವವರ ಆರೋಗ್ಯ ಹಾಳಾಗುವುದರ ಜತೆಗೆ ಅಕ್ಕಪಕ್ಕದವರ ಆರೋಗ್ಯವೂ ಕೆಡುತ್ತದೆ. ಸಾರ್ವಜನಿಕ ಸ್ಥಳಗಳಲ್ಲಿ ತಂಬಾಕು ಉತ್ಪನ್ನಗಳ ಬಳಕೆ ನಿಷೇಧಿಸಲಾಗಿದ್ದು, ಈ ನಿಯಮ ಉಲ್ಲಂಘಿಸುವವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು. ತಂಬಾಕು ಉತ್ಪನ್ನಗಳ ಸೇವನೆಯಿಂದ ಆರೋಗ್ಯದ ಮೇಲಾಗುವ ದುಷ್ಪರಿಣಾಮಗಳ ಕುರಿತು ಸಾರ್ವಜನಿಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ಜಾಗೃತಿ ಮೂಡಿಸಿ’ ಎಂದರು.

‘ತಂಬಾಕು ಬೆಳೆಯುವ ಮತ್ತು ತಂಬಾಕು ಉತ್ಪನ್ನಗಳನ್ನು ಬಳಸುವವರ ಸಂಖ್ಯೆ ಹೆಚ್ಚಾಗುತ್ತಿದ್ದು, ಇದರಿಂದ ಸಾರ್ವಜನಿಕರ ಆರೋಗ್ಯದ ಮೇಲೆ ದುಷ್ಪರಿಣಾಮವಾಗುತ್ತಿದೆ. ತಂಬಾಕು ಉತ್ಪನ್ನ ಸೇವನೆಯಲ್ಲಿ ತೊಡಗಿರುವವರನ್ನು ಆ ಚಟದಿಂದ ಮುಕ್ತಗೊಳಿಸಬೇಕು. ತಂಬಾಕು ಉತ್ಪನ್ನಗಳ ಸೇವನೆಯಲ್ಲಿ ಹೊಸಬರು ಸೇರ್ಪಡೆಯಾಗದಂತೆ ಅರಿವು ಮೂಡಿಸಬೇಕು’ ಎಂದು ಸಲಹೆ ನೀಡಿದರು.

‘ತಂಬಾಕು ಉತ್ಪನ್ನಗಳ ಸೇವನೆಯಿಂದ ವಿವಿಧ ಕಾಯಿಲೆಗಳಿಗೆ ತುತ್ತಾಗುವ ವ್ಯಕ್ತಿಗಳ ಆರೋಗ್ಯ ಸುಧಾರಣೆಗಾಗಿ ಸರ್ಕಾರ ಸಾವಿರಾರು ಕೋಟ್ಯಂತರ ರೂಪಾಯಿ ಖರ್ಚು ಮಾಡುತ್ತಿದೆ. ಜನ ದುಶ್ಚಟಗಳಿಂದ ದೂರ ಉಳಿದರೆ ಈ ಹಣ ಸಮಾಜದ ಅಭಿವೃದ್ಧಿಗೆ ಬಳಕೆಯಾಗಿ ಸಾಕಷ್ಟು ಉಪಯೋಗವಾಗುತ್ತದೆ’ ಎಂದು ಅಭಿಪ್ರಾಯಪಟ್ಟರು.

‘ತಂಬಾಕು ಉತ್ಪನ್ನಗಳ ಸೇವನೆ ತ್ಯಜಿಸಿದವರಲ್ಲಿ ಕೆಲವರು ಪುನಃ ತಂಬಾಕು ಉತ್ಪನ್ನಗಳ ಸೇವೆನೆಯ ಚಟಕ್ಕೆ ಒಳಗಾಗುತ್ತಿದ್ದಾರೆ. ಇಂತಹವರನ್ನು ಗುರುತಿಸಿ ಶಾಶ್ವತವಾಗಿ ತಂಬಾಕು ಉತ್ಪನ್ನ ಸೇವನೆ ತ್ಯಜಿಸುವಂತೆ ಮಾಡಬೇಕು. ಆಶಾ ಕಾರ್ಯಕರ್ತೆಯರನ್ನು ಬಳಸಿಕೊಂಡು ಮನೆ ಮನೆಗೆ ತೆರಳಿ ಅರಿವು ಮೂಡಿಸಿ’ ಎಂದು ಸೂಚಿಸಿದರು.

ಫ್ಯಾಷನ್ ಆಗಿದೆ: ‘ಕಾಲೇಜು ಹಂತದ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ತಂಬಾಕು ಉತ್ಪನ್ನಗಳ ಸೇವನೆ ಚಟಕ್ಕೆ ಒಳಗಾಗುತ್ತಿದ್ದಾರೆ. ಈ ಹಂತದಲ್ಲಿ ಬೀಡಿ, ಸಿಗರೇಟ್ ಸೇವನೆಯು ಫ್ಯಾಷನ್ ಆಗಿಬಿಟ್ಟಿದೆ. ಹೊಸ ರೀತಿಯ ಜಾಹೀರಾತುಗಳಿಂದ ಆಕರ್ಷಿತರಾಗಿ ತಂಬಾಕು ಉತ್ಪನ್ನಗಳನ್ನು ಸೇವಿಸುತ್ತಿದ್ದಾರೆ. ಹೀಗಾಗಿ ಈ ಹಂತದಲ್ಲಿ ಹೆಚ್ಚಿನ ಎಚ್ಚರಿಕೆ ವಹಿಸಿ ಅರಿವು ಮೂಡಿಸಿ’ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ತಿಳಿಸಿದರು.

‘ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ನಿಷೇಧಿಸಲಾಗಿದೆ. ಜತೆಗೆ ತಂಬಾಕು ಉತ್ಪನ್ನಗಳನ್ನು ಜಗಿದು ಸಾರ್ವಜನಿಕ ಸ್ಥಳಗಳಲ್ಲಿ ಉಗಿಯುವಂತಿಲ್ಲ. ಈ ನಿಯಮ ಉಲ್ಲಂಘಿಸಿ ಸಾರ್ವಜನಿಕ ಸ್ಥಳಗಳಲ್ಲಿ ಬೀಡಿ ಮತ್ತು ಸಿಗರೇಟು ಸೇದುವವರಿಗೆ, ತಂಬಾಕು ಉತ್ಪನ್ನ ಜಗಿಯುವವರಿಗೆ ಆರೋಗ್ಯ ಇಲಾಖೆ ಅಧಿಕಾರಿಗಳು ಮತ್ತು ಪೊಲೀಸರು ದಂಡ ವಿಧಿಸಬೇಕು’ ಎಂದು ಆದೇಶಿಸಿದರು.

ಹೆಚ್ಚು ಅಪಾಯಕಾರಿ: ‘ಎಲ್ಲಾ ಸರ್ಕಾರಿ ಕಚೇರಿಗಳಲ್ಲಿ ತಂಬಾಕು ಉತ್ಪನ್ನಗಳ ಸೇವನೆ ನಿಷೇಧಿಸಲಾಗಿದೆ. 18 ವರ್ಷದೊಳಗಿನ ಮಕ್ಕಳಿಗೆ ತಂಬಾಕು ಉತ್ಪನ್ನಗಳನ್ನು ಮಾರುವಂತಿಲ್ಲ. ಸಮೀಕ್ಷೆ ಪ್ರಕಾರ ರಾಜ್ಯದಲ್ಲಿ 19 ವರ್ಷ ವಯೋಮಾನದ ಯುವಕರು ಹೆಚ್ಚಾಗಿ ತಂಬಾಕು ಉತ್ಪನ್ನಗಳಿಗೆ ದಾಸರಾಗುತ್ತಿದ್ದಾರೆ’ ಎಂದು ರಾಜ್ಯ ತಂಬಾಕು ನಿಯಂತ್ರಣ ಘಟಕದ ಸಮನ್ವಯಾಧಿಕಾರಿ ಪ್ರಭಾಕರ್ ಮಾಹಿತಿ ನೀಡಿದರು.

‘30 ವರ್ಷದ ನಂತರ ತಂಬಾಕು ತಂಬಾಕು ಉತ್ಪನ್ನ ಸೇವನೆ ಚಟಕ್ಕೆ ಒಳಗಾಗುವರು ಸಂಖ್ಯೆ ತುಂಬಾ ಕಡಿಮೆ. ಗ್ರಾಮೀಣ ಪ್ರದೇಶದಲ್ಲಿ ಹೆಚ್ಚಿನ ಜನರು ಬೀಡಿ ಸೇದುತ್ತಿದ್ದಾರೆ. ಸಿಗರೇಟ್ ಸೇವನೆಗಿಂತಲೂ ಬೀಡಿ ಸೇವನೆ ಹೆಚ್ಚು ಅಪಾಯಕಾರಿ’ ಎಂದು ವಿವರಿಸಿದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಜಗದೀಶ್, ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ.ಚಂದನ್, ತಂಬಾಕು ನಿಯಂತ್ರಣ ಘಟಕದ ಅಧಿಕಾರಿ ಡಾ,ಮಹಮ್ಮದ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT