ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಸೂಲಾಗದ ಸಾಲ: ಅಧಿಕಾರಿಗಳಿಗೆ ತರಾಟೆ

ಪ್ರಗತಿ ಪರಿಶೀಲನಾ ಸಭೆಯಲ್ಲಿ ಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಗೋವಿಂದಗೌಡ ಆಕ್ರೋಶ
Last Updated 9 ಮಾರ್ಚ್ 2019, 15:52 IST
ಅಕ್ಷರ ಗಾತ್ರ

ಕೋಲಾರ: ವಿವಿಧ ಯೋಜನೆಗಳ ಸಾಲ ವಸೂಲಿ ಮಾಡದ ಅಧಿಕಾರಿಗಳನ್ನು ಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಎಂ.ಗೋವಿಂದಗೌಡ ತೀವ್ರ ತರಾಟೆಗೆ ತೆಗೆದುಕೊಂಡರು.

ಇಲ್ಲಿ ಶನಿವಾರ ನಡೆದ ಬ್ಯಾಂಕ್‌ನ ಪ್ರಗತಿ ಪರಿಶೀಲನಾ ಸಭೆಯಲ್ಲಿ ವಸೂಲಾಗದ ಸಾಲದ ಸಂಬಂಧ ಮಾಹಿತಿ ಪಡೆದ ಅಧ್ಯಕ್ಷರು, ‘ವಸತಿ, ವಾಹನ ಖರೀದಿ, ಕೋಳಿ ಹಾಗೂ ರೇಷ್ಮೆ ಹುಳು ಸಾಕಣೆ ಮನೆ ನಿರ್ಮಾಣಕ್ಕೆ ಸಾಕಷ್ಟು ಸಾಲ ನೀಡಲಾಗಿದೆ. ಆದರೆ, ಸಾಲ ವಸೂಲಿ ನಿರೀಕ್ಷಿತ ಪ್ರಮಾಣದಲ್ಲಿ ಆಗಿಲ್ಲ’ ಎಂದು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

‘ಶೇ 3.6ಕ್ಕೆ ಇಳಿದಿದ್ದು ನಿಷ್ಕ್ರೀಯ ಆಸ್ತಿ ಮೌಲ್ಯದಿಂದ (ಎನ್‌ಪಿಎ) ಹಿಂದಿನ ಹಣಕಾಸು ವರ್ಷದಲ್ಲಿ ಬ್ಯಾಂಕ್‌ ದೇಶದಲ್ಲೇ ಪ್ರಥಮ ಸ್ಥಾನಕ್ಕೇರಿತ್ತು. ಅಧಿಕಾರಿಗಳು ಈ ಗೌರವಕ್ಕೆ ಚ್ಯುತಿ ಬಾರದಂತೆ ಬದ್ಧತೆಯಿಂದ ಕಾರ್ಯ ನಿರ್ವಹಿಸಬೇಕು’ ಎಂದು ತಾಕೀತು ಮಾಡಿದರು.

‘ಬ್ಯಾಂಕ್ ಇದೀಗ ದೇಶದ ಸಹಕಾರಿ ವ್ಯವಸ್ಥೆಯಲ್ಲೇ ಮೊದಲ ಸ್ಥಾನದಲ್ಲಿದ್ದು, ನೌಕರರು ಬದ್ಧತೆಯಿಂದ ಕೆಲಸ ಮಾಡಿ. ವಸೂಲಾಗದ ಸಾಲವನ್ನು ಮಾರ್ಚ್ 25ರೊಳಗೆ ಸಂಪೂರ್ಣ ವಸೂಲಿ ಮಾಡುವ ಮೂಲಕ ಬ್ಯಾಂಕ್‌ನ ಗೌರವ ಉಳಿಸಬೇಕು’ ಎಂದು ಸೂಚಿಸಿದರು.

‘ಮುಳಬಾಗಿಲು ಮತ್ತು ಕೋಲಾರ ಶಾಖೆ ವ್ಯಾಪ್ತಿಯಲ್ಲಿ ವಸತಿ ಹಾಗೂ ಸ್ತ್ರೀಶಕ್ತಿ ಸಾಲ ವಸೂಲಾತಿ ಪ್ರಕ್ರಿಯೆ ಸಮರ್ಪಕವಾಗಿ ನಡೆಯುತ್ತಿಲ್ಲ. ಅವಳಿ ಜಿಲ್ಲೆಯ ಬ್ಯಾಂಕ್ ಶಾಖೆಗಳ ವ್ಯಾಪ್ತಿಯಲ್ಲಿ ಸಾಲ ನೀಡುವಾಗ ಕಡ್ಡಾಯವಾಗಿ ಆ ವ್ಯಾಪ್ತಿಯ ನಿರ್ದೇಶಕರ ಗಮನಕ್ಕೆ ತರಬೇಕು. ಫಲಾನುಭವಿಯ ಸಾಲ ಮರು ಪಾವತಿ ಬದ್ಧತೆ ಗಮನಿಸಿ ಸಾಲ ವಿತರಿಸಬೇಕು’ ಎಂದು ಹೇಳಿದರು.

ಸ್ಥಿತಿವಂತರಿಗೂ ಸಾಲ: ‘ಬ್ಯಾಂಕ್ ಅಧಿಕಾರಿಗಳು ಕೆಲ ಸ್ಥಿತಿವಂತರಿಗೂ ಸಾಲ ಮಂಜೂರು ಮಾಡಿದ್ದಾರೆ. ಆರ್ಥಿಕವಾಗಿ ಸದೃಢರಾದವರಿಗೆ ಸಾಲ ಕೊಡಬಾರದೆಂದು ಹಿಂದೆಯೇ ಸೂಚಿಸಿದ್ದೆವು. ಆದರೂ ಕೋಲಾರದಿಂದ ಶಿಫಾರಸ್ಸಾಗಿ ಬಂದಿದ್ದವರಿಗೆ ಸಾಲ ನೀಡಲಾಗಿದೆ. ಈಗ ಅವರಿಂದ ಸಾಲ ವಸೂಲಿ ಮಾಡಲಾಗುತ್ತಿಲ್ಲ. ಇದಕ್ಕೆ ಯಾರು ಹೊಣೆ?’ ಎಂದು ಬ್ಯಾಂಕ್ ನಿರ್ದೇಶಕ ನೀಲಕಂಠೇಗೌಡ ಪ್ರಶ್ನಿಸಿದರು.

‘ಮುಳಬಾಗಿಲು ತಾಲ್ಲೂಕಿನ ಶಿವಗಂಗೆ ಮಹಿಳಾ ಸ್ವಸಹಾಯ ಸಂಘವು ಸಾಲ ಮರುಪಾವತಿ ಮಾಡಿಲ್ಲ. ಸದಸ್ಯರನ್ನು ಕೇಳಿದರೆ ಸಂಘಕ್ಕೆ ಕಟ್ಟಿರುವುದಾಗಿ ಹೇಳುತ್ತಾರೆ. ಅಧಿಕಾರಿಗಳು ಸಾಲದ ಮರು ಪಾವತಿಯಾಗಿಲ್ಲ ಎನ್ನುತ್ತಾರೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ದೂರು ನೀಡಿ: ಇದಕ್ಕೆ ಪ್ರತಿಕ್ರಿಯಿಸಿದ ಗೋವಿಂದಗೌಡ, ‘ಆ ಸಂಘದ ವಿರುದ್ಧ ಪೊಲೀಸರಿಗೆ ದೂರು ನೀಡಿದರೆ ಹಣ ದುರುಪಯೋಗ ಪಡಿಸಿಕೊಂಡವರ ಹೆಸರು ಹೊರ ಬರುತ್ತದೆ. ಸಾಲವೂ ಮರು ಪಾವತಿಯಾಗುತ್ತದೆ. ಪೊಲೀಸರಿಗೆ ದೂರು ನೀಡಿ ವಸೂಲಿ ಮಾಡಿ’ ಎಂದು ಮುಳಬಾಗಿಲು ಶಾಖಾ ವ್ಯವಸ್ಥಾಪಕರಿಗೆ ಆದೇಶಿಸಿದರು.

ಸಹಕರಿಸಬೇಕು: ‘ಕೋಲಾರ ತಾಲ್ಲೂಕು ವ್ಯಾಪ್ತಿಯ ಬೆಳೆ ಸಾಲ, ಡೇರಿ, ಕೋಳಿ ಸಾಕಣೆ, ರೇಷ್ಮೆ ಹುಳು ಸಾಕಣೆ ಮನೆ, ವಾಹನ ಖರೀದಿ ಸಾಲವನ್ನು ನಿರ್ದೇಶಕ ಕೆ.ವಿ.ದಯಾನಂದ್ ಹಾಗೂ ಅಧಿಕಾರಿಗಳು ವಸೂಲಿ ಮಾಡಬೇಕು. ವಸತಿ ಹಾಗೂ ಮಹಿಳಾ ಸಂಘಗಳಿಗೆ ನೀಡಿರುವ ಸಾಲ ವಸೂಲಾತಿ ಜವಾಬ್ದಾರಿಯನ್ನು ನಾನೇ ವಹಿಸಿಕೊಳ್ಳುತ್ತೇನೆ. ಆಯಾ ತಾಲ್ಲೂಕು ನಿರ್ದೇಶಕರು ಸಾಲ ವಸೂಲಿಗೆ ಸಹಕರಿಸಬೇಕು’ ಎಂದು ಮನವಿ ಮಾಡಿದರು.

ಹೊಸ ಪಹಣಿ: ‘ಫಲಾನುಭವಿಗೆ ಸಾಲ ನೀಡಿರುವ ವಿವರ ಪಹಣಿಯಲ್ಲಿ ನಮೂದು ಆಗಿರುತ್ತದೆ. ಮರು ಪಾವತಿ ಮಾಡದೆ ಹೊಸ ಸಾಲ ಕೊಡಲು ಆಗುವುದಿಲ್ಲ. ಆದರೆ, ಆ ಫಲಾನುಭವಿಗಳು ಉಪ ನೋಂದಣಾಧಿಕಾರಿ ಕಚೇರಿಯಿಂದ ಹೊಸ ಪಹಣಿ ಪ್ರತಿ ತೆಗೆದುಕೊಂಡು ಬರುತ್ತಾರೆ’ ಎಂದು ಅಧಿಕಾರಿಗಳು ಹೇಳಿದರು.

ಇದಕ್ಕೆ ಸಿಡಿಮಿಡಿಗೊಂಡ ಅಧ್ಯಕ್ಷರು, ‘ಉಪ ನೋಂದಣಾಧಿಕಾರಿ ಕಚೇರಿ ದಲ್ಲಾಳಿಗಳ ಕೇಂದ್ರವಾಗಿದೆ. ₹ 5 ಸಾವಿರ ಲಂಚ ಕೊಟ್ಟರೆ ಅಲ್ಲಿನ ಅಧಿಕಾರಿಗಳು ಪಹಣಿ ತಿದ್ದುಪಡಿ ಮಾಡಿಕೊಡುತ್ತಾರೆ’ ಎಂದು ದೂರಿದರು.

ಬ್ಯಾಂಕ್‌ನ ನಿರ್ದೇಶಕರಾದ ನರಸಿಂಹರೆಡ್ಡಿ, ವೆಂಕಟರೆಡ್ಡಿ, ಕೆ.ವಿ.ದಯಾನಂದ್, ಎಂ.ಎಲ್.ಅನಿಲ್‌ಕುಮಾರ್‌, ದ್ಯಾವಣ್ಣ, ವಿ.ಶಿವಾರೆಡ್ಡಿ, ಚೆನ್ನರಾಯಪ್ಪ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT