ಅನುದಾನ ಸಮರ್ಪಕವಾಗಿ ಬಳಸಿ: ಜಿಲ್ಲಾಧಿಕಾರಿ

7

ಅನುದಾನ ಸಮರ್ಪಕವಾಗಿ ಬಳಸಿ: ಜಿಲ್ಲಾಧಿಕಾರಿ

Published:
Updated:
Deccan Herald

ಕೋಲಾರ: ‘ನಾಗರಿಕ ಹಕ್ಕು ಸಂರಕ್ಷಣಾ ಕಾಯ್ದೆ–1955 ಹಾಗೂ ಪರಿಶಿಷ್ಟ ಜಾತಿ ಮತ್ತು ವರ್ಗಗಳ ಕಾಯ್ದೆ–1989ರ ಅಡಿ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ಕಾರ್ಯಕ್ರಮ ಅನುಷ್ಠಾನಗೊಳಿಸಬೇಕು’ ಎಂದು ಜಿಲ್ಲಾಧಿಕಾರಿ ಜೆ.ಮಂಜುನಾಥ್ ತಿಳಿಸಿದರು.

ಈ ಕಾಯ್ದೆಗಳ ಅಡಿಯ ಕಾರ್ಯಕ್ರಮ ಜಾರಿ ಕುರಿತು ಇಲ್ಲಿ ಶನಿವಾರ ನಡೆದ ಸಭೆಯಲ್ಲಿ ಮಾತನಾಡಿ, ‘ಕಾಯ್ದೆಗಳ ಕುರಿತು ವಿಚಾರಗೋಷ್ಠಿ ಮತ್ತು ಕಾರ್ಯಾಗಾರ ನಡೆಸಬೇಕು. ಜತೆಗೆ ಸಂಘ ಸಂಸ್ಥೆಗಳಿಗೆ ಮಾಹಿತಿ ನೀಡಬೇಕು’ ಎಂದು ಹೇಳಿದರು.

‘ಇದು ಜನರಿಗೆ ಉಪಯೋಗವಾಗುವ ಕಾರ್ಯಕ್ರಮ ಆಗಿರುವುದರಿಂದ ವ್ಯಾಪಕ ಪ್ರಚಾರ ನಡೆಸಬೇಕು. ಇದಕ್ಕೆ ₹ 5 ಲಕ್ಷ ಬಿಡುಡೆಯಾಗಿದ್ದು, ಅನುದಾನವನ್ನು ಸಮರ್ಪಕವಾಗಿ ಬಳಸಬೇಕು. ಬೇರೆ ಉದ್ದೇಶಕ್ಕೆ ಬಳಸಿದರೆ ಶಿಸ್ತುಕ್ರಮ ಜರುಗಿಸುತ್ತೇನೆ’ ಎಂದು ಎಚ್ಚರಿಕೆ ನೀಡಿದರು.

‘ಇದು ಒಂದು ಸಂಘ ಸಂಸ್ಥೆಗಾಗಿ ಅಥವಾ ರಾಜಕೀಯಕ್ಕಾಗಿ ನಡೆಸುತ್ತಿರುವ ಕಾರ್ಯಕ್ರಮವಲ್ಲ. ಇದರ ಉದ್ದೇಶದ ಬಗ್ಗೆ ಜನರಿಗೆ ಅರಿವು ಮೂಡಿಸಬೇಕು. ವಿಚಾರಗೋಷ್ಠಿ ಹಾಗೂ ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಗಳ ಉಪನ್ಯಾಸ ಆಯೋಜಿಸಬೇಕು. ಜನರನ್ನು ಪ್ರಚೋದಿಸುವಂತಹ ವಿಚಾರ ಮಾತನಾಡುವಂತಿಲ್ಲ. ಈ ಸಂಗತಿಯನ್ನು ಸಂಪನ್ಮೂಲ ವ್ಯಕ್ತಿಗಳಿಗೆ ಮೊದಲೇ ತಿಳಿಸಿ’ ಎಂದು ಹೇಳಿದರು.

₹ 1.25 ಲಕ್ಷ ಬಿಡುಗಡೆ: ‘ಕಾರ್ಯಕ್ರಮಕ್ಕೆ ಮೊದಲ ಹಂತದಲ್ಲಿ ₹ 1.25 ಲಕ್ಷ ಬಿಡುಗಡೆಯಾಗಿದೆ. ನಗರದ ಟಿ.ಚನ್ನಯ್ಯ ರಂಗಮಂದಿರದಲ್ಲಿ ಸೆಪ್ಟೆಂಬರ್ ಮೊದಲ ವಾರದಲ್ಲಿ ಕಾರ್ಯಕ್ರಮ ನಡೆಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ’ ಎಂದು ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕಿ ಎಚ್.ಎಸ್.ಸಿಂಧು ತಿಳಿಸಿದರು.

‘ಇಲಾಖೆ ವ್ಯಾಪ್ತಿಯ ವಿಶೇಷ ಘಟಕ ಯೋಜನೆ ಮತ್ತು ಗಿರಿಜನ ಉಪ ಯೋಜನೆ (ಎಸ್‌ಸಿಪಿ– ಟಿಎಸ್‌ಪಿ) ಅನುಷ್ಠಾನ, ದಲಿತ ಕಾಲೊನಿಗಳ ಅಭಿವೃದ್ಧಿ, ಭವನಗಳ ನಿರ್ಮಾಣದ ಬಗ್ಗೆ ಹೆಚ್ಚಿನ ಪ್ರಚಾರ ನಡೆಸಲಾಗುವುದು’ ಎಂದು ಮಾಹಿತಿ ನೀಡಿದರು.

ಕೆಜಿಎಫ್ ಪೊಲೀಸ್ ಜಿಲ್ಲಾ ವರಿಷ್ಠಾಧಿಕಾರಿ ಬಿ.ಎಸ್‌.ಲೋಕೇಶ್ ಹಾಜರಿದ್ದರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !