ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೇವು ಬೆಲ್ಲ ಸವಿದು: ಯುಗಾದಿ ಆಚರಿಸಿದ ಸರ್ವ ಧರ್ಮೀಯರು

ಹೋಳಿಗೆ– ಬೇವು ಬೆಲ್ಲ ಸವಿದು ಸೌಹಾರ್ದತೆ ಮೆರೆದ ಮುಖಂಡರು
Last Updated 3 ಏಪ್ರಿಲ್ 2022, 13:50 IST
ಅಕ್ಷರ ಗಾತ್ರ

ಕೋಲಾರ: ಸೌಹಾರ್ದ ವೇದಿಕೆ ನೇತೃತ್ವದಲ್ಲಿ ನಗರದ ಗಾಂಧಿವನದಲ್ಲಿ ಭಾನುವಾರ ಸರ್ವ ಧರ್ಮಗಳ ಮುಖಂಡರೊಂದಿಗೆ ‘ಸೌಹಾರ್ದ ಭಾರತಕ್ಕಾಗಿ ನಾವೆಲ್ಲಾ ಒಂದೇ’ ಎಂಬ ಸಂದೇಶ ಸಾರುವುದರೊಂದಿಗೆ ಬೇವು ಬೆಲ್ಲ ಸವಿದು ಯುಗಾದಿ ಹಬ್ಬವನ್ನು ವಿಶೇಷವಾಗಿ ಆಚರಿಸಲಾಯಿತು.

‘ಭಾರತ ದೇಶ ಸರ್ವ ಜನಾಂಗದ ಶಾಂತಿಯ ತೋಟ. ಇಲ್ಲಿ ಸೂಫಿ ಸಂತರು, ಶರಣರು, ಕನಕದಾಸರು ಬಸವಣ್ಣ ಅವರಂತಹ ಹಲವು ಮಹನೀಯರು ಜಾತ್ಯಾತೀತ ಸಂದೇಶ ಕೊಟ್ಟು ಹೋಗಿದ್ದಾರೆ. ಇಂತಹ ತ್ಯಾಗಮಯ ರಾಷ್ಟ್ರದಲ್ಲಿ ಬಿಜೆಪಿ ಸರ್ಕಾರವು ಧರ್ಮ, ಜಾತಿಗಳ ಕೋಮು ಗಲಭೆ ಸೃಷ್ಟಿಸಿ ರಾಜಕೀಯ ಲಾಭ ಪಡೆಯಲು ಯತ್ನಿಸುತ್ತಿದೆ’ ಎಂದು ಸಿಪಿಎಂ ಜಿಲ್ಲಾ ಸಮಿತಿ ಕಾರ್ಯದರ್ಶಿ ಗಾಂಧಿನಗರ ನಾರಾಯಣಸ್ವಾಮಿ ಕಿಡಿಕಾರಿದರು.

‘ರಾಜ್ಯದಲ್ಲೆಡೆ ಹಿಜಾಬ್, ಮುಸಲ್ಮಾನರಿಗೆ ಹಿಂದೂ ದೇವಾಲಯಗಳ ಬಳಿ ವ್ಯಾಪಾರಕ್ಕೆ ಬಹಿಷ್ಕಾರ, ಹಲಾಲ್ ಸೇರಿದಂತೆ ಹಲವು ವಿವಾದ ಸೃಷ್ಟಿಸಲಾಗಿದೆ. ಇಂತಹ ವಿಚಾರಗಳಿಂದ ಸಮಾಜದಲ್ಲಿ ಕೋಮು ಸಾಮರಸ್ಯ ಹಾಳಾಗುತ್ತಿದೆ. ಕೋಲಾರ ಜಿಲ್ಲೆಯಲ್ಲಿ ಹಿಂದೂಗಳು, ಮುಸ್ಲಿಮರು ಮತ್ತು ಕ್ರೈಸ್ತರು ನಾವೆಲ್ಲಾ ಒಂದೇ ಎಂದು ಸೌಹಾರ್ದತೆ ಮೆರೆದಿದ್ದಾರೆ’ ಎಂದು ಹೇಳಿದರು.

‘ಜನರಿಂದ ಅಧಿಕಾರ ಪಡೆದು ರಾಜ್ಯಭಾರ ಮಾಡುವ ಕೋಮುವಾದಿ ಶಕ್ತಿಗಳಿಂದ ಸಮಾಜದಲ್ಲಿ ಅಶಾಂತಿ ಸೃಷ್ಟಿಯಾಗಿದೆ. ಕೋಮವಾದ ವಿರೋಧಿಸುವ ಮೂಲಕ ನಾವೆಲ್ಲಾ ಒಂದೇ ತಾಯಿಯ ಮಕ್ಕಳಾಗಿ ಏಕೆತೆಯಿಂದ ಈ ನೆಲದಲ್ಲಿ ಬದುಕಿ ಬಾಳೋಣ, ಕುವೆಂಪು ಅವರ ಸರ್ವ ಜನಾಂಗದ ಶಾಂತಿಯ ತೋಟಕ್ಕೆ ಕೋಮುವಾದಿ ಶಕ್ತಿಗಳು ಜಾತಿ, ಧರ್ಮದ ಕಿಡಿ ಹೊತ್ತಿಸಿವೆ’ ಎಂದು ಕಳವಳ ವ್ಯಕ್ತಪಡಿಸಿದರು.

‘ರಾಜ್ಯದಲ್ಲಿ ನಡೆಯುತ್ತಿರುವ ಮನುವಾದಿಗಳ ಮೇಲಾಟವನ್ನು ಖಂಡಿಸಬೇಕು. ಕೋಮುವಾದಿ ಶಕ್ತಿಗಳ ಸಂಚಿಗೆ ಅಮಾಯಕ ಜನರು ಬಲಿಯಾಗುತ್ತಿದ್ದಾರೆ. ಈ ಬಗ್ಗೆ ಜನರು ಜಾಗೃತರಾಗಬೇಕು. ಮುಂಬರುವ ಚುನಾವಣೆಯಲ್ಲಿ ಕೋಮುವಾದಿಗಳಿಗೆ ತಕ್ಕ ಪಾಠ ಕಲಿಸಬೇಕು’ ಎಂದು ಗುಡುಗಿದರು.

ದರ್ಜನ್ಯ–ದಬ್ಬಾಳಿಕೆ: ‘ದೇಶದ ಅಭಿವೃದ್ಧಿಗೆ ಮುಸ್ಲಿಂ ಸಮುದಾಯದ ಕೊಡುಗೆ ಅಪಾರ. ಆದರೆ, ಬಿಜೆಪಿ ಸರ್ಕಾರಗಳು ಮುಸ್ಲಿಂ ಸಮುದಾಯವನ್ನು ಗುರಿಯಾಗಿಸಿಕೊಂಡು ದೌರ್ಜನ್ಯ, ದಬ್ಬಾಳಿಕೆ ನಡೆಸುತ್ತಿವೆ. ದೇಶದಲ್ಲಿ ವಾಸ ಮಾಡುವ ನಾವೆಲ್ಲಾ ಭಾರತೀಯರು. ನಮ್ಮಲ್ಲಿ ಸೌಹಾರ್ದ ಪರಂಪರೆ ಕಾಣಬಹುದು’ ಎಂದು ನಗರಸಭೆ ಮಾಜಿ ಸದಸ್ಯ ಸಲ್ಲಾವುದ್ದೀನ್‌ ಬಾಬು ಹೇಳಿದರು.

ಯುಗಾದಿ ಹಬ್ಬದ ಹಿನ್ನೆಲೆಯಲ್ಲಿ ಸರ್ವ ಧರ್ಮಗಳ ಮುಖಂಡರು ಹೋಳಿಗೆ ಊಟ ಸವಿದು ಸೌಹಾರ್ದತೆ ಮೆರೆದರು. ಮುಸ್ಲಿಂ ಸಮುದಾಯದ ಮುಖಂಡ ಅಫ್ರೋಜ್‌ ಪಾಷಾ, ಅಂಜುಮನ್ ಇಸ್ಲಾಮಿಯ ಸಂಘಟನೆ ಕಾರ್ಯದರ್ಶಿ ಮಹಮ್ಮದ್ ಸೈಪುಲ್ಲಾ, ಕ್ರೈಸ್ತ ಮುಖಂಡ ರೆವರೆಂಡ್ ಜ್ಞಾನಯ್ಯ ಜೇಮ್ಸ್, ಸಿಪಿಎಂ ಮುಖಂಡರಾದ ವಿ.ಗೀತಾ, ಟಿ.ಎಂ.ವೆಂಕಟೇಶ್, ವಿಜಯಕೃಷ್ಣ, ಗಂಗಮ್ಮ, ಎನ್.ಎನ್.ಶ್ರೀರಾಮ್, ನಾರಾಯಣರೆಡ್ಡಿ, ಅಶಾ, ಭೀಮರಾಜ್, ರೈತ ಮುಖಂಡ ಶಿವಪ್ಪ ಪಾಲ್ಗೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT