ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂದಿನ ಎಸ್ಸೆಸ್ಸೆಲ್ಸಿ ಪರೀಕ್ಷೆ: ಸಕಲ ಸಿದ್ಧತೆ

ಪರೀಕ್ಷಾ ಅಕ್ರಮ ತಡೆಗೆ ಕಟ್ಟೆಚ್ಚರ: ಕೇಂದ್ರದಲ್ಲಿ ಮೊಬೈಲ್ ಬಳಕೆಗೆ ನಿರ್ಬಂಧ
Last Updated 20 ಮಾರ್ಚ್ 2019, 14:02 IST
ಅಕ್ಷರ ಗಾತ್ರ

ಕೋಲಾರ: ಜಿಲ್ಲೆಯಾದ್ಯಂತ ಗುರುವಾರದಿಂದ (ಮಾರ್ಚ್‌ 21) 71 ಕೇಂದ್ರಗಳಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆ ಆರಂಭವಾಗಲಿದ್ದು, ಜಿಲ್ಲಾಡಳಿತವು ಪರೀಕ್ಷೆಗೆ ಸಕಲ ಸಿದ್ಧತೆ ಮಾಡಿದೆ.

ಜಿಲ್ಲೆಯಲ್ಲಿ 20,193 ವಿದ್ಯಾರ್ಥಿಗಳು ಪರೀಕ್ಷೆಗೆ ಹೆಸರು ನೋಂದಾಯಿಸಿದ್ದು, ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಜಿಲ್ಲಾಡಳಿತವು ಪರೀಕ್ಷಾ ಅಕ್ರಮ ತಡೆಗೆ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ.

18,999 ಮಂದಿ ಹೊಸ ವಿದ್ಯಾರ್ಥಿಗಳು, 431 ಮಂದಿ ಹೊಸ ಖಾಸಗಿ ಅಭ್ಯರ್ಥಿಗಳು, 640 ಪುನರಾವರ್ತಿತ ಅಭ್ಯರ್ಥಿಗಳು, 161 ಮಂದಿ ಖಾಸಗಿ ಪುನರಾವರ್ತಿತ ವಿದ್ಯಾರ್ಥಿಗಳು, 20 ಮಂದಿ ಹೊಸ ಪಠ್ಯಕ್ರಮದ ಪುನರಾವರ್ತಿತ ಅಭ್ಯರ್ಥಿಗಳು ಹಾಗೂ ಹೊಸ ಪಠ್ಯಕ್ರಮದ ಇಬ್ಬರು ಖಾಸಗಿ ಅಭ್ಯರ್ಥಿಗಳು ಪರೀಕ್ಷೆ ತೆಗೆದುಕೊಂಡಿದ್ದಾರೆ.

ಬಂಗಾರಪೇಟೆ ಮತ್ತು ಕೆಜಿಎಫ್‌ ತಾಲ್ಲೂಕಿನಲ್ಲಿ ತಲಾ 10 ಕೇಂದ್ರ, ಕೋಲಾರ 17, ಮಾಲೂರು 10, ಮುಳಬಾಗಿಲಿನ 11 ಹಾಗೂ ಶ್ರೀನಿವಾಸಪುರ ತಾಲ್ಲೂಕಿನ 13 ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದೆ. ಒಟ್ಟಾರೆ ವಿದ್ಯಾರ್ಥಿಗಳಲ್ಲಿ 10,476 ಬಾಲಕರು ಹಾಗೂ 9,717 ಮಂದಿ ಬಾಲಕಿಯರು ಪರೀಕ್ಷೆ ಬರೆಯಲಿದ್ದು, ಕೇಂದ್ರಗಳಲ್ಲಿ ಮೂಲಸೌಕರ್ಯ ಸೇರಿದಂತೆ ಎಲ್ಲಾ ವ್ಯವಸ್ಥೆ ಮಾಡಲಾಗಿದೆ.

ಜಿಲ್ಲೆಯ 6 ಶೈಕ್ಷಣಿಕ ವಲಯಗಳ ಪೈಕಿ ಬಂಗಾರಪೇಟೆ ತಾಲ್ಲೂಕಿನಲ್ಲಿ 3,154 ಮಂದಿ, ಕೆಜಿಎಫ್ 2,761, ಕೋಲಾರ 5,321, ಮಾಲೂರು 3,019, ಮುಳಬಾಗಿಲು 3,173 ಹಾಗೂ ಶ್ರೀನಿವಾಸಪುರ ತಾಲ್ಲೂಕಿನಲ್ಲಿ 2,765 ವಿದ್ಯಾರ್ಥಿಗಳು ಈ ಬಾರಿ ಹೊಸದಾಗಿ ಪರೀಕ್ಷೆ ಬರೆಯುತ್ತಿದ್ದಾರೆ.

1,500 ಸಿಬ್ಬಂದಿ: ಪರೀಕ್ಷೆ ಸುಸೂತ್ರವಾಗಿ ನಡೆಸುವ ನಿಟ್ಟಿನಲ್ಲಿ ಮುಖ್ಯ ಅಧೀಕ್ಷಕರು, ಸ್ಥಾನಿಕ ಜಾಗೃತ ದಳ, ಕೊಠಡಿ ಮೇಲ್ವಿಚಾರಕರು ಸೇರಿದಂತೆ 1,500ಕ್ಕೂ ಹೆಚ್ಚು ಸಿಬ್ಬಂದಿಯನ್ನು ಪರೀಕ್ಷಾ ಕಾರ್ಯಕ್ಕೆ ನಿಯೋಜಿಸಲಾಗಿದೆ. ಪರೀಕ್ಷಾ ಕೇಂದ್ರಗಳ ಪೈಕಿ ಸರ್ಕಾರಿ ಶಾಲೆಗಳಲ್ಲಿ 32, ಅನುದಾನಿತ 23 ಹಾಗೂ ಅನುದಾನರಹಿತ ಶಾಲೆಗಳಲ್ಲಿ 15 ಕೇಂದ್ರಗಳಿವೆ. ಇದರಲ್ಲಿ ಖಾಸಗಿ ಅಭ್ಯರ್ಥಿಗಳಿರುವ ಕೋಲಾರದ 2 ಕೇಂದ್ರಗಳನ್ನು ಸೂಕ್ಷ್ಮವೆಂದು ಪರಿಗಣಿಸಲಾಗಿದೆ. ನಕಲು, ಪ್ರಶ್ನೆಪತ್ರಿಕೆ ಸೋರಿಕೆ ಸೇರಿದಂತೆ ಯಾವುದೇ ಪರೀಕ್ಷಾ ಅಕ್ರಮ ನಡೆಯದಂತೆ ಕಟ್ಟೆಚ್ಚರ ವಹಿಸಲಾಗಿದೆ.

ಪರೀಕ್ಷೆ ಆರಂಭಕ್ಕೂ ಮುನ್ನ ಪ್ರಶ್ನೆಪತ್ರಿಕೆಗಳನ್ನು ಕೇಂದ್ರಕ್ಕೆ ತಲುಪಿಸಲು ಹಾಗೂ ಪರೀಕ್ಷೆಯ ನಂತರ ಉತ್ತರ ಪತ್ರಿಕೆಗಳನ್ನು ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕರ ಕಚೇರಿಗೆ ತಲುಪಿಸಲು 24 ಮಾರ್ಗಾಧಿಕಾರಿಗಳ ತಂಡ ರಚಿಸಲಾಗಿದೆ.

ವಿಶೇಷ ವೀಕ್ಷಕರು: 73 ಮಂದಿ ಮುಖ್ಯ ಅಧೀಕ್ಷಕರು, 73 ಮಂದಿ ಅಭಿರಕ್ಷರು, ಪ್ರತಿ ಕೇಂದ್ರಕ್ಕೆ ತಲಾ ಒಬ್ಬರು ಸ್ಥಾನಿಕ ಜಾಗೃತ ದಳ ಸಿಬ್ಬಂದಿ ನೇಮಿಸಲಾಗಿದೆ. ಜತೆಗೆ ಜಿಲ್ಲಾಧಿಕಾರಿಯು ಇತರೆ ಇಲಾಖೆಗಳ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳನ್ನು ಪ್ರತಿ ಕೇಂದ್ರಕ್ಕೆ ಒಬ್ಬರಂತೆ ವಿಶೇಷ ವೀಕ್ಷಕರನ್ನಾಗಿ ನೇಮಿಸಿದ್ದಾರೆ.

ಅಲ್ಲದೇ, ಡಿಡಿಪಿಐ ಮತ್ತು ಡಿವೈಪಿಸಿ ನೇತೃತ್ವದಲ್ಲಿ 2 ಸಂಚಾರ ಜಾಗೃತ ದಳ ಕಾರ್ಯ ನಿರ್ವಹಿಸಲಿವೆ. ಪ್ರತಿ ತಾಲ್ಲೂಕಿನಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ನೇತೃತ್ವದಲ್ಲಿ ತಲಾ 1 ಜಾಗೃತ ದಳ ರಚಿಸಲಾಗಿದೆ. ಜತೆಗೆ ಅಂತರ ಜಿಲ್ಲಾ  ಜಾಗೃತ ದಳ ಮತ್ತು ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯ ಜಾಗೃತ ದಳಗಳು ಪರೀಕ್ಷಾ ಅಕ್ರಮದ ಮೇಲೆ ಹದ್ದಿನ ಕಣ್ಣಿಡಲಿವೆ.

ಗುರುತಿನ ಚೀಟಿ: ಪರೀಕ್ಷಾ ಕೇಂದ್ರದಲ್ಲಿ ಕರ್ತವ್ಯಕ್ಕೆ ನಿಯೋಜನೆಗೊಂಡ ಎಲ್ಲಾ ಸಿಬ್ಬಂದಿಗೂ ರಾಜ್ಯ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯೇ ಗುರುತಿನ ಚೀಟಿ ವಿತರಿಸಿದೆ. ಗುರುತಿನ ಚೀಟಿ ಇಲ್ಲದ ವ್ಯಕ್ತಿಗಳು ಕೇಂದ್ರ ಪ್ರವೇಶ ನೀಡದಂತೆ ಮಂಡಳಿ ಆದೇಶಿಸಿದೆ.

ಎಲ್ಲಾ ಪರೀಕ್ಷಾ ಕೇಂದ್ರಗಳಲ್ಲಿ ಮಾರ್ಚ್‌ 21ರಿಂದ ಏ.4ರವರೆಗೂ ಒಬ್ಬೊಬ್ಬ ಶುಶ್ರೂಷಕಿಯರನ್ನು ನೇಮಿಸಿ ವಿದ್ಯಾರ್ಥಿಗಳಿಗೆ ಪ್ರಥಮ ಚಿಕಿತ್ಸೆ ಸೌಲಭ್ಯ ಒದಗಿಸಲಾಗಿದೆ. ಕೇಂದ್ರದ ಮುಖ್ಯ ಅಧೀಕ್ಷಕರನ್ನು ಹೊರತುಪಡಿಸಿ ಇತರ ಸಿಬ್ಬಂದಿಗೆ ಮೊಬೈಲ್ ಬಳಸದಂತೆ ಆದೇಶ ಹೊರಡಿಸಲಾಗಿದೆ. ವಿದ್ಯಾರ್ಥಿಗಳು ಸಹ ಮೊಬೈಲ್, ಎಲೆಕ್ಟ್ರಾನಿಕ್ ಉಪಕರಣಗಳನ್ನು ಪರೀಕ್ಷಾ ಕೇಂದ್ರದೊಳಗೆ ಕೊಂಡೊಯ್ಯುವಂತಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT