ಭಾನುವಾರ, ಫೆಬ್ರವರಿ 28, 2021
21 °C
ರಾಜ್ಯ ಕೋಳಿ ಸಾಕಾಣಿಕೆದಾರರ ಕ್ಷೇಮಾಭಿವೃದ್ಧಿ ಸಂಘದ ಗೌರವಾಧ್ಯಕ್ಷ ಬಯ್ಯಾರೆಡ್ಡಿ ಹೇಳಿಕೆ

ಕೃಷಿ ಕಾಯ್ದೆ ವಿರುದ್ಧ ಟ್ರ್ಯಾಕ್ಟರ್‌ ಪರೇಡ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋಲಾರ: ‘ಕೃಷಿ ವಿರೋಧಿ ಕಾಯ್ದೆಗಳನ್ನು ಹಿಂಪಡೆಯದ ಕೇಂದ್ರ ಸರ್ಕಾರದ ಧೋರಣೆ ಖಂಡಿಸಿ ದೆಹಲಿ ಹಾಗೂ ಬೆಂಗಳೂರಿನಲ್ಲಿ ಜ.26ರಂದು ಟ್ರ್ಯಾಕ್ಟರ್‌ಗಳೊಂದಿಗೆ ರೈತ ಕಾರ್ಮಿಕರ ಪರ್ಯಾಯ ಪರೇಡ್ ನಡೆಸುತ್ತೇವೆ’ ಎಂದು ರಾಜ್ಯ ಕೋಳಿ ಸಾಕಾಣಿಕೆದಾರರ ಕ್ಷೇಮಾಭಿವೃದ್ಧಿ ಸಂಘದ ಗೌರವಾಧ್ಯಕ್ಷ ಜಿ.ಸಿ.ಬಯ್ಯಾರೆಡ್ಡಿ ಹೇಳಿದರು.

ಇಲ್ಲಿ ಶನಿವಾರ ರಾಜ್ಯ ಕೋಳಿ ಸಾಕಾಣಿಕೆದಾರರ ಕ್ಷೇಮಾಭಿವೃದ್ಧಿ ಸಂಘದ ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯ ಸರ್ವ ಸದಸ್ಯರ ವಾರ್ಷಿಕ ಸಭೆಯಲ್ಲಿ ಮಾತನಾಡಿ, ‘ಕೇಂದ್ರದ 3 ಕೃಷಿ ಕಾಯ್ದೆಗಳಿಗೆ ಸುಪ್ರೀಂ ಕೋರ್ಟ್ ತಡೆ ನೀಡಿ ನಾಲ್ಕು ಸದಸ್ಯರ ಸಮಿತಿ ರಚಿಸಿದೆ’ ಎಂದು ತಿಳಿಸಿದರು.

‘ಸಮಿತಿಯ ವರದಿ ಆಧರಿಸಿ ತೀರ್ಮಾನ ತೆಗೆದುಕೊಳ್ಳುವುದಾಗಿ ಕೇಂದ್ರ ಹೇಳಿದೆ. ಆದರೆ, ಇದಕ್ಕೆ ಒಪ್ಪದೆ ಸುಗ್ರೀವಾಜ್ಞೆ ಹಿಂಪಡೆಯುವಂತೆ 5 ಲಕ್ಷ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ದೆಹಲಿಯಲ್ಲಿ ಪಂಜಾಬ್, ಹರಿಯಾಣ, ಉತ್ತರಪ್ರದೇಶ, ಮಹಾರಾಷ್ಟ್ರ, ರಾಜಸ್ತಾನ ಸೇರಿದಂತೆ ಹಲವು ರಾಜ್ಯಗಳ ರೈತ ಕಾರ್ಮಿಕರು 2 ಲಕ್ಷ ಟ್ರ್ಯಾಕ್ಟರ್ ಮತ್ತು ಇತರೆ ವಾಹನಗಳೊಂದಿಗೆ ಜ.26ರಂದು ಪರೇಡ್ ನಡೆಸುತ್ತಾರೆ’ ಎಂದರು.

‘ರೈತ ಕಾರ್ಮಿಕರ ಹೋರಾಟ ಬೆಂಬಲಿಸಿ ರಾಜ್ಯದಲ್ಲೂ ಬೆಂಗಳೂರಿನಲ್ಲಿ ಜ.26ರಂದು ಮಧ್ಯಾಹ್ನ ನಗರ ರೈಲು ನಿಲ್ದಾಣದಿಂದ ಸ್ವಾತಂತ್ರ್ಯ ಉದ್ಯಾನದವರೆಗೆ 1 ಸಾವಿರ ಟ್ರ್ಯಾಕ್ಟರ್‌, ಕಾರು ಮತ್ತು ಇತರೆ ವಾಹನಗಳೊಂದಿಗೆ ಬೃಹತ್ ಪರೇಡ್‌ ನಡೆಸಲಾಗುತ್ತದೆ. ಜಿಲ್ಲೆಯ ಎಲ್ಲಾ ಕೋಳಿ ಸಾಕಾಣಿಕೆದಾರರು ಪರೇಡ್‌ನಲ್ಲಿ ಪಾಲ್ಗೊಳ್ಳಬೇಕು’ ಎಂದು ಮನವಿ ಮಾಡಿದರು.

ಕೃಷಿಯಾಗಿ ಪರಿಗಣಿಸಿ: ‘ರಾಜ್ಯದಲ್ಲಿ ಕೋಳಿ ಸಾಕಾಣಿಕೆಯನ್ನು ಕೃಷಿಯಾಗಿ ಪರಿಗಣಿಸಬೇಕು. ಇದರಿಂದ ಉಚಿತ ವಿದ್ಯುತ್, ₹ 3 ಲಕ್ಷದವರೆಗೆ ಶೂನ್ಯ ಬಡ್ಡಿ ಸಾಲ ಸೌಲಭ್ಯ ಸಿಗುತ್ತದೆ. ಸಣ್ಣ, ಮಧ್ಯಮ ಕೋಳಿ ಸಾಕಾಣಿಕೆದಾರರಿಗೆ ಅನುಕೂಲವಾಗುತ್ತದೆ. ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಆಗಿದ್ದಾಗ ಬಜೆಟ್ ಭಾಷಣದಲ್ಲಿ ಕೃಷಿ ವ್ಯಾಪ್ತಿಗೆ ಕೋಳಿ ಸಾಕಣಿಕೆ ಸೇರ್ಪಡೆ ಮಾಡುವುದಾಗಿ ಘೋಷಿಸಿದ್ದರು. ಆದರೆ, ಕೋಳಿ ಸಾಕಾಣಿಕೆದಾರರ ಸಂಖ್ಯೆ ಬಗ್ಗೆ ಸರ್ಕಾರದಲ್ಲಿ ಮಾಹಿತಿ ಇರಲಿಲ್ಲ’ ಎಂದು ವಿವರಿಸಿದರು.

‘10 ಸಾವಿರ ಕೋಳಿ ಮೇಯಿಸುವವರನ್ನು ಕೃಷಿ ವ್ಯಾಪ್ತಿಗೆ ಸೇರ್ಪಡೆ ಮಾಡಲು ಸರ್ಕಾರ ಉದ್ದೇಶಿಸಿತ್ತು. ಈ ಮಿತಿಯನ್ನು 30 ಸಾವಿರಕ್ಕೆ ಹೆಚ್ಚಿಸುವಂತೆ ಕೋರಲಾಗಿದೆ. ಈ ಮಧ್ಯೆ ಕೋಟ್ಯಂತರ ರೂಪಾಯಿ ವಹಿವಾಟು ನಡೆಸುವ ಕುಕ್ಕುಟ ಉದ್ಯಮದ ಕಂಪನಿಗಳು ಸಹ ಕೃಷಿ ವ್ಯಾಪ್ತಿಯೊಳಗೆ ಪರಿಗಣಿಸುವಂತೆ ಒತ್ತಡ ಹಾಕುತ್ತಿವೆ’ ಎಂದು ಮಾಹಿತಿ ನೀಡಿದರು.

ಸಂಘದ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಸಿ.ಎಂ.ರಮೇಶ್, ಕೋಲಾರ ಜಿಲ್ಲಾ ಘಟಕದ ಅಧ್ಯಕ್ಷ ಡಿ.ಕೆ.ಮುನಿವೆಂಕಟೇಗೌಡ, ಸದಸ್ಯ ರಾಮಕೃಷ್ಣಪ್ಪ ಪಾಲ್ಗೊಂಡರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು