ಕೋಲಾರ: ಸ್ಥಳೀಯ ಎಪಿಎಂಸಿ ಮಾರುಕಟ್ಟೆಯಲ್ಲಿ ಗುರುವಾರ ನಡೆದ ಹರಾಜಿನಲ್ಲಿ 15 ಕೆ.ಜಿ ನಾಟಿ ಟೊಮೆಟೊ ಬಾಕ್ಸ್ ಕೇವಲ ₹500ಕ್ಕೆ ಮಾರಾಟವಾಗಿದೆ.
ಹರಾಜಿನಲ್ಲಿ ಗರಿಷ್ಠ ₹ 530 ಹಾಗೂ ಕನಿಷ್ಠ ₹ 150ಕ್ಕೆ ಮಾರಾಟವಾಗಿದೆ. ರೈತನಿಗೆ ಕೆ.ಜಿಗೆ ಸರಾಸರಿ ₹33 ದರ ಲಭಿಸಿದೆ. ಚಿಲ್ಲರೆ ಮಾರುಕಟ್ಟೆಯಲ್ಲೂ ಇದೆ ದರ ಇದೆ.
ಏಪ್ರಿಲ್ ಹಾಗೂ ಮೇ ತಿಂಗಳಿನಲ್ಲಿ ನಾಟಿ ಮಾಡಿದ್ದ ಟೊಮೆಟೊ ಈಗ ಫಸಲು ಕೊಡುತ್ತಿದ್ದು, ಮಾರುಕಟ್ಟೆಗೆ ಬರುತ್ತಿರುವ ಟೊಮೆಟೊ ತೀರಾ ಹೆಚ್ಚಳವಾಗಿದೆ. ಇದರಿಂದ ಎಪಿಎಂಸಿಯಲ್ಲಿ ಭಾರಿ ಪ್ರಮಾಣದಲ್ಲಿ ಟೊಮೆಟೊ ಆವಕವಾಗುತ್ತಿದೆ. ಇದರಿಂದ ಸಗಟು ಮತ್ತು ಚಿಲ್ಲರೆ ಮಾರುಕಟ್ಟೆಯಲ್ಲಿ ಟೊಮೆಟೊ ದರ ಭಾರಿ ಇಳಿಕೆ ಕಂಡಿದೆ.
ಇದೇ ಪ್ರಮಾಣದ ಟೊಮೆಟೊ ಜುಲೈ 31 ರಂದು ಗರಿಷ್ಠ ₹ 2,700ಕ್ಕೆ ಮಾರಾಟವಾಗಿ ಸಾರ್ವಕಾಲಿಕ ದಾಖಲೆ ನಿರ್ಮಿಸಿತ್ತು. 17 ದಿನಗಳ ಅಂತರದಲ್ಲಿ 15 ಕೆ.ಜಿ.ಟೊಮೊಟೊ ಬಾಕ್ಸ್ ದರ ₹ 2 ಸಾವಿರಕ್ಕೂ ಅಧಿಕ ಇಳಿಕೆ ಆದಂತಾಗಿದೆ.
ಗುರುವಾರ ಕೋಲಾರ ಎಪಿಎಂಸಿಗೆ 17,546 ಕ್ವಿಂಟಲ್ ಅಂದರೆ 1.17 ಲಕ್ಷ ಬಾಕ್ಸ್ ಟೊಮೆಟೊ ಆವಕವಾಗಿತ್ತು. 17 ದಿನಗಳ ಅಂತರದಲ್ಲಿ ಸುಮಾರು 64 ಸಾವಿರ ಬಾಕ್ಸ್ ಆವಕ ಹೆಚ್ಚಿದೆ. ಜುಲೈ 31 ರಂದು ಕೇವಲ 52,820 ಬಾಕ್ಸ್ ಆವಕವಾಗಿತ್ತು. ಹೀಗಾಗಿ, ಬೇಡಿಕೆ ತಗ್ಗಿದೆ ಎಂದು ಎಪಿಎಂಸಿ ಮೂಲಗಳು ತಿಳಿಸಿವೆ.