ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅನರ್ಹರ ಶಾಸಕರಿಗೆ ಠೇವಣಿ ಸಿಗುವುದಿಲ್ಲ: ಆಂಜನೇಯ

ಜನ ಪಾಠ ಕಲಿಸುತ್ತಾರೆ: ಮಾಜಿ ಸಚಿವ ಆಂಜನೇಯ ಲೇವಡಿ
Last Updated 21 ನವೆಂಬರ್ 2019, 12:24 IST
ಅಕ್ಷರ ಗಾತ್ರ

ಕೋಲಾರ: ‘ಬಿಜೆಪಿಯು ವಾಮ ಮಾರ್ಗದಲ್ಲಿ ಅಧಿಕಾರ ಹಿಡಿದಿದ್ದು, ಆ ಪಕ್ಷ ನಂಬಿ ಹೋಗಿರುವ ಅನರ್ಹ ಶಾಸಕರಿಗೆ ವಿಧಾನಸಭೆ ಚುನಾವಣೆಯಲ್ಲಿ ಠೇವಣಿಯೂ ಸಿಗುವುದಿಲ್ಲ’ ಎಂದು ಮಾಜಿ ಸಚಿವ ಎಚ್.ಆಂಜನೇಯ ಲೇವಡಿ ಮಾಡಿದರು.

ಇಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ರಾಜ್ಯದ ಜನ ಬುದ್ಧಿವಂತರಾಗಿದ್ದು, ಉಪ ಚುನಾವಣೆಯಲ್ಲಿ ಅನರ್ಹ ಶಾಸಕರಿಗೆ ತಕ್ಕ ಪಾಠ ಕಲಿಸುತ್ತಾರೆ. ಬಿಜೆಪಿ ವಿಚಾರ ಜನರಿಗೆ ಗೊತ್ತಿದ್ದು, ಉಪ ಚುನಾವಣೆ ಬಳಿಕ ರಾಜ್ಯವು ಬಿಜೆಪಿ ಮುಕ್ತವಾಗುತ್ತದೆ’ ಎಂದು ವ್ಯಂಗ್ಯವಾಡಿದರು.

‘ಪ್ರಜಾತಂತ್ರ ಎತ್ತಿ ಹಿಡಿಯುವ ನೆಲದಲ್ಲಿ ಮೌಲ್ಯಾಧಾರಿತ ರಾಜಕಾರಣ ಶಾಶ್ವತವಾಗಿರಬೇಕಾದರೆ ಅನರ್ಹ ಶಾಸಕರಿಗೆ ಜನ ಠೇವಣಿ ಸಹ ಕೊಡಬಾರದು. ಚುನಾವಣಾ ಫಲಿತಾಂಶ ಗುಜರಾತ್ ಮಾದರಿಯಲ್ಲಿ ಆಗಬೇಕು. ಅನರ್ಹರನ್ನು ಹೀನಾಯವಾಗಿ ಸೋಲಿಸಬೇಕು’ ಎಂದು ಮನವಿ ಮಾಡಿದರು.

‘ಅನರ್ಹ ಶಾಸಕರೆಲ್ಲರೂ ಹಿಂದೆ ಬಿಜೆಪಿ ವಿರುದ್ಧ ಮಾತನಾಡಿದ್ದರು. ಬಿಜೆಪಿ ಗರ್ಭಗುಡಿ ಸಂಸ್ಕೃತಿಯ ಪಕ್ಷವೆಂದು ಆರೋಪಿಸಿದ್ದರು. ಅಂತಹವನ್ನು ಪಕ್ಷಕ್ಕೆ ಕರೆದುಕೊಂಡವರಿಗೂ ಹಾಗೂ ಆ ಪಕ್ಷಕ್ಕೆ ಹೋದವರಿಗೂ ತತ್ವ, ಸಿದ್ಧಾಂತ, ನೀತಿಯಿಲ್ಲ’ ಎಂದು ಗುಡುಗಿದರು.

‘ಡಿ.ಕೆ.ಶಿವಕುಮಾರ್ ಶಕ್ತಿಯುತವಾಗಿದ್ದಾರೆ. ಬಿಜೆಪಿಯವರು ಅವರನ್ನು ಹತ್ತಿಕ್ಕುವ ಕುತಂತ್ರ ಮಾಡಿದರು. ಶಿವಕುಮಾರ್‌ ಅವರು ಉಪ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಲು ಸಕ್ರಿಯವಾಗಿ ಕೆಲಸ ಮಾಡುತ್ತಿದ್ದಾರೆ. ನನಗೂ ಪ್ರಚಾರದ ವೇಳಾಪಟ್ಟಿ ನೀಡಿದ್ದು, ಕಾಂಗ್ರೆಸ್ ಅಭ್ಯರ್ಥಿಗಳ ಪರ ಪ್ರಚಾರಕ್ಕೆ ಹೋಗುತ್ತೇನೆ’ ಎಂದರು.

ಅವಕಾಶವಾದಿಗಳು: ‘ಜೆಡಿಎಸ್‌ನವರು ಅವಕಾಶವಾದಿಗಳು ಎಂಬುದು ಎಲ್ಲರಿಗೂ ಗೊತ್ತಿದೆ. ಚುನಾವಣೆ ನಂತರ ಬಿಜೆಪಿ ಸರ್ಕಾರ ಇರಬಹುದು ಅಥವಾ ಹೋಗಬಹುದು. ಸಚಿವ ಮಾಧುಸ್ವಾಮಿ ಒಳ್ಳೆಯ ಸಂಸದೀಯ ಪಟುವಾಗಿ ಕುರುಬ ಸಮುದಾಯದ ಸ್ವಾಮೀಜಿ ವಿರುದ್ಧ ಹೇಳಿಕೆ ನೀಡಿರುವುದು ನಾಚಿಕೆಗೇಡು. ಇದಕ್ಕೆ ಮುಖ್ಯಮಂತ್ರಿಯವರು ಕ್ಷಮೆ ಯಾಚಿಸಿರುವುದು ಸರಿಯಿದೆ’ ಎಂದು ಹೇಳಿದರು.

ಕಾಂಗ್ರೆಸ್‌ ಪಕ್ಷದಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರ ಮೂಲೆಗುಂಪು ಮಾಡಲಾಗಿದೆಯೇ ಎಂದು ಸುದ್ದಿಗಾರರು ಪ್ರಶ್ನಿಸಿದ್ದಕ್ಕೆ, ‘ಕಾಂಗ್ರೆಸ್‌ನಲ್ಲಿ ಯಾರನ್ನೂ ಮೂಲೆಗುಂಪು ಮಾಡಿಲ್ಲ. ಖರ್ಗೆಯವರು ರಾಷ್ಟ್ರ ಮಟ್ಟದ ನಾಯಕರಾಗಿದ್ದು, ಅವರ ಮಾರ್ಗದರ್ಶನದಲ್ಲೇ ಕೆಲಸ ಮಾಡುತ್ತೇವೆ. ಅವರೇ ನಮಗೆ ಹೈಕಮಾಂಡ್. ಅವರ ಬಗ್ಗೆ ಸಿದ್ದರಾಮಯ್ಯ ಅವರಿಗೂ ಗೌರವವಿದೆ’ ಎಂದು ಉತ್ತರಿಸಿದರು.

‘ಎಂಟಿಬಿ ನಾಗರಾಜ್ ಕಾಂಗ್ರೆಸ್‌ನಲ್ಲಿ ಗೆದ್ದು, ಬೇರೆ ಪಕ್ಷಕ್ಕೆ ಮಾರಾಟವಾಗಿದ್ದಾರೆ. ಎದೆ ಸೀಳಿದರೆ ಸಿದ್ದರಾಮಯ್ಯ ಕಾಣಿಸುತ್ತಾರೆ ಎಂದು ಹೇಳಿದ್ದ ಆ ವ್ಯಕ್ತಿ ಮತದಾರರ ಓಲೈಕೆಗಾಗಿ ಸಿದ್ದರಾಮಯ್ಯ ವಿರುದ್ಧ ಹೇಳಿಕೆ ನೀಡುತ್ತಿದ್ದಾರೆ. ಈ ಗಿಮಿಕ್‌ ಚುನಾವಣೆಯಲ್ಲಿ ಕೆಲಸ ಮಾಡುವುದಿಲ್ಲ’ ಎಂದು ಟೀಕಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT