ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಸಿದ ಬೆಲೆ: ನಷ್ಟದಲ್ಲಿ ಟೊಮೆಟೊ ಬೆಳೆಗಾರ

Last Updated 24 ಮೇ 2021, 6:47 IST
ಅಕ್ಷರ ಗಾತ್ರ

ಕೋಲಾರ: ಲಾಕ್‌ಡೌನ್‌ನಿಂದಾಗಿ ಮುಚ್ಚಿರುವ ಹೋಟೆಲ್‌ಗಳು, ನಿರ್ಬಂಧಿತ ಕಾರ್ಯಕ್ರಮಗಳು ಹಾಗೂ ಅಂತರರಾಜ್ಯ ಸಾರಿಗೆಗೆ ನಿರ್ಬಂಧ ಇರುವ ಪರಿಣಾಮ ಚಿಕ್ಕಬಳ್ಳಾಪುರ ಹಾಗೂ ಕೋಲಾರ ಭಾಗದ ಟೊಮೆಟೊ ಬೆಳೆಗಾರರು ನಷ್ಟದ ಕೂಪಕ್ಕೆ ಸಿಲುಕಿದ್ದಾರೆ.

ಟೊಮೆಟೊ ಉತ್ಪಾದನೆ ಜಾಸ್ತಿಯಾಗಿರುವ ಪರಿಣಾಮ ಮಾರುಕಟ್ಟೆಗೆ ಹೆಚ್ಚಿನ ಪ್ರಮಾಣದ ಟೊಮೆಟೊ ಆವಕವಾಗಿದೆ. ಇದರಿಂದ ಬೇಡಿಕೆ ತುಸು ಕಡಿಮೆಯೂ ಆಗಿದೆ. ಕೊರೊನಾ ಕರಿನೆರಳಿನಿಂದಾಗಿ ಈ ವರ್ಷವೂ ನಷ್ಟ ಖಚಿತ ಎಂದು ಟೊಮೆಟೊ ಬೆಳೆಗಾರರು ಅಳಲು ತೋಡಿಕೊಳ್ಳುತ್ತಾರೆ.

‘ಬೆಳೆದ ಶೇ 30ಕ್ಕೂ ಹೆಚ್ಚು ಪ್ರಮಾಣದ ಟೊಮೊಟೊ ಎರಡು ತಿಂಗಳಿನಿಂದ ಮಾರಾಟವಾಗಿಲ್ಲ. ಕೋಲಾರದ ಸಿಎಂಆರ್ ಮಂಡಿಯಲ್ಲಿ ಟೊಮೊಟೊ ಹರಾಜು ಕರೆಯದೇ ಇರುವುದರಿಂದ ವಾರಾಂತ್ಯದಲ್ಲಿ ಕನಿಷ್ಠ 10 ಸಾವಿರ ಬಾಕ್ಸ್‌ನಷ್ಟು ಟೊಮೆಟೊ ವ್ಯರ್ಥವಾಗುತ್ತಿದೆ’ ಎನ್ನುವುದು ಟೊಮೊಟೊ ಬೆಳೆಗಾರ ನೋವಿನ ಮಾತು.

ಬೆಳೆ‌ಗೆ ಹಾಕಿದ ಬಂಡವಾಳ ಹಾಗೂ ಕೆಲಸದವರಿಗೆ ಕೂಲಿಯ ಹಣವೂ ಸಿಗದೇ ಇರುವುದರಿಂದ ಬೆಲೆಯಿಲ್ಲದ ಟೊಮೆಟೊಗಳನ್ನು ಗಿಡದಲ್ಲೇ ಬಿಟ್ಟುಬಿಡಲು ಈ ಭಾಗದ ರೈತರು ನಿರ್ಧರಿಸಿದ್ದಾರೆ.

‘ಆರು ಎಕರೆ ಪ್ರದೇಶದಲ್ಲಿ ಟೊಮೊಟೊ ಬೆಳೆಯಲು ₹8 ಲಕ್ಷದವರೆಗೆ ಖರ್ಚಾಗಿದೆ. ಖಾಸಗಿ ಮಂಡಿಗಳಲ್ಲಿ 15 ಕೆ.ಜಿಗೆ ಗರಿಷ್ಠ ₹50 ನೀಡುತ್ತಿದ್ದಾರೆ. ಇದರಿಂದ ಎರಡು ಎಕರೆಯಷ್ಟು ಟೊಮೆಟೊ ತೋಟದಲ್ಲೇ ಉಳಿದಿದೆ’ ಎಂದು ಕೋಲಾರದ ರೈತ ಪೆದ್ದೂರು ಜನಾರ್ದನ ಗೌಡ ತಿಳಿಸಿದರು.

‘ಕೋಲಾರ ಎಪಿಎಂಸಿಗೆ ಕೋಲಾರ ಹಾಗೂ ಅಕ್ಕಪಕ್ಕದ ಜಿಲ್ಲೆಗಳಿಂದ ಪ್ರತಿದಿನ 13ರಿಂದ 10 ಸಾವಿರ ಕ್ವಿಂಟಲ್ ಟೊಮೆಟೊ ಆವಕವಾಗುತ್ತಿದ್ದು, ಕಳೆದ ವರ್ಷಕ್ಕಿಂತ ಆವಕ ಪ್ರಮಾಣ ಹೆಚ್ಚಾಗಿದೆ’ ಎಂದು ಎ‍ಪಿಎಂಸಿ ಕಾರ್ಯದರ್ಶಿ ಟಿ.ಎಸ್.ರವಿಕುಮಾರ್ ತಿಳಿಸಿದರು.

‘ಸ್ಥಳೀಯವಾಗಿ ಟೊಮೆಟೊ ಬಳಕೆ ಕಡಿಮೆ. ಬೇರೆ ರಾಜ್ಯಗಳಲ್ಲಿ ಎಪಿಎಂಸಿಗಳನ್ನು ಮುಚ್ಚಿರುವುದರಿಂದ ವ್ಯಾಪಾರ ನೆಲಕಚ್ಚಿದೆ. ಚಿಲ್ಲರೆ ವ್ಯಾಪಾರದ ಮೇಲೂ ಪರಿಣಾಮ ಬೀರಿರುವುದರಿಂದ ಟೊಮೊಟೊ ದರ ಭಾರಿ ಇಳಿಮುಖ ಕಂಡಿದೆ’ ಎಂದೂ ಹೇಳಿದರು.

‘ಬೇರೆ ರಾಜ್ಯಗಳಲ್ಲಿ ಮುಂದಿನ ವಾರದಲ್ಲಿ ಟೊಮೆಟೊಗೆ ಬೇಡಿಕೆ ಹೆಚ್ಚಾಗುವ ನಿರೀಕ್ಷೆ ಇದೆ. ಸದ್ಯ 15 ಕೆ.ಜಿ ಟೊಮೊಟೊ ಬಾಕ್ಸ್‌ ₹60ರವರೆಗೆ ಮಾರಾಟವಾಗುತ್ತಿದ್ದು, ಜೂನ್‌ ವೇಳೆಗೆ ₹200ಕ್ಕೆ ಏರಿಕೆ ಕಾಣುವ ನಿರೀಕ್ಷೆಯಿದೆ’ ಎಂದು ಮಾಹಿತಿ ನೀಡಿದರು.

‘ರಾಜ್ಯದಾದ್ಯಂತಟೊಮೆಟೊ ಸೇರಿದಂತೆ ಹಲವು ತರಕಾರಿ ದರಗಳು ಕುಸಿದಿವೆ. ಲಾಕ್‌ಡೌನ್ ಜಾರಿಯಿಂದ ನೆರೆ ರಾಜ್ಯಗಳಿಗೂ ಪೂರೈಕೆಯಾಗುತ್ತಿಲ್ಲ. ಸಂಕಷ್ಟದಲ್ಲಿರುವ ರೈತರಿಗೆ ಸರ್ಕಾರ ಕನಿಷ್ಠ ಬೆಂಬಲ ಬೆಲೆ ನಿಗದಿ ಪಡಿಸಬೇಕು’ ಎಂದು ರಾಜ್ಯ ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ ಆಗ್ರಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT