ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಷ್ಟ್ರದ ಏಕತೆ– ಸಮಗ್ರತೆಗೆ ಶ್ರಮಿಸಿ

ಜಾಗೃತಿ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಮಂಜುನಾಥ್‌ ಕಿವಿಮಾತು
Last Updated 5 ಸೆಪ್ಟೆಂಬರ್ 2019, 15:10 IST
ಅಕ್ಷರ ಗಾತ್ರ

ಕೋಲಾರ: ‘ಯುವಕರು ದೇಶದ ರಾಯಭಾರಿಗಳಾಗಿ ಕಾರ್ಯ ನಿರ್ವಹಿಸಿದರೆ ಸಮಾಜ ಅಭಿವೃದ್ಧಿ ಪಥದಲ್ಲಿ ಸಾಗುತ್ತದೆ’ ಎಂದು ಜಿಲ್ಲಾಧಿಕಾರಿ ಜೆ.ಮಂಜುನಾಥ್ ಅಭಿಪ್ರಾಯಪಟ್ಟರು.

ಜಿಲ್ಲಾ ನೆಹರೂ ಯುವ ಕೇಂದ್ರವು ಇಲ್ಲಿ ಗುರುವಾರ ಹಮ್ಮಿಕೊಂಡಿದ್ದ ವಿಷಯಾಧಾರಿತ ಜಾಗೃತಿ ಹಾಗೂ ಶಿಕ್ಷಣ ಕಾರ್ಯಕ್ರಮದಲ್ಲಿ ಮಾತನಾಡಿ, ‘ಯುವಕ ಯುವತಿಯರು ಜಾತಿ, ಮತ, ಪಂಥ ಮರೆತು ನಾವೆಲ್ಲಾ ಒಂದೇ ಎಂಬ ಮನೋಭಾವದಿಂದ ರಾಷ್ಟ್ರದ ಏಕತೆ, ಸಮಗ್ರತೆಗೆ ಶ್ರಮಿಸಬೇಕು’ ಎಂದು ಹೇಳಿದರು.

‘ದೇಶದ ಪರಂಪರೆ, ಸಂಸ್ಕೃತಿ ಉಳಿಸಿ ಬೆಳೆಸುವ ಜವಾಬ್ದಾರಿ ಯುವಕ ಯುವತಿಯರ ಮೇಲಿದೆ. ದೇಶದಲ್ಲಿ 29 ವರ್ಷ ವಯೋಮಾನದ ಯುವಕರು ಶೇ 45ರಷ್ಟು ಇದ್ದಾರೆ. ದೇಶದ ಅಭಿವೃದ್ಧಿಗೆ ಪೂರಕವಾದ ತರಬೇತಿ ನೀಡಬೇಕು’ ಎಂದು ತಿಳಿಸಿದರು.

‘ಪ್ರಪಂಚದ ಬೇರೆ ದೇಶಗಳಲ್ಲಿ 25 ವರ್ಷದಿಂದ 50 ವರ್ಷ ವಯೋಮಾನದವರನ್ನು ಯುವಕರು ಎಂದು ಪರಿಗಣಿಸುತ್ತಾರೆ. ಆದರೆ, ಭಾರತದಲ್ಲಿ 29 ವರ್ಷದ ವಯೋಮಾನದವರನ್ನು ಯುವಕರೆಂದು ಪರಿಗಣಿಸಲಾಗುತ್ತದೆ. ವಿದ್ಯಾರ್ಹತೆಗೆ ತಕ್ಕಂತೆ ಕೌಶಲ ತರಬೇತಿ ನೀಡಿದರೆ ದೇಶ ಅಭಿವೃದ್ಧಿಯಾಗುತ್ತದೆ’ ಎಂದರು.

‘ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಯುವ ಸಬಲಿಕರಣಕ್ಕೆ ಅನೇಕ ಯೋಜನೆ ಜಾರಿಗೊಳಿಸಿವೆ. ಅಧಿಕಾರಿಗಳು ಈ ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಬೇಕು. ಯುವಕರು ಕೀಳರಿಮೆ ಬಿಟ್ಟು ಅಭಿವೃದ್ಧಿ ಪಥದಲ್ಲಿ ಮುನ್ನಡೆಯಬೇಕು. ಆಗ ಮಾತ್ರ ಸಮಾಜದಲ್ಲಿ ಬದಲಾವಣೆ ಕಾಣಲು ಸಾಧ್ಯ’ ಎಂದು ಸಲಹೆ ನೀಡಿದರು.

ಸ್ವಉದ್ಯೋಗ ಮಾಡಿ: ‘ವಿದ್ಯಾವಂತ ಯುವಕ ಯುವತಿಯರು ಸ್ಥಳೀಯವಾಗಿ ಸ್ವಉದ್ಯೋಗ ಮಾಡಬೇಕು. ಕೃಷಿ ಹಾಗೂ ಇತರೆ ಕ್ಷೇತ್ರಗಳಲ್ಲಿ ಸ್ವಉದ್ಯೋಗದ ಅವಕಾಶ ಸಾಕಷ್ಟಿವೆ. ಸರ್ಕಾರದ ಅನೇಕ ಯೋಜನೆಗಳಿದ್ದು, ಇದರ ಪ್ರಯೋಜನ ಪಡೆದು ಆರ್ಥಿಕವಾಗಿ ಸ್ವಾವಲಂಬಿಗಳಾಗಬೇಕು’ ಎಂದು ಕಿವಿಮಾತು ಹೇಳಿದರು.

‘ನೀರು, ನೈರ್ಮಲ್ಯ, ಸ್ವಚ್ಛತೆ ಮತ್ತು ಮನೆಗೊಂದು ಶೌಚಾಲಯ ಅವಶ್ಯಕ. ಬಯಲು ಬಹಿರ್ದೆಸೆಯಿಂದ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮವಾಗುತ್ತದೆ. ಆದ ಕಾರಣ ಸಾರ್ವಜನಿಕರು ಮನೆಯಲ್ಲಿ ಕಡ್ಡಾಯವಾಗಿ ಶೌಚಾಲಯ ನಿರ್ಮಿಸಿ ಬಳಕೆ ಮಾಡಬೇಕು. ಈ ನಿಟ್ಟಿನಲ್ಲಿ ಮಕ್ಕಳು ಪೋಷಕರಿಗೆ ಜಾಗೃತಿ ಮೂಡಿಸಬೇಕು’ ಎಂದು ತಿಳಿಸಿದರು.

ಕಟ್ಟಡ ಉದ್ಘಾಟನೆ: ‘ಯುವಕರ ಸಬಲೀಕರಣಕ್ಕಾಗಿ ಸರ್ಕಾರ ಜಾರಿಗೆ ತರುವ ಯೋಜನೆಗಳನ್ನು ಪ್ರಾಮಾಣಿಕವಾಗಿ ಕಾರ್ಯಗತಗೊಳಿಸುತ್ತೇವೆ’ ಎಂದು ರಾಜ್ಯ ನೆಹರೂ ಯುವ ಕೇಂದ್ರ ನಿರ್ದೇಶಕ ಅತುಲ್ ಜೆ.ನಿಕಮ್ ಹೇಳಿದರು.

ಜಿಲ್ಲಾ ನೆಹರೂ ಯುವ ಕೇಂದ್ರದ ನೂತನ ಕಚೇರಿ ಉದ್ಘಾಟಿಸಲಾಯಿತು. ಜಲಶಕ್ತಿ ಅಭಿಯಾನದ ನೋಡಲ್ ಅಧಿಕಾರಿ ಹರ್ಷ, ಕೇಂದ್ರದ ಯುವಜನ ಸಮನ್ವಯಾಧಿಕಾರಿ ಸಿದ್ದರಾಮಪ್ಪ, ಸಹಾಯಕ ಯುವಜನ ಸಮನ್ವಯಾಧಿಕಾರಿ ಪ್ರವೀಣ್, ಸಲಹಾ ಸಮಿತಿ ಉಪಾಧ್ಯಕ್ಷ ಲಕ್ಷ್ಮೀಶ, ವಕೀಲ ಶಂಕರನಾಗ್ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT