ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಬ್ಬರು ಯುವಕರ ಅನುಮಾನಾಸ್ಪದ ಸಾವು

Last Updated 26 ಡಿಸೆಂಬರ್ 2019, 15:36 IST
ಅಕ್ಷರ ಗಾತ್ರ

ಕೋಲಾರ: ಜಿಲ್ಲೆಯ ಮುಳಬಾಗಿಲು ತಾಲ್ಲೂಕಿನ ಅಣ್ಣೆಹಳ್ಳಿ ಗ್ರಾಮದ ಹೊರವಲಯದಲ್ಲಿ ಇಬ್ಬರು ಯುವಕರು ಅನುಮಾನಾಸ್ಪದ ರೀತಿಯಲ್ಲಿ ಮೃತಪಟ್ಟಿದ್ದು, ನೇಣು ಬಿಗಿದ ಸ್ಥಿತಿಯಲ್ಲಿ ಅವರ ಶವಗಳು ಪತ್ತೆಯಾಗಿವೆ.

ಮುಳಬಾಗಿಲು ತಾಲ್ಲೂಕಿನ ಕಪ್ಪಲಮಡಗು ಗ್ರಾಮದ ಪ್ರವೀಣ್‌ (20) ಮತ್ತು ಅಣ್ಣೆಹಳ್ಳಿಯ ಶ್ರೀನಾಥ್‌ (24) ಮೃತಪಟ್ಟವರು. ಎಸ್ಸೆಸ್ಸೆಲ್ಸಿ ಓದಿದ್ದ ಇವರಿಬ್ಬರೂ ಸ್ನೇಹಿತರಾಗಿದ್ದರು. ಪ್ರವೀಣ್‌ ಮೆಣಸಿನಕಾಯಿ ವ್ಯಾಪಾರ ಮತ್ತು ಶ್ರೀನಾಥ್ ತರಕಾರಿ ವ್ಯಾಪಾರ ಮಾಡುತ್ತಿದ್ದರು.

ಬುಧವಾರ ರಾತ್ರಿ ಮನೆಯಿಂದ ಹೊರ ಹೋಗಿದ್ದ ಇವರು ಗ್ರಾಮದ ಜಮೀನು ಒಂದರಲ್ಲಿ ಮದ್ಯಪಾನ ಮಾಡಿದ್ದಾರೆ. ಬಳಿಕ ರಾತ್ರಿ 11 ಗಂಟೆ ಸುಮಾರಿಗೆ ಕುಟುಂಬ ಸದಸ್ಯರ ಮೊಬೈಲ್‌ಗೆ ಕರೆ ಮಾಡಿ ಮಾತನಾಡಿದ್ದಾರೆ. ಆ ನಂತರ ಇಬ್ಬರೂ ಒಂದೇ ಮರದ ಕೊಂಬೆಗೆ ನೇಣು ಹಾಕಿಕೊಂಡಿದ್ದಾರೆ ಎಂದು ನಂಗಲಿ ಠಾಣೆ ಪೊಲೀಸರು ತಿಳಿಸಿದ್ದಾರೆ.

ಘಟನಾ ಸ್ಥಳದಲ್ಲಿ ಮದ್ಯದ ಬಾಟಲಿಗಳು ಸಿಕ್ಕಿವೆ. ಆತ್ಮಹತ್ಯೆಗೆ ಕಾರಣ ಗೊತ್ತಾಗಿಲ್ಲ. ಕುಟುಂಬ ಸದಸ್ಯರು ಕೊಲೆ ಎಂದು ಶಂಕೆ ವ್ಯಕ್ತಪಡಿಸಿದ್ದು, ಅನುಮಾನಾಸ್ಪದ ಸಾವು ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಮೋದಿ ಅವಹೇಳನ: ಬಂಧನ

ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿದ ವಿಡಿಯೋ ಚಿತ್ರೀಕರಿಸಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದ ಆರೋಪದ ಮೇಲೆ ಫಾರೂಕ್‌ ಪಾಷಾ (30) ಎಂಬಾತನನ್ನು ಕೋಲಾರ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ನಗರದ ಶಹಿನ್‌ಷಾ ನಗರ ನಿವಾಸಿಯಾದ ಫಾರೂಕ್‌ ಆಟೊ ಚಾಲಕನಾಗಿದ್ದಾನೆ. ಆತ ಸ್ನೇಹಿತರ ಜತೆ ಸೇರಿ ಕೆಲ ದಿನಗಳ ಹಿಂದೆ ಮೋದಿ ವಿರುದ್ಧ ಅವಹೇಳನಕಾರಿಯಾಗಿ ಟಿಕ್‌ಟಾಕ್ ಮಾಡಿದ್ದ. ಆರೋಪಿಗಳು ಆ ಟಿಕ್‌ಟಾಕ್‌ನ ದೃಶ್ಯಾವಳಿಯನ್ನು ವಾಟ್ಸ್‌ಆ್ಯಪ್‌ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಕರಣ ಸಂಬಂಧ ಬಿಜೆಪಿ ಜಿಲ್ಲಾ ಘಟಕದ ಉಪಾಧ್ಯಕ್ಷ ವಿಜಯ್‌ಕುಮಾರ್‌ ದೂರು ಕೊಟ್ಟಿದ್ದರು. ಈ ದೂರು ಆಧರಿಸಿ ಮಾನಹಾನಿ ಆರೋಪದಡಿ ಪ್ರಕರಣ ದಾಖಲಿಸಿ ಫಾರೂಕ್‌ನನ್ನು ಬಂಧಿಸಲಾಗಿದೆ. ಪ್ರಕರಣದಲ್ಲಿ ಭಾಗಿಯಾಗಿರುವ ಆತನ 5 ಸ್ನೇಹಿತರು ತಲೆಮರೆಸಿಕೊಂಡಿದ್ದಾರೆ. ನ್ಯಾಯಾಲಯ ಜಾಮೀನಿನ ಮೇಲೆ ಫಾರೂಕ್‌ನನ್ನು ಬಿಡುಗಡೆ ಮಾಡಿದೆ ಎಂದು ಪೊಲೀಸರು ಹೇಳಿದ್ದಾರೆ.

ಅಪಘಾತ: ಬೈಕ್‌ ಸವಾರ ಸಾವು

ತಾಲ್ಲೂಕಿನ ವೇಮಗಲ್– ನರಸಾಪುರ ರಸ್ತೆಯಲ್ಲಿ ಗುರುವಾರ ಸಂಭವಿಸಿದ ಬೈಕ್‌ ಅಪಘಾತದಲ್ಲಿ ಸಂಜಯ್ (35) ಎಂಬುವರು ಮೃತಪಟ್ಟಿದ್ದಾರೆ.

ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲ್ಲೂಕಿನ ಸಂಜಯ್ ಅವರು ನರಸಾಪುರ ಸಮೀಪದ ಕೈಗಾರಿಕೆಯಲ್ಲಿ ಉದ್ಯೋಗಿಯಾಗಿದ್ದರು. ವೇಮಗಲ್‌ನಲ್ಲಿ ವಾಸವಾಗಿದ್ದ ಅವರು ಕೆಲಸ ಮುಗಿದ ನಂತರ ಬೈಕ್‌ನಲ್ಲಿ ಮನೆಗೆ ಬರುತ್ತಿದ್ದಾಗ ಅಪಘಾತ ಸಂಭವಿಸಿದೆ.

ದುರಸ್ತಿ ಹಂತದಲ್ಲಿರುವ ರಸ್ತೆಯಲ್ಲಿ ಸಂಜಯ್‌ ನಿಯಂತ್ರಣ ತಪ್ಪಿ ಬೈಕ್‌ನಿಂದ ಕೆಳಗೆ ಬಿದ್ದಿದ್ದಾರೆ. ಘಟನೆಯಲ್ಲಿ ತೀವ್ರವಾಗಿ ಗಾಯಗೊಂಡ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ವೇಮಗಲ್‌ ಠಾಣೆ ಪೊಲೀಸರು ತಿಳಿಸಿದ್ದಾರೆ. ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT