ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಾಕ್‌ಡೌನ್: ಟೊಮೆಟೊ ಮಾರುಕಟ್ಟೆ ತತ್ತರ

ರಾಷ್ಟ್ರೀಯ ಹೆದ್ದಾರಿ 75ರ ಎನ್.ವಡ್ಡಹಳ್ಳಿಯಲ್ಲಿ 45 ವರ್ಷಗಳಿಂದ ವಹಿವಾಟು
Last Updated 6 ಏಪ್ರಿಲ್ 2020, 16:58 IST
ಅಕ್ಷರ ಗಾತ್ರ

ನಂಗಲಿ: ಕೊರೊನಾ ವೈರಸ್‌ನಿಂದ ಏಷ್ಯಾದ ಅತಿ ದೊಡ್ಡ ಟೊಮೆಟೊ ಮಾರುಕಟ್ಟೆ ಎಂಬ ಹೆಗ್ಗಳಿಕೆ ಹೊಂದಿರುವ ಎನ್.ವಡ್ಡಹಳ್ಳಿಯ ಎಪಿಎಂಸಿ ಉಪ ಮಾರುಕಟ್ಟೆಯ ಆವರಣದ ಟೊಮೆಟೊ ಮಾರುಕಟ್ಟೆ ತತ್ತರಿಸಿದೆ.

ರಾಷ್ಟ್ರೀಯ ಹೆದ್ದಾರಿ 75ರ ಎನ್.ವಡ್ಡಹಳ್ಳಿಯಲ್ಲಿ ಸುಮಾರು 45 ವರ್ಷಗಳಿಂದ ಇರುವ ಟೊಮೆಟೊ ಮಾರುಕಟ್ಟೆಯಿಂದ ಹಲವು ದೇಶಗಳಿಗೆ ಹಾಗೂ ದೇಶದ ವಿವಿಧ ರಾಜ್ಯಗಳಿಗೆ ಪ್ರತಿದಿನ 100 ಲೋಡುಗಳಷ್ಟು ಟೊಮೆಟೊ ಸರಬರಾಜು ಆಗುತ್ತಿತ್ತು. ಆದರೆ ಕೊರೊನಾ ವೈರಸ್‌ನಿಂದಾಗಿ ವ್ಯಾಪಾರ ವಹಿವಾಟು ಸಂಪೂರ್ಣ ಇಳಿಮುಖ ಕಂಡಿದೆ. ದಿನಕ್ಕೆ 10 ಲೋಡುಗಳ ವ್ಯಾಪಾರವೂ
ನಡೆಯುತ್ತಿಲ್ಲ.

ತಮಿಳುನಾಡಿನ ಮಾರುಕಟ್ಟೆಗೆ ಇಲ್ಲಿಂದ ಟೊಮೆಟೊ ಸರಬರಾಜಾಗುತ್ತಿತ್ತು. ಈಗ ಖರೀದಿಸಲು ವ್ಯಾಪಾರಿಗಳು ಬರುತ್ತಿಲ್ಲ. ದೂರದ ರಾಜ್ಯಗಳಿಂದ ಬರುತ್ತಿದ್ದ ವ್ಯಾಪಾರಿಗಳು ಕೊರೊನಾ ಭೀತಿಯಿಂದ ಮಾರುಕಟ್ಟೆಗೆ ಬಂದು ಸರಕನ್ನು ಕೊಳ್ಳುತ್ತಿಲ್ಲ. ಆದ್ದರಿಂದ ಟೊಮೆಟೊ ಮಾರುಕಟ್ಟೆಯಲ್ಲಿ ಕೊಳೆತು ಹಾಳಾಗುತ್ತಿದೆ.

ಬರಗಾಲದಿಂದ ಅಂತರ್ಜಲ ಕುಸಿದು ಸಾವಿರಾರು ಅಡಿಗಳಷ್ಟು ಕೊಳವೆ ಬಾವಿಗಳನ್ನು ಕೊರೆದರೂ ನೀರು ಸಿಗುತ್ತಿಲ್ಲ. ಆದರೂ ಬರುವ ಅಲ್ಪ ಸ್ವಲ್ಪ ನೀರಿನಲ್ಲಿ ಲಕ್ಷಾಂತರ ರೂಪಾಯಿ ಖರ್ಚುಮಾಡಿ ಟೊಮೆಟೊ ಬೆಳೆದಿದ್ದಾರೆ. ಕಳೆದ ವರ್ಷ ಮಾರ್ಚ್ ತಿಂಗಳಲ್ಲಿ 15 ಕೆ.ಜಿ ಟೊಮೆಟೊಗೆ ಸುಮಾರು ₹400 ರಿಂದ ₹500 ಬೆಲೆ ಇತ್ತು ನಂತರ ಸುಮಾರು ₹ 800 ರ ವರೆಗೂ ಹೆಚ್ಚಾಯಿತು. ಲಾದಭ ಆಸೆಯಿಂದ ಬೆಳೆದಿದ್ದ ಬೆಳೆಗಾರರ ಬದುಕು ಕೊರೊನಾ ಎಂಬ ಹೆಮ್ಮಾರಿಗೆ ಬಲಿಯಾದಂತಾಗಿದೆ.

ತಾಲ್ಲೂಕಿನಲ್ಲಿ ಉದ್ಯೋಗ ಸೃಷ್ಟಿಸುವ ಕಾರ್ಖಾನೆ ಅಥವಾ ಕಂಪನಿಗಳು ಇಲ್ಲದೆ ಇರುವುದರಿಂದ ಅಂದಾಜು 2000 ಮಂದಿ ಕೆಲಸಗಾರರು ಮಾರುಕಟ್ಟೆಯಿಂದ ಬದುಕು ಕಟ್ಟಿಕೊಂಡಿದ್ದರು. ಇದೀಗ ಅಲ್ಪ ಪ್ರಮಾಣದ ಸರಕು ಸಾಗಾಟ ಆಗುತ್ತಿರುವುದರಿಂದ ಇಲ್ಲಿ ದುಡಿಯುವ ಕೆಲಸಗಾರರಿಗೂ ಕೆಲಸವಿಲ್ಲದೆ ಏನು ಮಾಡಬೇಕೆಂದು ತಿಳಿಯದಂತಾಗಿದೆ ಎನ್ನುತ್ತಾರೆ ಮಾರುಕಟ್ಟೆ ಕೆಲಸಗಾರರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT