ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಿನ ನಿತ್ಯದ ವ್ಯವಹಾರದಲ್ಲಿ ಕನ್ನಡ ಬಳಸಿ: ಶಿರಿನ್ ತಾಜ್

ವಿದ್ಯಾರ್ಥಿಗಳಿಂದ ನೃತ್ಯ ಪ್ರದರ್ಶನ: ವಿವಿಧ ಕ್ಷೇತ್ರದ ಸಾಧಕರಿಗೆ ಸನ್ಮಾನ
Last Updated 2 ನವೆಂಬರ್ 2022, 6:58 IST
ಅಕ್ಷರ ಗಾತ್ರ

ಶ್ರೀನಿವಾಸಪುರ: ‘ಪ್ರತಿಯೊಬ್ಬರು ನಾಡು, ನುಡಿ ಬಗ್ಗೆ ಅಭಿಮಾನ ಬೆಳೆಸಿಕೊಳ್ಳಬೇಕು. ದಿನನಿತ್ಯದ ವ್ಯವಹಾರದಲ್ಲಿ ಕನ್ನಡ ಭಾಷೆ ಬಳಸಬೇಕು’ ಎಂದು ತಹಶೀಲ್ದಾರ್ ಶಿರಿನ್ ತಾಜ್ ಹೇಳಿದರು.

ಪಟ್ಟಣದ ಬಾಲಕಿಯರ ಪದವಿಪೂರ್ವ ಕಾಲೇಜು ಮೈದಾನದಲ್ಲಿ ತಾಲ್ಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮತಿಯಿಂದ ಮಂಗಳವಾರ ಏರ್ಪಡಿಸಿದ್ದ ಕನ್ನಡ ರಾಜ್ಯೋತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ಅನ್ಯಭಾಷೆಯ ಪ್ರಭಾವ ಹೆಚ್ಚಾಗಿರುವ ಗಡಿ ಭಾಗದಲ್ಲಿ ಕನ್ನಡದ ಬಗ್ಗೆ ಗೌರವ ಭಾವನೆ ಇದ್ದರೆ ಸಾಲದು. ಹೃದಯದ ಭಾಷೆಯಾಗಿದ್ದರೆ ಸಾಲದು. ಅದು ಮಾತಾಗಿ ಬಳಕೆಯಾಗಬೇಕು ಎಂದು ಅಭಿಪ್ರಾಯಪಟ್ಟರು.

ಪೋಷಕರು ಮಕ್ಕಳೊಂದಿಗೆ ಕನ್ನಡದಲ್ಲಿ ಮಾತನಾಡಬೇಕು. ಕನ್ನಡದ ಹಿರಿಮೆ ಕುರಿತು ಪರಿಚಯ ಮಾಡಿಕೊಡಬೇಕು. ಕನ್ನಡ ಕೃತಿಗಳ ಓದಿಗೆ ಪ್ರೇರಣೆ ನೀಡಬೇಕು. ಕನ್ನಡ ಪರಿಸರ ನಿರ್ಮಾಣ ಮಾಡಲು ಶ್ರಮಿಸಬೇಕು ಎಂದು ಹೇಳಿದರು.

ತಾಲ್ಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ ಬಿ. ಕೃಷ್ಣಪ್ಪ ಮಾತನಾಡಿ, ಕನ್ನಡ ಸುಂದರ ಭಾಷೆ. ಕನ್ನಡ ಮಾತನಾಡಲು ಹಿಂಜರಿಕೆ ಬೇಡ. ಶಾಲೆ, ಕಚೇರಿ, ಮನೆ ಹಾಗೂ ಸಾರ್ವಜನಿಕ ಸ್ಥಳದಲ್ಲಿ ಕನ್ನಡ ಮೊಳಗಬೇಕು. ಜೀವಂತವಾಗಿ ಉಳಿಯಬೇಕು. ಉಳಿಸುವ ಹಾಗೂ ಬೆಳೆಸುವ ಹೊಣೆ ಎಲ್ಲರ ಮೇಲಿದೆ ಎಂದು ಹೇಳಿದರು.

ಉಪನ್ಯಾಸಕ ಎನ್. ಶಂಕರೇಗೌಡ ಮಾತನಾಡಿ, ಕನ್ನಡ ಪುರಾತನ ಭಾಷೆ. ಗಟ್ಟಿತನಕ್ಕೆ ಹೆಸರಾದ ಭಾಷೆಯೂ ಹೌದು ಎಂದರು.

ಕನ್ನಡ ಭಾಷೆಯಲ್ಲಿ ಸಾಹಿತ್ಯ ಹುಲುಸಾಗಿ ಬೆಳೆದಿದೆ. ಎಂಟು ಜ್ಞಾನಪೀಠ ಪ್ರಶಸ್ತಿ ಪಡೆಯುವುದರ ಮೂಲಕ ಕನ್ನಡ ಸಾಹಿತಿಗಳು ಭಾಷೆಗೆ ವಿಶೇಷ ಗೌರವ ಪ್ರಾಪ್ತವಾಗುವಂತೆ ಮಾಡಿದ್ದಾರೆ. ಹಿಂದಿನ ಹಾಗೂ ಇಂದಿನ ಸಾಹಿತಿಗಳು ತಮ್ಮ ಕೃತಿಗಳ ಮೂಲಕ ಭಾಷೆಯ ಘನತೆ ಹೆಚ್ಚಿಸಿದ್ದಾರೆ. ವಿದ್ಯಾರ್ಥಿಗಳು ಕನ್ನಡದ ಕೃತಿಗಳನ್ನು ಓದಬೇಕು ಎಂದು ಹೇಳಿದರು.

ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಕೆ. ನರಸಿಂಹಮೂರ್ತಿ, ಡಾ.ಉಮಾಶಂಕರ್, ಎಸ್.ಆರ್. ಅಶೋಕ್‌ ರೆಡ್ಡಿ, ಕೆ. ನಾಗರತ್ನಮ್ಮ, ಮುರಳಿ ಅವರನ್ನು ಸನ್ಮಾನಿಸಲಾಯಿತು. ವಿವಿಧ ಶಾಲೆಯ ವಿದ್ಯಾರ್ಥಿಗಳು ಕನ್ನಡ ನಾಡಿನ ಮಹತ್ವ ಸಾರುವ ಕನ್ನಡ ಗೀತೆಗಳಿಗೆ ನೃತ್ಯ ಪ್ರದರ್ಶಿಸಿದರು.

ಕ್ಷೇತ್ರ ಶಿಕ್ಷಣಾಧಿಕಾರಿ ವಿ. ಉಮಾದೇವಿ, ತಾಲ್ಲೂಕು ವೈದ್ಯಾಧಿಕಾರಿ ಡಾ.ಎಂ.ಸಿ. ವಿಜಯ, ಸಹಾಯಕ ಕೃಷಿ ನಿರ್ದೇಶಕ ಮಂಜುನಾಥ್, ಹಿರಿಯ ತೋಟಗಾರಿಕಾ ಸಹಾಯಕ ನಿರ್ದೇಶಕ ಎಂ. ಶ್ರೀನಿವಾಸನ್, ರೇಷ್ಮೆ ಸಹಾಯಕ ನಿರ್ದೇಶಕ ಕೃಷ್ಣಪ್ಪ, ಹಿರಿಯ ಕಂದಾಯ ನಿರೀಕ್ಷಕ ಬಿ.ವಿ. ಮುನಿರೆಡ್ಡಿ, ಪುರಸಭೆ ಅಧ್ಯಕ್ಷೆ ಲಲಿತಾ ಶ್ರೀನಿವಾಸ್, ಮುಖ್ಯಾಧಿಕಾರಿ ಎಂ. ಜಯರಾಂ, ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷೆ ಪಿ.ಎಸ್. ಮಂಜುಳ, ವೆಂಕಟೇಶ್ವರ ಗ್ರಾಮೀಣ ಆರೋಗ್ಯ ಶಿಕ್ಷಣ ಸಂಸ್ಥೆ ಅಧ್ಯಕ್ಷ ಡಾ.ವೈ.ವಿ. ವೆಂಕಟಾಚಲ, ಎಪಿಎಂಸಿ ಕಾರ್ಯದರ್ಶಿ ಉಮಾ, ವಿವಿಧ ಕನ್ನಡಪರ ಸಂಘಟನೆಗಳ ಮುಖ್ಯಸ್ಥರಾದ ಶ್ರೀನಿವಾಸ್, ರಮೇಶ್, ಬಲರಾಮೇಗೌಡ, ಆರ್. ರವಿಕುಮಾರ್, ತಾಲ್ಲೂಕು ಪ್ರೌಢಶಾಲಾ ಸಹಶಿಕ್ಷಕರ ಸಂಘದ ಅಧ್ಯಕ್ಷ ಸುಬ್ರಮಣಿ ಇದ್ದರು.ಪಟ್ಟಣದಲ್ಲಿ ಜಡಿ ಮಳೆಯ ನಡುವೆ ಭುವನೇಶ್ವರಿ ಭಾವಚಿತ್ರದ ಮೆರವಣಿಗೆ ನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT