ಬುಧವಾರ, ಸೆಪ್ಟೆಂಬರ್ 22, 2021
27 °C
ಪ್ರಯಾಣಿಕರ ಪ್ರಾಣಕ್ಕೆ ಸಂಚಕಾರ

ಅರ್ಹತೆ ಇಲ್ಲದ ಬಸ್‌ಗಳ ಸಂಚಾರ

ಕಾಂತರಾಜ್ Updated:

ಅಕ್ಷರ ಗಾತ್ರ : | |

Prajavani

ಬಂಗಾರಪೇಟೆ: ತಾಲ್ಲೂಕಿನಲ್ಲಿ ಬಸ್‌ಗಳ ಫಿಟ್ನೆಸ್ ಪ್ರಮಾಣ ಪತ್ರ, ವಿಮೆ ಇಲ್ಲದಿದ್ದರೂ ಕೆಲ ಖಾಸಗಿ ವಾಹನಗಳ ಸಂಚಾರ ನಡೆಸುತ್ತಿವೆ. ಪ್ರಯಾಣಿಕರು ಜೀವದ ಹಂಗು ತೊರೆದು ಪ್ರಯಾಣಿಸುವ ಅನಿವಾರ್ಯ ಎದುರಾಗಿದೆ.

ಮೋಟಾರು ಕಾಯ್ದೆ ಹಾಗೂ ಸಾರಿಗೆ ನಿಯಮ ಉಲ್ಲಂಘಿಸಿದ ಕೆಲ ಬಸ್‌ಗಳನ್ನು ಸಾರಿಗೆ ಇಲಾಖೆ ಕಪ್ಪುಪಟ್ಟಿಗೆ ಸೇರಿಸಿದೆ. ಕಪ್ಪುಪಟ್ಟಿ ತೆರವುಗೊಳಿಸುವ ತನಕ ಎಫ್ಸಿ, ವಿಮೆ ಮಾಡಿಸಲು, ತೆರಿಗೆ ಕಟ್ಟಲು ಆಗುವುದಿಲ್ಲ. ಅಂತಹ ಬಸುಗಳು ರಸ್ತೆಗೆ ಇಳಿಯುವಂತಿಲ್ಲ. ಆದರೆ ಆರೇಳು ವರ್ಷದಿಂದ ಕಪ್ಪುಪಟ್ಟಿಯಲ್ಲಿರುವ ಕೆಲ ಖಾಸಗಿ ಬಸ್‌ಗಳು ರಾಜಾರೋಷವಾಗಿ ಸಂಚರಿಸುತ್ತಿವೆ. ಅಪಘಾತಗಳು ಕೂಡ ಸಂಭವಿಸಿದೆ.

ಮೂರು ದಿನಗಳ ಹಿಂದೆ ಪಟ್ಟಣ ಕಾಮಸಮುದ್ರ ಮುಖ್ಯ ರಸ್ತೆಯಲ್ಲಿ ಸಂಚರಿಸುತ್ತಿದ್ದ ಗುರುರಾಜ ಟ್ರಾವೆಲ್ಸ್ ಮತ್ತು ವೆಂಕಟೇಶ್ವರ ಟ್ರಾವೆಲ್ಸ್ ಮಧ್ಯೆ ಅಪಘಾತ ಸಂಭವಿಸಿದೆ. ಈ ಬಗ್ಗೆ ಬೂದಿಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಎರಡರ ಪೈಕಿ ವೆಂಕಟೇಶ್ವರ ಟ್ರಾವೆಲ್ಸ್ ಅನ್ನು ಬೆಂಗಳೂರು ಪೂರ್ವ ಪ್ರಾದೇಶಿಕ ಸಾರಿಗೆ ಇಲಾಖೆ ಕೆಲ ವರ್ಷದ ಹಿಂದೆಯೇ ಕಪ್ಪುಪಟ್ಟಿಗೆ ಸೇರಿಸಿದೆ. ಈ ಬಗ್ಗೆ ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ಹಾಗೂ ಪೊಲೀಸರು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತಿಲ್ಲ ಎನ್ನುವುದು ಸಾರ್ವಜನಿಕರ ದೂರು.

ಕೆಲ ಖಾಸಗಿ ಬಸ್‌ಗಳು ಪರ್ಮಿಟ್ ಇಲ್ಲದೆ ರಸ್ತೆಗೆ ಇಳಿದಿವೆ. ಅಲ್ಲದೆ ಒಂದು ರಸ್ತೆಗೆ ಪರ್ಮಿಟ್ ಪಡೆದು ಮತ್ತೊಂದು ರಸ್ತೆಯಲ್ಲಿ ಸಂಚರಿಸುತ್ತಿವೆ. ಕೆಎಸ್ಆರ್‌ಟಿಸಿ ಬಸ್‌ಗಳು ಹೊರಡುವ ವೇಳೆಯಲ್ಲೇ ಸಂಚರಿಸುವ ಖಾಸಗಿ ಬಸ್‌ಗಳು ಸರ್ಕಾರದ ಬೊಕ್ಕಸಕ್ಕೆ ನಷ್ಟ ಉಂಟುಮಾಡುತ್ತಿವೆ. ನಿಗದಿತ ವೇಳಾಪಟ್ಟಿ ಕೂಡ ಪಾಲಿಸುತ್ತಿಲ್ಲ. ಒಂದೇ ನೋಂದಣಿ ಸಂಖ್ಯೆಯಡಿ ಎರಡು ಮೂರು ಬಸ್‌ಗಳು ಸಂಚರಿಸುತ್ತಿರುವ ನಿದರ್ಶನಗಳು ಜಿಲ್ಲೆಯಲ್ಲಿ ಕಂಡುಬಂದಿವೆ. ಒಂದು ಬಸ್‌ಗೆ ಮಾತ್ರ ಫಿಟ್ನೆಸ್ ಪ್ರಮಾಣಪತ್ರ (ಎಫ್ಸಿ) ವಿಮೆ ಮಾಡಿಸಿ ಎರಡು ಮೂರು ಬಸ್‌ಗಳಿಗೂ ಅದನ್ನೆ ಬಳಸಿ ಸಾರಿಗೆ ಇಲಾಖೆಯನ್ನು ವಂಚಿಸಿರುವ ಉದಾಹರಣೆಗಳು ಇವೆ.

ಇದೆಲ್ಲಾ ಅಧಿಕಾರಿಗಳ ಕಣ್ಮುಂದೆಯೇ ನಡೆಯುತ್ತಿದ್ದು, ದಂಧೆಯಾಗಿ ಮಾರ್ಪಟ್ಟಿದೆ. ಯಾರ ಸುರಕ್ಷತೆಗೆ ಒತ್ತು ನೀಡದ ಅಧಿಕಾರಿಗಳು ತನ್ನ ಕಿಸೆ ತುಂಬಿಸಿಕೊಳ್ಳುವಲ್ಲಿ ನಿರತರಾಗಿರುವುದು ವಿಪರ್ಯಾಸ ಎನ್ನುತ್ತಾರೆ ಸುನಿಲ್.

ಬಸ್‌ಗಳ ಸಾಮರ್ಥ್ಯಕ್ಕೆ ಅನುಗುಣವಾಗಿ ಪ್ರಯಾಣಿಕರನ್ನು ತುಂಬಬೇಕಿದೆ. ಸ್ಫೋಟಕ ವಸ್ತುಗಳ ಸಾಗಾಣಿಕೆಗೆ ಅವಕಾಶವಿಲ್ಲ. ಹೆಚ್ಚು ತೂಕದ ಸಾಮಾನುಗಳನ್ನು ಸಾಗಿಸುವಂತಿಲ್ಲ. ಇವೆಲ್ಲಾ ಉಲ್ಲಂಘನೆ ಆಗುತ್ತಿದ್ದರೂ ಕೇಳುವವರಿಲ್ಲ.

ರಾಶ್ ಡ್ರೈವಿಂಗ್: ಪ್ರಯಾಣಿಕರನ್ನು ಹತ್ತಿಸಿಕೊಳ್ಳುವಲ್ಲಿ ನಾಮುಂದು ತಾಮುಂದು ಎನ್ನುವ ಬಸ್ ಚಾಲಕರ ರಾಶ್ ಡ್ರೈವಿಂಗ್ ಸಾಮಾನ್ಯವಾಗಿಬಿಟ್ಟಿದೆ. ಇದರಿಂದ ಹಲ ಬಾರಿ ಅಪಘಾತಗಳು ಕೂಡ ನಡೆದಿವೆ.

ರಸ್ತೆಯಲ್ಲೇ ನಿಲುಗಡೆ: ಪಟ್ಟಣದಲ್ಲಿ ಖಾಸಗಿ ಬಸ್ ನಿಲ್ದಾಣ ಕಾಮಗಾರಿ ನನೆಗುದಿಗೆ ಬಿದ್ದಿದ್ದು, ಎಲ್ಲ ಖಾಸಗಿ ಬಸ್‌ಗಳನ್ನು ರಸ್ತೆಯಲ್ಲೇ ನಿಲ್ಲಿಸಲಾಗುತ್ತದೆ. ಪಟ್ಟಣದಲ್ಲಿ ರೈಲ್ವೆ ಜಂಕ್ಷನ್ ಇದ್ದು, ಬೆಂಗಳೂರು ಮತ್ತು ಚೆನೈ ಕಡೆಯಿಂದ ಬರುವ ರೈಲಿನಲ್ಲಿ ಸಾವಿರಾರು ಪ್ರಯಾಣಿಕರು ಬಂದಿಳಿಯುತ್ತಾರೆ. ಆ ಸಂದರ್ಭ ಮುಖ್ಯರಸ್ತೆಯಲ್ಲಿ 10ಕ್ಕೂ ಹೆಚ್ಚು ಬಸ್‌ಗಳು ನಿಂತಿರುತ್ತವೆ.

ಪಟ್ಟಣದ ಮುಖ್ಯ ರಸ್ತೆ ಉದ್ದಕ್ಕೂ ಲಾರಿ, ಕಾರುಗಳನ್ನು ಎಲ್ಲೆಂದರಲ್ಲಿ ಗಂಟೆಗಟ್ಟಲೆ ನಿಲುಗಡೆ ಮಾಡಲಾಗುತ್ತದೆ. ಈ ಬಗ್ಗೆ
ಪೊಲೀಸರು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ನಿವಾಸಿ ಬಾಬು ಒತ್ತಾಯಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು