ವಾಜಪೇಯಿ ಆದರ್ಶ– ದೇಶಪ್ರೇಮ ಚಿರಸ್ಥಾಯಿ

7
ಶ್ರದ್ಧಾಂಜಲಿ ಸಭೆಯಲ್ಲಿ ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ವೆಂಕಟಮುನಿಯಪ್ಪ ಸ್ಮರಣೆ

ವಾಜಪೇಯಿ ಆದರ್ಶ– ದೇಶಪ್ರೇಮ ಚಿರಸ್ಥಾಯಿ

Published:
Updated:
Deccan Herald

ಕೋಲಾರ: ‘ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ದೈಹಿಕವಾಗಿ ದೂರವಾಗಿದ್ದರೂ ಅವರ ಆದರ್ಶ, ದೇಶಪ್ರೇಮ ಚಿರಸ್ಥಾಯಿಯಾಗಿದೆ’ ಎಂದು ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ವೆಂಕಟಮುನಿಯಪ್ಪ ಸ್ಮರಿಸಿದರು.

ವಾಜಪೇಯಿ ಸ್ಮರಣಾರ್ಥ ಬಿಜೆಪಿ ಜಿಲ್ಲಾ ಘಟಕವು ಇಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಶ್ರದ್ಧಾಂಜಲಿ ಸಭೆಯಲ್ಲಿ ಮಾತನಾಡಿ, ‘ದೇಶ ಕಂಡ ಅಪ್ರತಿಮ ವಾಗ್ಮಿ, ಮಹಾನ್ ವ್ಯಕ್ತಿ ವಾಜಪೇಯಿ ಅವರು ಇನ್ನಷ್ಟು ಕಾಲ ನಮ್ಮೊಂದಿಗಿರಬೇಕಿತ್ತು. ಅವರ ಜೀವನ ಚರಿತ್ರೆ, ಸಾಧನೆಗಳು ಪಕ್ಷದ ಕಾರ್ಯಕರ್ತರಿಗೆ ಸ್ಫೂರ್ತಿದಾಯಕ’ ಎಂದು ಅಭಿಪ್ರಾಯಪಟ್ಟರು.

‘ಬಿಜೆಪಿಯೇತರ ಸರ್ಕಾರಗಳು ದೇಶದ ಗ್ರಾಮೀಣ ಭಾಗದ ರಸ್ತೆಗಳ ಅಭಿವೃದ್ಧಿಗೆ ಗಮನಹರಿಸಿದ್ದು ಕಡಿಮೆ. ವಾಜಪೇಯಿ ಅವರು ಗ್ರಾಮ ಸಡಕ್ ಯೋಜನೆ ಜಾರಿಗೊಳಿಸಿ ಪ್ರತಿ ಹಳ್ಳಿ ಹಳ್ಳಿಯಲ್ಲೂ ರಸ್ತೆ ನಿರ್ಮಿಸಿ ಅನುಕೂಲ ಮಾಡಿಕೊಟ್ಟಿದ್ದಾರೆ. ಜನ ಅವರ ಸೇವೆ ಎಂದಿಗೂ ಮರೆಯಬಾರದು. ಅವರು ಜಿಲ್ಲೆಯ ಅಭಿವೃದ್ಧಿಗೂ ಅಪಾರ ಕೊಡುಗೆ ನೀಡಿದ್ದಾರೆ’ ಎಂದು ಹೇಳಿದರು.

ಮನಸ್ಸುಗಳಲ್ಲಿ ದಾಖಲು: ‘ವಾಜಪೇಯಿ ದೇಶದ ಜನರ ಮನಸ್ಸುಗಳಲ್ಲಿ ದಾಖಲಾಗಿದ್ದಾರೆ. ಜನ ಅವರನ್ನು ಅರ್ಥ ಮಾಡಿಕೊಂಡು ಸನ್ಮಾರ್ಗದಲ್ಲಿ ಸಾಗಿದರೆ ಮೃತರ ಆತ್ಮಕ್ಕೆ ಶಾಂತಿ ಸಿಗುತ್ತದೆ’ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ನಿಕಟ ಪೂರ್ವ ಅಧ್ಯಕ್ಷ ಜೆ.ಜಿ.ನಾಗರಾಜ್ ತಿಳಿಸಿದರು.

‘ಮಧ್ಯಪ್ರದೇಶದಿಂದ 12 ಬಾರಿ ಸಂಸದರಾಗಿ ಆಯ್ಕೆಯಾಗಿದ್ದ ವಾಜಪೇಯಿ 13 ದಿನ, 13 ತಿಂಗಳು, ನಂತರ 5 ವರ್ಷ ಪೂರ್ಣಾವಧಿ ಪ್ರಧಾನಿಯಾಗಿ ಕಾರ್ಯ ನಿರ್ವಹಿಸಿದರು. ದೇಶದ ಹಲವು ಜ್ವಲಂತ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಅವರ ಪ್ರಾಮಾಣಿಕ ಪ್ರಯತ್ನ ಮಾಡಿದರು’ ಎಂದು ಬಣ್ಣಿಸಿದರು.

ಜನಪರವಾಗಿವೆ: ‘ವಾಜಪೇಯಿ ಅಧಿಕಾರವಾಧಿಯಲ್ಲಿ ಜಾರಿಯಾದ ಯೋಜನೆಗಳು ಇಂದಿಗೂ ಜನಪರವಾಗಿವೆ. ಅವರು ಪ್ರಧಾನಿಯಾಗಿದ್ದಾಗ ಪೋಖ್ರಾಣ್‌ನಲ್ಲಿ ಅಣ್ವಸ್ತ್ರ ಪರೀಕ್ಷೆ ನಡೆಸುವ ಮೂಲಕ ದೇಶದ ಶಕ್ತಿ ಸಾಮರ್ಥ್ಯವನ್ನು ಇಡೀ ಜಗತ್ತಿಗೆ ತೋರಿಸಿಕೊಟ್ಟರು. ಸರ್ವ ಶಿಕ್ಷಣ ಅಭಿಯಾನದ ಮೂಲಕ ಪ್ರತಿ ಮಗುವಿಗೂ ಮಕ್ಕಳಿಗೂ ಉಚಿತ ಶಿಕ್ಷಣ ಸಿಗುವಂತೆ ಮಾಡಿದ ಕೀರ್ತಿ ಅವರದ್ದು’ ಎಂದು ರಾಜ್ಯ ಬಿಜೆಪಿ ಯುವ ಮೋರ್ಚಾ ಉಪಾಧ್ಯಕ್ಷ ಓಶಂಕ್ತಿ ಚಲಪತಿ ಹೇಳಿದರು.

‘ಜಿಲ್ಲೆಯಲ್ಲಿ ₹ 1,800 ಕೋಟಿ ಅಂದಾಜು ವೆಚ್ಚದಲ್ಲಿ ನಿರ್ಮಾಣವಾಗಿರುವ ಪವರ್ ಗ್ರಿಡ್‌ ಲೋಕಾರ್ಪಣೆಗಾಗಿ ವಾಜಪೇಯಿ ಅವರು ಕೋಲಾರಕ್ಕೆ ಬಂದಿದ್ದಾಗ ನಾನು ಚಿಕ್ಕ ಹುಡುಗನಾಗಿದ್ದೆ. ಅವರು ಸೈದ್ಧಾಂತಿಕ ನೆಲೆಯಲ್ಲಿ ಪಕ್ಷ ಸಂಘಟಿಸಿದರು. ಅವರು ಪ್ರತಿನಿಧಿಸಿದ ಪಕ್ಷದಲ್ಲಿ ಕಾರ್ಯಕರ್ತನಾಗಿರುವುದಕ್ಕೆ ಹೆಮ್ಮೆ ಎನಿಸುತ್ತದೆ’ ಎಂದರು.

ಭಾವಚಿತ್ರಕ್ಕೆ ಪುಷ್ಪನಮನ: ಪಕ್ಷದ ಕಾರ್ಯಕರ್ತರು ವಾಜಪೇಯಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮೌನಾಚರಣೆ ಮಾಡಿದರು. ವಿವಿಧ ಸಂಘಟನೆಗಳ ಮುಖಂಡರು ನಮನ ಸಲ್ಲಿಸಿ ವಾಜಪೇಯಿಯವರ ಗುಣಗಾನ ಮಾಡಿದರು. ಬಿಜೆಪಿ ಮುಖಂಡರಾದ ನಾರಾಯಣಸ್ವಾಮಿ, ವಿಜಯಕುಮಾರ್, ವಾಸು, ಸತ್ಯನಾರಾಯಣರಾವ್, ಸಿರಾಜ್, ರಾಜೇಶ್ವರಿ, ಜಯಂತಿಲಾಲ್ ಜೈನ್, ರಮೇಶ್, ಶಂಕರನಾಯಕ್, ಕೆ.ವಿ.ಮನೋಹರ್, ನಾಗರತ್ನ, ಸಿ.ವೆಂಕಟೇಶ್, ತಿಮ್ಮರಾಯಪ್ಪ, ಚಲಪತಿ, ಕೃಷ್ಣಪ್ಪ, ಕೆಂಪಣ್ಣ ಹಾಜರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !