ಶುಕ್ರವಾರ, ನವೆಂಬರ್ 27, 2020
23 °C
ಬಾಗಿನ ಅರ್ಪಣೆ ಕಾರ್ಯಕ್ರಮಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ನಾಗೇಶ್ ಹೇಳಿಕೆ

ಜನಪರ ಯೋಜನೆ ರಾಜಕೀಯಕ್ಕೆ ಬಳಸಬಾರದು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋಲಾರ: ‘ಜನಪರ ಯೋಜನೆ ಅನುಷ್ಠಾನಗೊಳಿಸಿದಾಗ ಅದನ್ನು ರಾಜಕೀಯ ಉದ್ದೇಶಕ್ಕೆ ಬಳಸಿಕೊಳ್ಳುವುದು ಸರಿಯಲ್ಲ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಚ್.ನಾಗೇಶ್ ಹೇಳಿದರು.

ನಗರದ ಹೊರವಲಯದ ಅಮ್ಮೇರಹಳ್ಳಿ ಕೆರೆಗೆ ಮಂಗಳವಾರ ಬಾಗಿನ ಅರ್ಪಿಸಿ ಮಾತನಾಡಿ, ‘ಕೆ.ಸಿ ವ್ಯಾಲಿ ಯೋಜನೆ ಅತಿ ಕಡಿಮೆ ಅವಧಿಯಲ್ಲಿ ಪೂರ್ಣಗೊಂಡು ಜಿಲ್ಲೆಗೆ ನೀರು ಬಂದಿದೆ. ಇಂತಹ ಪ್ರಯತ್ನ ದೇಶದಲ್ಲೇ ಮೊದಲು’ ಎಂದು ಅಭಿಪ್ರಾಯಪಟ್ಟರು.

‘ಕೆ.ಸಿ ವ್ಯಾಲಿ ನೀರಿನಿಂದ ಜಿಲ್ಲೆಯ ಕೆರೆಗಳು ಭರ್ತಿಯಾಗಿರುವುದು ಸಂತಸದ ವಿಚಾರ. ನರಸಾಪುರ, ಹೊಳಲಿ, ಶಿವಾರಪಟ್ಟಣ ಮತ್ತು ಜನ್ನಘಟ್ಟ ಕೆರೆ ಬಳಿ ಪಂಪ್‌ಹೌಸ್ ನಿರ್ಮಾಣ ಕಾರ್ಯ ಶೀಘ್ರವಾಗಿ ಮುಗಿದಿದೆ. ಅಭಿವೃದ್ಧಿ ಕೆಲಸಗಳಿಗೆ ಜನಪ್ರತಿನಿಧಿಗಳು ಪಕ್ಷಾತೀತವಾಗಿ ಸಹಕಾರ ನೀಡಿದಾಗ ಶೀಘ್ರ ಅನುಷ್ಠಾನ ಸಾಧ್ಯ’ ಎಂದರು.

‘ಕೆ.ಸಿ ವ್ಯಾಲಿ ಯೋಜನೆಗೆ ಸಾಕಷ್ಟು ಅಡೆತಡೆ ಎದುರಾಯಿತು. ಕೆಲವರು ನೀರಿನ ಗುಣಮಟ್ಟ ಪ್ರಶ್ನಿಸಿ ನ್ಯಾಯಾಲಯದ ಮೆಟ್ಟಿಲೇರಿದ ಸಂಗತಿ ಎಲ್ಲರಿಗೂ ಗೊತ್ತಿದೆ. ಆದರೂ ಹಟದಿಂದ ಯೋಜನೆ ಜಾರಿಗೊಳಿಸಿದ ಕೀರ್ತಿ ಶಾಸಕ ರಮೇಶ್‌ಕುಮಾರ್‌ ಅವರಿಗೆ ಸಲ್ಲುತ್ತದೆ’ ಎಂದು ಸಂಸದ ಎಸ್.ಮುನಿಸ್ವಾಮಿ ಹೇಳಿದರು.

‘ಕೆರೆಗೆ ನೀರು ಬಂದಿದೆ ಎಂದು ವ್ಯರ್ಥ ಮಾಡಬಾರದು. ರೈತರ ಬಹು ದಿನಗಳ ಬೇಡಿಕೆ ಈಡೇರಿದ್ದು, ನೀರನ್ನು ಮಿತವಾಗಿ ಬಳಸಬೇಕು. ಕೆರೆ ಅಥವಾ ಕೆ.ಸಿ ವ್ಯಾಲಿ ಯೋಜನೆ ಕಾಲುವೆಯಿಂದ ನೀರು ಕಳವು ಮಾಡಬಾರದು. ಅಂತರ್ಜಲ ವೃದ್ಧಿಗೆ ನೀರನ್ನು ಸದ್ಬಳಕೆ ಮಾಡಬೇಕು’ ಎಂದು ಸಲಹೆ ನೀಡಿದರು.

ಪಕ್ಷಾತೀತ ಸಹಕಾರ: ‘ಜಿಲ್ಲೆಯ ಜನಪ್ರತಿನಿಧಿಗಳು ಪಕ್ಷಾತೀತವಾಗಿ ಸಹಕಾರ ನೀಡಿದ್ದರಿಂದ ಹಾಗೂ ಗುತ್ತಿಗೆ ಕಂಪನಿ, ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳ ಪರಿಶ್ರಮದಿಂದ ಕೆ.ಸಿ ವ್ಯಾಲಿ ಯೋಜನೆ ಯಶಸ್ವಿಯಾಗಿದೆ’ ಎಂದು ಕೆ.ಆರ್.ರಮೇಶ್‌ಕುಮಾರ್‌ ತಿಳಿಸಿದರು.

‘ಯೋಜನೆ ಕಾಮಗಾರಿ ವೇಳೆ ಗುಡ್ಡ ಕುಸಿದು 4 ಕಾರ್ಮಿಕರು ಮೃತಪಟ್ಟರು. ಯೋಜನೆಗೆ ಶ್ರಮಿಸಿದ ಎಂಜಿನಿಯರ್ ವೆಂಕಟೇಶ್ ಹೃದಯಾಘಾತದಿಂದ ಕೊನೆಯುಸಿರೆಳೆದರು. ಅವರ ಶ್ರಮ ಪ್ರತಿಯೊಬ್ಬರು ಸ್ಮರಿಸಬೇಕು’ ಎಂದು ಕಿವಿಮಾತು ಹೇಳಿದರು.

‘₹ 1,350 ಕೋಟಿ ಅಂದಾಜು ವೆಚ್ಚದ ಕೆ.ಸಿ ವ್ಯಾಲಿ ಯೋಜನೆಯ ಮೊದಲ ಹಂತದಲ್ಲಿ 126 ಕೆರೆಗಳಿಗೆ ನೀರು ಹರಿಸಲಾಗುತ್ತಿದೆ. 2ನೇ ಹಂತದಲ್ಲಿ 257 ಕೆರೆಗಳಿಗೆ ನೀರು ಹರಿಸಲು ₹ 450 ಕೋಟಿ ಮೊತ್ತದ ಟೆಂಡರ್‌ ಕರೆಯಲಾಗಿದೆ. ಜೀವನದಲ್ಲಿ ರಾಜಕೀಯ ಮುಖ್ಯವಲ್ಲ. ಜನ ನೀಡಿರುವ ಅವಕಾಶಕ್ಕೆ ಋಣ ತೀರಿಸಬೇಕು’ ಎಂದರು.

ನ್ಯಾಯಯುತ ದರ: ‘ಬಿಜೆಪಿಯ ಸದಾನಂದಗೌಡರು ಮುಖ್ಯಮಂತ್ರಿಯಾಗಿದ್ದಾಗ ಎತ್ತಿಹೋಳೆ ಯೋಜನೆಗೆ ಅನುಮೋದನೆ ದೊರೆಯಿತು. ನಂತರ ಅಧಿಕಾರಕ್ಕೆ ಬಂದ ಸಿದ್ದರಾಮಯ್ಯ ಅವರ ಸಹಕಾರದಿಂದ ಯೋಜನೆಯ ಶೇ 50ರಷ್ಟು ಕಾಮಗಾರಿ ಮುಗಿದಿದೆ. ಯೋಜನೆಗೆ ಅಗತ್ಯವಿರುವ ರೈತರ ಜಮೀನಿನ ಸ್ವಾಧೀನಕ್ಕೆ ಸಂಬಂಧಪಟ್ಟಂತೆ ಭೂ ಪರಿಹಾರದ ವ್ಯತ್ಯಾಸವಿದೆ. ಸರ್ಕಾರ ಮಧ್ಯಪ್ರವೇಶಿಸಿ ಜಮೀನಿಗೆ ನ್ಯಾಯಯುತ ದರ ನಿಗದಿಪಡಿಸಿ ಹಣ ಬಿಡುಗಡೆ ಮಾಡಬೇಕು’ ಎಂದು ಕೋರಿದರು.

ಕೆ.ಸಿ ವ್ಯಾಲಿ ನೀರಿನಿಂದ ಭರ್ತಿಯಾಗಿರುವ ಮುದುವಾಡಿ ಕೆರೆಯ ತೂಬಿನ ಗೇಟ್‌ ತೆರೆಯಲಾಯಿತು. ಶಾಸಕ ಕೆ.ಶ್ರೀನಿವಾಸಗೌಡ, ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಸಿ.ಎಸ್.ವೆಂಕಟೇಶ್, ವಿಧಾನ ಪರಿಷತ್ ಸದಸ್ಯರಾದ ವೈ.ಎ.ನಾರಾಯಣಸ್ವಾಮಿ, ಗೋವಿಂದರಾಜು, ನಜೀರ್ ಅಹಮ್ಮದ್‌, ನಗರಸಭೆ ಸದಸ್ಯರಾದ ಪ್ರವೀಣ್‌ಗೌಡ, ಶ್ವೇತಾ, ಅಂಬರೀಶ್, ರಾಕೇಶ್‌ಗೌಡ, ಮಂಜುನಾಥ್, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ರಂಗಸ್ವಾಮಿ, ನಗರಸಭೆ ಆಯುಕ್ತ ಶ್ರೀಕಾಂತ್ ಹಾಜರಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.