ಶುಕ್ರವಾರ, ಆಗಸ್ಟ್ 23, 2019
22 °C
ಸಮಾರಂಭದಲ್ಲಿ ಕೆಜಿಎಫ್ ಕ್ಷೇತ್ರ ಶಿಕ್ಷಣಾಧಿಕಾರಿ ಅಶೋಕ್ ಸಲಹೆ

ವಿಜ್ಞಾನ ಜೀವನದ ಹವ್ಯಾಸವಾಗಿ ಪರಿಗಣಿಸಿ

Published:
Updated:
Prajavani

ಕೋಲಾರ: ‘ದಿನನಿತ್ಯದ ಜೀವನದಲ್ಲಿ ವಿಜ್ಞಾನ ಹಾಸುಹೊಕ್ಕಾಗಿದ್ದು, ಹೊಸ ಆವಿಷ್ಕಾರಗಳನ್ನು ಸಮಾಜಕ್ಕೆ ಪರಿಚಯಿಸಬೇಕು’ ಎಂದು ಕೆಜಿಎಫ್ ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ಆರ್.ಅಶೋಕ್ ಹೇಳಿದರು.

ರಾಜ್ಯ ವಿಜ್ಞಾನ ಪರಿಷತ್‌ ಇಲ್ಲಿ ಗುರುವಾರ ಹಮ್ಮಿಕೊಂಡಿದ್ದ ಜಿಲ್ಲಾ ಯುವ ವಿಜ್ಞಾನಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿ, ‘ತರ್ಕ ಆಧರಿಸಿ ವಿವರಣೆ ನೀಡುವುದೇ ವಿಜ್ಞಾನ. ಇದರಲ್ಲಿ ಪಾರಂಪರಿಕ ವಿಧಾನ ಕಡೆಗಣಿಸುವಂತಿಲ್ಲ. ನಾವು ಮಾಡುವ ಪ್ರತಿ ಕೆಲಸದಲ್ಲೂ ವಿಜ್ಞಾನ ಬಳಕೆಯಾಗುತ್ತಿರುತ್ತದೆ. ಆದರೆ, ಅದು ಗೊತ್ತಾಗುವುದಿಲ್ಲ’ ಎಂದರು.

‘ಮಾನವನ ದೈನಂದಿನ ಚಟುವಟಿಕೆಗಳಲ್ಲಿ ವಿಜ್ಞಾನದ ಅಪಾರ ಅಂಶಗಳು ಮಿಳಿತವಾಗಿವೆ. ವಿದ್ಯಾರ್ಥಿಗಳು ವಿಜ್ಞಾನವನ್ನು ಜೀವನದ ಹವ್ಯಾಸವಾಗಿ ಪರಿಗಣಿಸಬೇಕು. ವೈಜ್ಞಾನಿಕತೆ ಬಗ್ಗೆ ಸಮಾಜಕ್ಕೆ ಅರಿವು ಮೂಡಿಸುವ ಮೂಲಕ ಋಣ ತೀರಿಸಬೇಕು’ ಎಂದು ಸಲಹೆ ನೀಡಿದರು.

‘ವಿದ್ಯಾರ್ಥಿಗಳು ಯಾವುದೇ ವಸ್ತುವನ್ನು ವೀಕ್ಷಿಸಿ ವಿಶ್ಲೇಷಣೆ ಮಾಡುವ ಶಕ್ತಿ ಪಡೆದುಕೊಳ್ಳಬೇಕು. ಭಾರತೀಯ ಸಂಸ್ಕೃತಿಯಲ್ಲಿ ಸಂಪ್ರದಾಯಗಳ ಜತೆ ವಿಜ್ಞಾನಕ್ಕೆ ನಿಕಟ ಸಂಬಂಧವಿದೆ. ಕೆಲ ಸಂಪ್ರದಾಯ ಆಚರಣೆಗೂ ವೈಜ್ಞಾನಿಕ ಕಾರಣಗಳಿವೆ. ಇದನ್ನು ಎಲ್ಲರೂ ತಿಳಿಯಬೇಕು’ ಎಂದು ರಾಜ್ಯ ವಿಜ್ಞಾನ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಡಾ.ಶಿವಣ್ಣ ತಿಳಿಸಿದರು.

ಅವಿಭಾಜ್ಯ ಅಂಗ: ‘ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಮನೋಭಾವ ಗಟ್ಟಿಗೊಳಿಸಲು ವಿಜ್ಞಾನ ಪರಿಷತ್ ಅನೇಕ ಕಾರ್ಯಕ್ರಮ ಹಮ್ಮಿಕೊಳ್ಳುತ್ತಿದೆ. ವಿಜ್ಞಾನವು ಮನುಷ್ಯನ ಜೀವನದ ಅವಿಭಾಜ್ಯ ಅಂಗವಾಗಿದೆ. ಈಗ ವಿಜ್ಞಾನವಿಲ್ಲದೆ ಜಗತ್ತೇ ಇಲ್ಲ’ ಎಂದು ರಾಜ್ಯ ವಿಜ್ಞಾನ ಪರಿಷತ್ ಜಿಲ್ಲಾ ಕಾರ್ಯದರ್ಶಿ ಮಂಜುಳಾ ಭೀಮರಾವ್ ಅಭಿಪ್ರಾಯಪಟ್ಟರು.

‘ವಿದ್ಯಾರ್ಥಿಗಳು ಜೀವನದಲ್ಲಿ ವಿಜ್ಞಾನ ಅಳವಡಿಸಿಕೊಂಡರೆ ಹೊಸ ವಿಷಯಗಳ ಸಂಶೋಧನೆ, ಆವಿಷ್ಕಾರ ಸಾಧ್ಯವಾಗುತ್ತದೆ. ವಿಜ್ಞಾನವು ಭೌತಶಾಸ್ತ್ರ, ಜೀವಶಾಸ್ತ್ರ, ರಸಾಯನ ಶಾಸ್ತ್ರದ ವಿಷಯಕ್ಕಷ್ಟೇ ಸೀಮಿತಗೊಂಡಿಲ್ಲ. ಪ್ರತಿ ವಿಷಯವೂ ವಿಜ್ಞಾದಿಂದಲೇ ಆರಂಭವಾಗುತ್ತದೆ. ತಾನಾಗಿಯೇ ವಿಜ್ಞಾನ ಬೆಳೆಯಲು ಸಾಧ್ಯವಿಲ್ಲ. ಸಂಶೋಧನೆ ಮತ್ತು ಅಧ್ಯಯನದಿಂದ ಮಾತ್ರ ವಿಜ್ಞಾನ ಬೆಳೆಯುತ್ತದೆ’ ಎಂದರು.

ರಾಜ್ಯ ಮಟ್ಟಕ್ಕೆ ಆಯ್ಕೆ: ಕೆಜಿಎಫ್‌ನ ಮಹಾವೀರ್ ಜೈನ್ ಶಾಲೆ ವಿದ್ಯಾರ್ಥಿ ಬಿ.ಶಿವಶಂಕರ್ ಪ್ರಥಮ ಸ್ಥಾನ, ಬಂಗಾರಪೇಟೆಯ ಶಾರದಾ ಆಂಗ್ಲ ಮಾಧ್ಯಮ ಶಾಲೆ ವಿದ್ಯಾರ್ಥಿ ಎಸ್.ಸುಷ್ಮಾ ದ್ವಿತೀಯ ಸ್ಥಾನ ಹಾಗೂ ಕೋಲಾರದ ಚಿನ್ಮಯ ವಿದ್ಯಾಲಯದ ಆರ್.ಶ್ರೀಶ ತೃತೀಯ ಸ್ಥಾನ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾದರು.

ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಶ್ರೀರಾಮರೆಡ್ಡಿ, ಬೆಮಲ್ ನಿವೃತ್ತ ನೌಕರ ಭಾರದ್ವಾಜ್ ಸಿಂಹ, ಶಿಕ್ಷಕರಾದ ಬಿ.ಶಿವಕುಮಾರ್, ಮಂಜುನಾಥ್, ಸೌಮ್ಯ, ವೆಂಕಟರವಣಪ್ಪ ಪಾಲ್ಗೊಂಡಿದ್ದರು.

Post Comments (+)