ಶುಕ್ರವಾರ, ಡಿಸೆಂಬರ್ 13, 2019
17 °C

ಗ್ರಾಹಕರಿಗೆ ಟ್ರಾಯ್‌ನ ಹೊಸ ಆ್ಯಪ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋಲಾರ: ‘ಮೊಬೈಲ್ ಗ್ರಾಹಕರ ಹಿತಾಸಕ್ತಿ ರಕ್ಷಣೆಗಾಗಿ ಭಾರತೀಯ ದೂರ ಸಂಪರ್ಕ ನಿಯಂತ್ರಣ ಪ್ರಾಧಿಕಾರವು (ಟ್ರಾಯ್) 3 ಹೊಸ ಆ್ಯಪ್‌ ಮತ್ತು ವೆಬ್‌ ಪೋರ್ಟಲ್‌ ಆರಂಭಿಸಿದೆ’ ಎಂದು ಟ್ರಾಯ್ ಸಲಹೆಗಾರ ಶ್ರೀನಿವಾಸ್ ಎಸ್‌.ಗಲಗಲಿ ತಿಳಿಸಿದರು.

ಗ್ರಾಹಕರ ಸೇವೆ ಕುರಿತು ಟ್ರಾಯ್‌ ವತಿಯಿಂದ ಇಲ್ಲಿ ಬುಧವಾರ ಹಮ್ಮಿಕೊಂಡಿದ್ದ ಗ್ರಾಹಕರ ಸಂಪರ್ಕ ಸಭೆಯಲ್ಲಿ ಮಾತನಾಡಿ, ‘ಕೇಬಲ್ ಸೇವೆ ನಿಯಂತ್ರಿಸುವ ಉದ್ದೇಶಕ್ಕೆ ಹೊಸ ವ್ಯವಸ್ಥೆ ಜಾರಿ ಮಾಡಲಾಗಿದೆ. ಗ್ರಾಹಕರು ವೀಕ್ಷಿಸುವ ಚಾನೆಲ್‌ಗಳಿಗೆ ಮಾತ್ರ ಶುಲ್ಕ ಪಾವತಿಸುವ ಸ್ವಾತಂತ್ರ್ಯ ಹೊಂದಿರುತ್ತಾರೆ’ ಎಂದರು.

‘ದೂರ ಸಂಪರ್ಕ ಹಾಗೂ ಕೇಬಲ್ ಸೇವೆಗೆ ಸಂಬಂಧಿಸಿದ ದೂರುಗಳಿದ್ದರೆ ಗ್ರಾಹಕರು ದೂರು ಕೇಂದ್ರದಲ್ಲಿ ನೋಂದಾಯಿಸಬೇಕು. ದೂರು ನಿವಾರಣೆಯಲ್ಲಿ ಅಸಮಾಧಾನವಿದ್ದಲ್ಲಿ ಮೇಲ್ಮನವಿ ಪ್ರಾಧಿಕಾರಕ್ಕೆ ಮನವಿ ಸಲ್ಲಿಸಲು ಅವಕಾಶವಿದೆ’ ಎಂದು ಮಾಹಿತಿ ನೀಡಿದರು.

‘ಕೇಬಲ್ ಸೇವೆಗಾಗಿ ಜಾರಿಗೊಳಿಸಿರುವ ಹೊಸ ನಿಯಂತ್ರಣ ಚೌಕಟ್ಟು ಆಯ್ಕೆಯ ಸ್ವಾತಂತ್ರ್ಯ ಒದಗಿಸುತ್ತದೆ. ಗ್ರಾಹಕರು ಆ್ಯೊಪ್‌ ಬಳಸಿ ಸಲಹೆ ಸೂಚನೆ ನೀಡಬಹುದು. ಟ್ರಾಯ್‌ನ ಹೊಸ ಮೊಬೈಲ್ ಪೋರ್ಟಬಿಲಿಟಿ, ಅನಪೇಕ್ಷಿತ ವಾಣಿಜ್ಯ ಉದ್ದೇಶದ ಸಂದೇಶ ನಿಷೇಧ, ಮೌಲ್ಯವರ್ಧಿತ ಸೇವೆಯನ್ನು ಬಳಸಿಕೊಳ್ಳಬೇಕು. ಗ್ರಾಹಕರು ಯಾವುದೇ ಸಲಹೆ ಸೂಚನೆಯನ್ನು ಟ್ರಾಯ್ ವೆಬ್‌ಸೈಟ್‌ಗೆ ಕಳುಹಿಸಬಹುದು’ ಎಂದು ವಿವರಿಸಿದರು.

ಹಲವು ಸೇವೆ: ‘ಪ್ರಾಧಿಕಾರವು ಗ್ರಾಹಕರ ಹಿತಾಸಕ್ತಿ ರಕ್ಷಿಸಲು ಹಲವು ಉತ್ತಮ ದೂರ ಸಂಪರ್ಕ ಸೇವೆ ಜಾರಿಗೆ ತಂದಿದೆ, ದೂರವಾಣಿ ಕರೆ ಗುಣಮಟ್ಟ ತಿಳಿಯಲು ಮೈಕಾಲ್ ಮೊಬೈಲ್ ನೆಟ್‌ವರ್ಕ್, ವೇಗ ತಿಳಿಯಲು ಮೈಸ್ಪೀಡ್ ಹಾಗೂ ಅನಪೇಕ್ಷಿತ ವಾಣಿಜ್ಯಾತ್ಮಕ ಸಂದೇಶ ಕರೆ ನಿಷ್ಕ್ರಿಯಗೊಳಿಸಲು ಡಿಎನ್‌ಡಿ ತಂತ್ರಾಂಶದೊಂದಿಗೆ ಹೊಸ ವೆಬ್ ಪೋರ್ಟಲ್ ಪರಿಚಯಿಸಲಾಗಿದೆ. ಹೊಸ ತಂತ್ರಾಂಶವನ್ನು ಗೂಗಲ್ ಪ್ಲೇ ಸ್ಟೋರ್‌ನಿಂದ ಡೌನ್‌ಲೋಡ್ ಮಾಡಿಕೊಳ್ಳಬಹುದು’ ಎಂದು ಮಾಹಿತಿ ನೀಡಿದರು.

ಟ್ರಾಯ್‌ನ ಜಂಟಿ ಸಲಹೆಗಾರ ಕೆ.ಚಂದ್ರಚೂಡನ್, ಹಿರಿಯ ಸಂಶೋಧನಾ ಅಧಿಕಾರಿ ಎಚ್.ಸಿ.ಆರ್.ರಾಜಗೋಪಾಲ್ ಹಾಜರಿದ್ದರು.

ಪ್ರತಿಕ್ರಿಯಿಸಿ (+)