ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತರಬೇತಿ ಕೇಂದ್ರ ಚೆನ್ನೈಗೆ ಸ್ಥಳಾಂತರ

ಸಣ್ಣ ಕೈಗಾರಿಕೆ ನಿಗಮದ ನಿರ್ಧಾರ: ಕೆಜಿಎಫ್‌ನಲ್ಲಿ ಉಳಿಸಿಕೊಳ್ಳಲು ಮನವಿ
Last Updated 24 ಮಾರ್ಚ್ 2021, 3:20 IST
ಅಕ್ಷರ ಗಾತ್ರ

ಕೆಜಿಎಫ್‌: ರಾಬರ್ಟಸನ್‌ ಪೇಟೆಯಲ್ಲಿರುವ ರಾಷ್ಟ್ರೀಯ ಸಣ್ಣ ಕೈಗಾರಿಕೆ ನಿಗಮದ ತರಬೇತಿ ಘಟಕವನ್ನು ಈ ತಿಂಗಳ ಅಂತ್ಯಕ್ಕೆ ಮುಚ್ಚಿ, ಚೆನ್ನೈಗೆ ಸ್ಥಳಾಂತರಿಸಲು ನಿರ್ಧರಿಸಲಾಗಿದೆ.

ಕೇಂದ್ರ ಸಣ್ಣ ಮತ್ತು ಮಧ್ಯಮ ಕೈಗಾರಿಕೆ ಸಚಿವಾಲಯದ ಶಿಫಾರಸ್ಸಿನ ಮೇರೆಗೆ 2014ರಲ್ಲಿ ನಗರದಲ್ಲಿ ಈ ಘಟಕವನ್ನು ಸ್ಥಾಪಿಸಲಾಗಿತ್ತು. ಕಂಪ್ಯೂಟರ್ ತರಬೇತಿ, ಕಂಪ್ಯೂಟರ್ ಅಕೌಂಟಿಂಗ್‌, ಕಂಪ್ಯೂಟರ್ ಶಿಕ್ಷಕ ತರಬೇತಿ, ಮೊಬೈಲ್‌ ದುರಸ್ತಿ ತರಬೇತಿ, ಎಲೆಕ್ಟ್ರಿಕಲ್‌ ವೈರಿಂಗ್ , ಫ್ಯಾಷನ್‌ ಡಿಸೈನಿಂಗ್‌ ಮೊದಲಾದ ಕೋರ್ಸ್‌ಗಳನ್ನು ಉಚಿತವಾಗಿ ನಾಗರಿಕರಿಗೆ ನೀಡಲಾಗುತ್ತಿತ್ತು. ಜೊತೆಗೆ ಉದ್ಯಮ ಸ್ಥಾಪಿಸಲು ಮುಂದಾಗುವವರಿಗೆ ತರಬೇತಿ, ಅಣಬೆ ಬೇಸಾಯ, ಸ್ಕ್ರೀನ್ ಪ್ರಿಂಟಿಂಗ್ ಮತ್ತು ಗ್ಲಾಸ್‌ ಮೇಲೆ ಚಿತ್ರ ಬಿಡಿಸುವ ತರಬೇತಿ, ಅಗರಬತ್ತಿ ತಯಾರಿಕೆ ಬಗ್ಗೆ ಕೂಡ ತರಬೇತಿಯನ್ನು ನೀಡಲಾಗುತ್ತಿತ್ತು. ಆರು ವರ್ಷಗಳಿಂದ ಸುಮಾರು ಮೂರು ಸಾವಿರಕ್ಕೂ ಹೆಚ್ಚು ನಿರುದ್ಯೋಗಿಗಳು ತರಬೇತಿಯ ಲಾಭ ಪಡೆದಿದ್ದಾರೆ. ಸಂಸ್ಥೆಯ ಮೂಲದ ಪ್ರಕಾರ ತರಬೇತಿ ಪಡೆದವರಲ್ಲಿ ಶೇ 40 ಕ್ಕೂ ಹೆಚ್ಚು ಮಂದಿ ಸ್ವಯಂ ಉದ್ಯೋಗ ಮಾಡಿಕೊಂಡು ಜೀವನ ನಡೆಸುತ್ತಿದ್ದಾರೆ.

ಇತ್ತೀಚಿಗೆ ತರಬೇತಿ ಘಟಕ ನಡೆಸಲು ಅನುದಾನದ ಕೊರತೆ ಉಂಟಾಗಿರುವುದರಿಂದ ಇಲ್ಲಿನ ಘಟಕವನ್ನು ಮುಚ್ಚಲು ದೆಹಲಿಯಲ್ಲಿರುವ ಕೇಂದ್ರ ಕಚೇರಿ ಸೂಚನೆ ನೀಡಿತ್ತು. ಮಾರ್ಚ್ ಅಂತ್ಯಕ್ಕೆ ಈಗ ನಡೆಸುತ್ತಿರುವ ಎಲ್ಲಾ ಕೋರ್ಸ ಗಳನ್ನು ಸ್ಥಗಿತಗೊಳಿಸಿ, ಎಲ್ಲಾ ಯಂತ್ರೋಪಕರಣಗಳನ್ನು ಚೆನ್ನೈ ಕಚೇರಿಗೆ ವರ್ಗಾವಣೆ ಮಾಡಬೇಕು ಎಂದು ಆದೇಶಿಸಲಾಗಿದೆ.

ತರಬೇತಿ ಕೇಂದ್ರವು ನಗರದಲ್ಲಿ ಅತ್ಯಂತ ಜನಪ್ರಿಯವಾಗಿತ್ತು. ಉಚಿತವಾಗಿ ಸಿಗುವ ಗುಣಮಟ್ಟದ ಸೌಲಭ್ಯ ಪಡೆಯಲು ಅರ್ಜಿಗಳ ಮಹಾಪೂರವೇ ಹರಿದುಬರುತ್ತಿತ್ತು. ಮುಂದಿನ ವರ್ಷಕ್ಕೆ ವಿವಿಧ ಕೋರ್ಸ್ ಗಳಿಗೆ ದಾಖಲಾಗಲು ಈಗಾಗಲೇ 400 ಕ್ಕೂ ಹೆಚ್ಚು ಅರ್ಜಿಗಳು ಬಂದಿವೆ.

‘ಮಹಿಳೆಯರು ಆರ್ಥಿಕವಾಗಿ ಸಬಲರಾಗಲು ಈ ಸಂಸ್ಥೆಯ ಉಪಯೋಗ ಸಾಕಷ್ಟಿತ್ತು. ತರಬೇತಿ ಪಡೆದ ಮಹಿಳೆಯರು ಸ್ವಯಂ ಉದ್ಯೋಗಿಗಳಾಗಿ ಸಂಪಾದನೆ ಮಾಡುತ್ತಿದ್ದರು. ಇತರರಿಗೂ ಉದ್ಯೋಗ ನೀಡುತ್ತಿದ್ದರು. ಆದ್ದರಿಂದ ಸ್ಥಳಾಂತರ ಪ್ರಸ್ತಾಪವನ್ನು ಕೈಬಿಡಬೇಕು’ ಎಂದು ಅಸೋಸಿಯೇಷನ್‌ ಅಧ್ಯಕ್ಷೆ ಪ್ರೇಮಾ ಕೋರಿದ್ದಾರೆ.

‘ರಾಜ್ಯ ಸರ್ಕಾರ 976 ಎಕರೆ ಪ್ರದೇಶದಲ್ಲಿ ಕೈಗಾರಿಕೆಗಳನ್ನು ಸ್ಥಾಪನೆ ಮಾಡಲುಸಿದ್ಧತೆ ನಡೆಸಿರುವ ಸಂದರ್ಭದಲ್ಲಿ ತರಬೇತಿ ಕೇಂದ್ರವನ್ನು ಮತ್ತಷ್ಟು ವಿಸ್ತರಿಸಬೇಕಿತ್ತು. ಆದರೆ ನಗರದಲ್ಲಿ ಮುಚ್ಚುವ ನಿರ್ಧಾರ ಸರಿಯಲ್ಲ’ ಎಂದು ಕಾರ್ಮಿಕ ಮುಖಂಡ ಮುನಿರತ್ನಂ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT