ಜಿಲ್ಲೆಯಾದ್ಯಂತ ಯುಗಾದಿ ಆಚರಣೆ; ಊರು ಕೇರಿಗಳಲ್ಲಿ ಬಾಡೂಟದ ಘಮಲು ಜೋರು

ಮಂಗಳವಾರ, ಏಪ್ರಿಲ್ 23, 2019
32 °C

ಜಿಲ್ಲೆಯಾದ್ಯಂತ ಯುಗಾದಿ ಆಚರಣೆ; ಊರು ಕೇರಿಗಳಲ್ಲಿ ಬಾಡೂಟದ ಘಮಲು ಜೋರು

Published:
Updated:
Prajavani

ಕೋಲಾರ: ನಗರ ಸೇರಿದಂತೆ ಜಿಲ್ಲೆಯಾದ್ಯಂತ ಯುಗಾದಿ ಹಬ್ಬವನ್ನು ಶನಿವಾರ ಸಂಭ್ರಮ ಸಡಗರದಿಂದ ಆಚರಿಸಲಾಯಿತು. ದೇವಾಲಯಗಳಿಗೆ ತೆರಳಿದ ಜನ ಶ್ರದ್ಧಾಭಕ್ತಿಯಿಂದ ಪೂಜೆ ಸಲ್ಲಿಸಿದರು. ಆನಂತರ ದೇವರಿಗೆ, ಹಿರಿಯರಿಗೆ ನಮಸ್ಕರಿಸಿ, ಬೇವು–ಬೆಲ್ಲ ತಿಂದು, ಶುಭಾಶಯ ವಿನಿಮಯ ಮಾಡಿಕೊಂಡರು. ಮಧ್ಯಾಹ್ನ ಹೊಳಿಗೆ, ಪಾಯಸ ಸವಿದು ಸಂಭ್ರಮಿಸಿದರು.

ಯುಗಾದಿ ಮಾರನೇ ದಿನವಾರ ಭಾನುವಾರ ಜಿಲ್ಲೆಯಾದ್ಯಂತ ವರ್ಷ ತೊಡಕಿನ ಆಚರಣೆ ಭರ್ಜರಿ ಯಾಗಿತ್ತು. ಊರು ಕೇರಿಗಳಲ್ಲಿ ಬಾಡೂಟದ ಘಮಲು ಜೋರಾಗಿತ್ತು. ಯುಗಾದಿ ದಿನ ಹೋಳಿಗೆ ಸವಿದಿದ್ದ ಮಂದಿ ಮಾಂಸದೂಟದ ರುಚಿ ಸವಿದರು.

ನಗರದ ಅಮ್ಮವಾರಿಪೇಟೆ, ಕ್ಲಾಕ್‌ ಟವರ್‌, ಎಂ.ಬಿ.ರಸ್ತೆ ಸುತ್ತಮುತ್ತಲಿನ ಕೋಳಿ ಹಾಗೂ ಕುರಿ ಮಾಂಸದ ಅಂಗಡಿಗಳು ಗ್ರಾಹಕರಿಂದ ಗಿಜಿಗುಡುತ್ತಿದ್ದವು. ಅಂಗಡಿಗಳ ಮುಂದೆ ಗ್ರಾಹಕರು ಮಾಂಸ ಖರೀದಿಗೆ ಸಾಲುಗಟ್ಟಿ ನಿಂತಿದ್ದರು. ಎಂ.ಬಿ.ರಸ್ತೆಯ ಅಕ್ಕ ಪಕ್ಕ ನಾಟಿ ಕೋಳಿ ವಹಿವಾಟು ಭರ್ಜರಿ ಯಾಗಿತ್ತು. ಮೀನಿನ ವ್ಯಾಪಾರವೂ ಜೋರಾಗಿತ್ತು. ಎಂ.ಬಿ.ರಸ್ತೆಯಲ್ಲಿ ದೊಡ್ಡ ಜನ ಜಾತ್ರೆಯೇ ಕಂಡುಬಂತು.

ಆಂಧ್ರಪ್ರದೇಶ, ತಮಿಳುನಾಡು ಹಾಗೂ ಮಂಗಳೂರಿನಿಂದ ತರಿಸಲಾಗಿದ್ದ ಮೀನುಗಳನ್ನು ಖರೀದಿಸಲು ಗ್ರಾಹಕರು ಮುಗಿಬಿದ್ದರು. ಗ್ರಾಮೀಣ ಪ್ರದೇಶದಿಂದ ರೈತರು ತಂದಿದ್ದ ನಾಟಿ ಕೋಳಿಗಳು ಕ್ಷಣ ಮಾತ್ರದಲ್ಲಿ ಮಾರಾಟವಾದವು.

ಕುರಿ ಹಾಗೂ ಕೋಳಿ ಮಾಂಸದ ಅಂಗಡಿ ಮಾಲೀಕರು ಗ್ರಾಹಕರಿಂದ ಮುಂಗಡ ಹಣ ಪಡೆದು ಟೋಕನ್‌ ನೀಡಿ ನಂತರ ಮಾಂಸ ವಿತರಿಸಿದರು. ಕುರಿ ಮತ್ತು ಮೇಕೆ ಮಾಂಸದ ಬೆಲೆ ಕೆ.ಜಿಗೆ ₹ 500 ಇತ್ತು. ಫಾರಂ ಹಾಗೂ ಬಾಯ್ಲರ್‌ ಕೋಳಿ ಮಾಂಸ ಕೆ.ಜಿಗೆ ₹ 180 ಹಾಗೂ ನಾಟಿ ಕೋಳಿ ಮಾಂಸಕ್ಕೆ ₹ 400 ಇತ್ತು. ಬಾಡೂಟ ತಯಾರಿಕೆಗೆ ಅತ್ಯಗತ್ಯವಾದ ಕೊತ್ತಂಬರಿ ಸೊಪ್ಪು ಕಟ್ಟಿಗೆ ₹ 30ರಿಂದ 40 ಮತ್ತು ಪುದಿನ ಕಟ್ಟಿಗೆ ₹ 10 ಇತ್ತು.

ಸೌತೆಕಾಯಿ, ಈರುಳ್ಳಿ, ನಿಂಬೆ ಹಣ್ಣು ವ್ಯಾಪಾರ ಭರ್ಜರಿಯಾಗಿ ನಡೆಯಿತು. ಗ್ರಾಮೀಣ ಭಾಗದಲ್ಲಿ ಮುಂಜಾನೆಯೇ ಕುರಿ ಹಾಗೂ ಮೇಕೆಗಳನ್ನು ಕೊಯ್ದು ಮಾಂಸ ಮಾರಾಟ ಮಾಡಲಾಯಿತು. ಮಾಂಸದ ಜತೆಗೆ ಮದ್ಯದ ವಹಿವಾಟು ಹೆಚ್ಚಿತ್ತು. ಹಬ್ಬಕ್ಕಾಗಿ ಸಿದ್ಧಪಡಿಸಲಾಗಿದ್ದ ಮಾಂಸದ ಸಾರು, ಮುದ್ದೆ, ಬಿರಿಯಾನಿ, ಕಬಾಬ್‌ ಸೇರಿದಂತೆ ವಿವಿಧ ಭಕ್ಷ್ಯಗಳು ಮಾಂಸ ಪ್ರಿಯರ ಬಾಯಲ್ಲಿ ನೀರೂರಿಸಿದವು. ಮನೆ ಮಂದಿಯೆಲ್ಲಾ ಒಟ್ಟಿಗೆ ಕುಳಿತು ಬಾಡೂಟ ಮಾಡಿ ಸಂಭ್ರಮಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !