ಭಾನುವಾರ, ಜನವರಿ 19, 2020
28 °C
ಸಾಹಿತ್ಯ– ಸಾಂಸ್ಕೃತಿಕ ಹಬ್ಬವಾಗಿ ಆಚರಣೆ: ಸಂಘಟನೆ ಅಧ್ಯಕ ಅಚ್ಯುತ ಹೇಳಿಕ

ಇಂದು ಸಮುದಾಯ ಸಂಘಟನೆಯ ಸಮ್ಮೇಳನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೋಲಾರ: ‘ಸಂಘಟನೆಯ 7ನೇ ರಾಜ್ಯ ಮಟ್ಟದ ಸಮ್ಮೇಳನ ನಗರದ ಟಿ.ಚನ್ನಯ್ಯ ರಂಗಮಂದಿರದಲ್ಲಿ ಡಿ.೧೪ ಮತ್ತು ೧೫ರಂದು ನಡೆಯಲಿದೆ’ ಎಂದು ಸಮುದಾಯ ಕರ್ನಾಟಕ ಸಂಘಟನೆ ರಾಜ್ಯ ಘಟಕದ ಅಚ್ಯುತ ತಿಳಿಸಿದರು.

ಇಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ಸಮುದಾಯವು 1975ರ ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಹುಟ್ಟಿಕೊಂಡ ಜಾನಪದ ಸಾಂಸ್ಕೃತಿಕ ಸಂಘಟನೆಯಾಗಿದೆ. 44 ವರ್ಷಗಳಿಂದ ನಾಡಿನ ಜ್ವಲಂತ ಸಮಸ್ಯೆಗಳಿಗೆ ಪ್ರತಿಕ್ರಿಯಿಸುವ, ಸಂವಿಧಾನದ ಆಶಯಗಳಿಗೆ ಧಕ್ಕೆಯಾಗದಂತೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಸಂಘಟನೆ ಕೆಲಸ ಮಾಡುತ್ತಿದೆ’ ಎಂದರು.

‘ಹಿಂದಿನ ವರ್ಷ ಮೈಸೂರಿನಲ್ಲಿ ರಾಜ್ಯ ಸಮ್ಮೇಳನ ನಡೆದಿತ್ತು. ಇದೇ ಮೊದಲ ಬಾರಿಗೆ ಕೋಲಾರದಲ್ಲಿ ಸಮ್ಮೇಳನ ನಡೆಸಲು ಅವಕಾಶ ಸಿಕ್ಕಿದೆ. ಮೊದಲ ದಿನದ ಕಾರ್ಯಕ್ರಮವನ್ನು ಸಾಹಿತ್ಯ, ಸಾಂಸ್ಕೃತಿಕ ಹಬ್ಬವಾಗಿ ಆಚರಿಸಲಾಗುತ್ತದೆ. ಡಿ.15ರ ಪ್ರತಿನಿಧಿಗಳ ಸಮಾವೇಶ ನಡೆಯಲಿದೆ. ಕೋಲಾರ ಸೇರಿದಂತೆ 18 ಜಿಲ್ಲೆಗಳಿಂದ ಸುಮಾರು 250ಕ್ಕೂ ಹೆಚ್ಚು ಪ್ರತಿನಿಧಿಗಳು ಸಮಾವೇಶದಲ್ಲಿ ಪಾಲ್ಗೊಳ್ಳುತ್ತಾರೆ’ ಎಂದು ವಿವರಿಸಿದರು.

‘ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಎಚ್.ಎನ್.ನಾಗಮೋಹನ್‌ದಾಸ್ ಡಿ.14ರಂದು ಸಮ್ಮೇಳನ ಉದ್ಘಾಟಿಸುತ್ತಾರೆ. ಚಿತ್ರನಟ ಚೇತನ್, ಸಾಹಿತಿ ಕೆ.ಷರೀಫಾ, ಕವಿ ಲಕ್ಷ್ಮಿಪತಿ ಕೋಲಾರ ಭಾಗವಹಿಸುತ್ತಾರೆ. ದೇವರಾಜ್ ನಿಸರ್ಗತನಯ ಅವರ ‘ಕಣ್ಣಂಚಿನ ಬೆಳಕು’ ಕವನ ಸಂಕಲನವನ್ನು ಸಾಹಿತಿ ಸತ್ಯಮಂಗಲ ಮಹದೇವ ಬಿಡುಗಡೆ ಮಾಡುತ್ತಾರೆ’ ಎಂದು ಮಾಹಿತಿ ನೀಡಿದರು.

ವಿಚಾರ ಸಂಕಿರಣ: ‘ಸಮ್ಮೇಳನದ ಮೊದಲ ದಿನ ಮಧ್ಯಾಹ್ನ 12.30ಕ್ಕೆ ಬಹುತ್ವ ಭಾರತಕ್ಕಾಗಿ ಸಾಂಸ್ಕೃತಿಕ ಅನುಸಂಧಾನ ಕುರಿತು ವಿಚಾರ ಸಂಕಿರಣ ನಡೆಯಲಿದೆ. ಸಾಹಿತಿ ಕೆ.ಆರ್.ಹುಡಗಿ ಅಧ್ಯಕ್ಷತೆ ವಹಿಸುತ್ತಾರೆ. ರಾಷ್ಟ್ರೀಯ ನಾಟಕ ಶಾಲೆಯ (ಎನ್‌ಎಸ್‌ಡಿ) ನಿರ್ದೇಶಕ ಸಿ.ಬಸವಲಿಂಗಯ್ಯ, ಶಾಸ್ತ್ರೀಯ ಕನ್ನಡ ಅಧ್ಯಯನ ಕೇಂದ್ರದ ಮುಖ್ಯಸ್ಥ ಆರ್.ಚಲಪತಿ ವಿಷಯ ಮಂಡಿಸುತ್ತಾರೆ’ ಎಂದು ಸಮ್ಮೇಳನದ ಸ್ವಾಗತ ಸಮಿತಿ ಅಧ್ಯಕ್ಷ ಪಿಚ್ಚಳ್ಳಿ ಶ್ರೀನಿವಾಸ್ ತಿಳಿಸಿದರು.

‘ಸಾಹಿತಿ ಬೊಳುವಾರು ಮಹಮ್ಮದ್ ಕುಂಞ್ ಮಧ್ಯಾಹ್ನ 3ಕ್ಕೆ ನಡೆಯುವ ಜನಪರ ಚಳವಳಿಗಳು– ಜನ ಕಲೆಗಳು ಕುರಿತ ವಿಚಾರ ಸಂಕಿರಣದ ಅಧ್ಯಕ್ಷತೆ ವಹಿಸುತ್ತಾರೆ. ಸಾಹಿತಿ ಕೋಟಿಗಾನಹಳ್ಳಿ ರಾಮಯ್ಯ, ಸಮುದಾಯ ಸಾಂಸ್ಕೃತಿಕ ಸಂಘಟನೆ ಸದಸ್ಯರಾದ ವಾಸುದೇವ್ ಉಚ್ಚಿಲ್, ಉದಯ ಗಾಂವ್ಕರ್ ಭಾಗವಹಿಸುತ್ತಾರೆ. ಲಕ್ಷ್ಮಿಪತಿ ಕೋಲಾರ ರಚನೆಯ ‘ಕನ್ನಗತ್ತಿ’ ನಾಟಕ ಪ್ರದರ್ಶಿಸಲಾಗುತ್ತಿದೆ’ ಎಂದರು.

‘ಡಿ.15ರಂದು ಬೆಳಿಗ್ಗೆ 9 ಗಂಟೆಯಿಂದ ಮಧ್ಯಾಹ್ನ 3ರವರೆಗೆ ಪ್ರತಿನಿಧಿಗಳ ಸಮಾವೇಶ ನಡೆಯುತ್ತದೆ. ಸಂಜೆ 4ಕ್ಕೆ ನಡೆಯುವ ಸಮಾರೋಪ ಸಮಾರಂಭದಲ್ಲಿ ವಿಧಾನ ಪರಿಷತ್‌ ಮಾಜಿ ಸಭಾಪತಿ ವಿ.ಆರ್.ಸುದರ್ಶನ್, ಜಿಲ್ಲಾಧಿಕಾರಿ ಜೆ.ಮಂಜುನಾಥ್, ಜಿ.ಪಂ ಅಧ್ಯಕ್ಷ ಸಿ.ಎಸ್.ವೆಂಕಟೇಶ್, ಸಮುದಾಯ ಸಂಘಟನೆ ಉಪಾಧ್ಯಕ್ಷ ಸುರೇಂದ್ರರಾವ್ ಭಾಗವಹಿಸುತ್ತಾರೆ. ಸಂಜೆ 6.30ಕ್ಕೆ ಸೂಫಿ ಗಾಯಕ ಮುಕ್ತಿಯಾರ್ ಆಲಿ ಅವರಿಂದ ಗಾಯಮವಿದೆ’ ಎಂದು ವಿವರಿಸಿದರು.

ಸಹಕಾರ ನೀಡಬೇಕು: ‘ಸಮುದಾಯ ಕರ್ನಾಟಕ ರಾಜ್ಯ ಸಮಿತಿ ಸಹಯಾನದ ಜತೆಗೆ ರಾಜ್ಯದೆಲ್ಲೆಡೆ ಕಾಲೇಜು ವಿದ್ಯಾರ್ಥಿಗಳು ಹಾಗೂ ಜನರ ನಡುವೆ ಸಂವಿಧಾನ ಓದು ಅಭಿಯಾನ ನಡೆಸಲಾಗುತ್ತಿದ್ದು, ಇದು ಸಮುದಾಯದ ಪ್ರಮುಖ ಚಟುವಟಿಕೆಯಾಗಿದೆ. ಜಿಲ್ಲೆಯಲ್ಲಿ ನಡೆಯುತ್ತಿರುವ ರಾಜ್ಯ ಸಮ್ಮೇಳನಕ್ಕೆ ಸಾರ್ವಜನಿಕರು ಸಂಪೂರ್ಣ ಸಹಕಾರ ನೀಡಬೇಕು’ ಎಂದು ಸಮ್ಮೇಳನದ ಸ್ವಾಗತ ಸಮಿತಿ ಉಪಾಧ್ಯಕ್ಷೆ ವಿ.ಗೀತಾ ಮನವಿ ಮಾಡಿದರು.

ಸಮ್ಮೇಳನದ ಸ್ವಾಗತ ಸಮಿತಿ ಕಾರ್ಯಾಧ್ಯಕ್ಷ ಜೆ.ಜಿ.ನಾಗರಾಜ್ ಹಾಜರಿದ್ದರು.

ಪ್ರತಿಕ್ರಿಯಿಸಿ (+)