ಸೋಮವಾರ, ಮೇ 23, 2022
30 °C
ಉತ್ತರ ಕರ್ನಾಟಕದಲ್ಲಿ ಪಕ್ಷೇತರರಾಗಿ ಸ್ಪರ್ಧಿಸಲಿ: ಕೆ.ಎಚ್‌.ಮುನಿಯಪ್ಪ ಸವಾಲು

‘ವರ್ತೂರಿಗೆೆ ಕಾಂಗ್ರೆಸ್‌ನಲ್ಲಿ ಸ್ಥಾನವಿಲ್ಲ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋಲಾರ: ‘ಮಾಜಿ ಸಚಿವ ವರ್ತೂರು ಪ್ರಕಾಶ್‌ ಅವರನ್ನು ಕಾಂಗ್ರೆಸ್ ಪಕ್ಷಕ್ಕೆ ಸೇರಿಸಿಕೊಳ್ಳುವುದಿಲ್ಲ ಎಂದು ಹೈಕಮಾಂಡ್‌ ಈ ಮೊದಲೇ ಸ್ಪಷ್ಟೀಕರಣ ನೀಡಿದ್ದರೂ, ತಾವು ಕಾಂಗ್ರೆಸ್ ಸೇರುವುದಾಗಿ ಇಲ್ಲಸಲ್ಲದ ಹೇಳಿಕೆ ನೀಡಿ ಗೊಂದಲ ಸೃಷ್ಟಿ ಮಾಡುತ್ತಿದ್ದಾರೆ’ ಎಂದು ಮಾಜಿ ಸಂಸದ ಕೆ.ಎಚ್‌.ಮುನಿಯಪ್ಪ ಹೇಳಿದರು.

ನಗರದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ವರ್ತೂರು ಪ್ರಕಾಶ್‌ ಕಾಂಗ್ರೆಸ್ ಸೇರುವ ಬಗ್ಗೆ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಸ್ಪಷ್ಟನೆಯನ್ನು ಗ್ರಾಮ ಪಂಚಾಯಿತಿ ಚುನಾವಣೆ ಮುನ್ನವೇ ನೀಡಿದ್ದರು. ಆದರೂ ಪದೇ ಪದೇ ಒಂದೇ ರೀತಿಯ ಹೇಳಿಕೆ ನೀಡುತ್ತಿದ್ದಾರೆ. ಎರಡು ಬಾರಿ ಶಾಸಕರಾಗಿ, ಒಮ್ಮೆ ಸಚಿವರಾಗಿದ್ದ ಅವರು ಸಣ್ಣತನದ ಹೇಳಿಕೆ ನೀಡಬಾರದು’ ಎಂದರು.

‘ಪಕ್ಷೇತರರಾಗಿ ಅವರು ಎಲ್ಲಿ ಬೇಕಾದರೂ ಸ್ಪರ್ಧೆ ಮಾಡಲಿ. ಅವರಿಗೆ ಸ್ವಾತಂತ್ರ್ಯವಿದೆ. ಉತ್ತರ ಕರ್ನಾಟಕದ ಭಾಗಕ್ಕೆ ಹೋಗಿ ಎಲ್ಲಿಯಾದರೂ ಸ್ಪರ್ಧೆ ಮಾಡಿ ಗೆಲ್ಲುವ ನಿಟ್ಟಿನಲ್ಲಿ ಯೋಚಿಸುವ ಬದಲು ಕಾಂಗ್ರೆಸ್‌ ಮುಖಂಡರ ತೇಜೋವಧೆ ಮಾಡುವುದು ಸರಿಯಲ್ಲ. ಕೋಲಾರದಲ್ಲಿ ಕಾಂಗ್ರೆಸ್‌ ಪಕ್ಷವೇ ಇಲ್ಲ ಎನ್ನುವುದು ಸರಿಯಲ್ಲ. ಜವಾಬ್ದಾರಿ ಇಟ್ಟುಕೊಂಡು ಮಾತನಾಡಬೇಕು. ಅವರು ಕಾಂಗ್ರೆಸ್‌ ಸೇರುವ ಯಾವುದೇ ಪ್ರಸ್ತಾಪ ಇಲ್ಲ. ಅವರನ್ನು ಕಾಂಗ್ರೆಸ್‌ ಪಕ್ಷಕ್ಕೆ ಸೇರಿಸುವುದಿಲ್ಲ’ ಎಂದು ಮುನಿಯಪ್ಪ ಸ್ಪಷ್ಟಪಡಿಸಿದರು.

ಗ್ರಾ.ಪಂ ಚುನಾವಣೆಗೆ ಪಕ್ಷದ ಗುರುತು ಇರುವುದಿಲ್ಲ. ಯಾರು ಯಾವ ಕಡೆಗೆ ಬೇಕಾದರೂ ಬೆಂಬಲ ನೀಡಬಹುದು. ನಮ್ಮ ಅಭ್ಯರ್ಥಿಗಳೆಲ್ಲರಿಗೂ ಸಹಕಾರವನ್ನು ಚುನಾವಣೆಯಲ್ಲಿ ನೀಡಿದ್ದೇವೆ. ಪಕ್ಷದ ಸಿದ್ಧಾಂತಗಳು ಗೊತ್ತಿರಬೇಕು. ವರ್ತೂರು ಒತ್ತಾಯಕ್ಕೆ ಮಣಿದು ಕೆಲವರು ಹೋಗಿದ್ದಾರೆ. ಅಂತಹವರು ಮತ್ತೆ ಕಾಂಗ್ರೆಸ್‍ಗೆ ಬರುವ ಅವಶ್ಯಕತೆಯಿಲ್ಲ. ಸದ್ಯದಲ್ಲೇ ನಡೆಯಲಿರುವ ಅಭಿನಂದನಾ ಸಮಾರಂಭದಲ್ಲಿ ನಮ್ಮ ಶಕ್ತಿ ತೋರಿಸಲಿದ್ದೇವೆ
ಎಂದರು.

ಮುಂಬರುವ ತಾ.ಪಂ, ಜಿ.ಪಂ ಚುನಾವಣೆಗೆ ಸಿದ್ಧರಾಗಲು ಬೂತ್ ಮಟ್ಟದಲ್ಲಿ ಸಮಿತಿಗಳ ರಚನೆಯಾಗಬೇಕಿದೆ. ಒಂದು ತಿಂಗಳ ಒಳಗಾಗಿ ಸಿದ್ದರಾಮಯ್ಯ, ಡಿಕೆಶಿಯವರನ್ನು ಕರೆತಂದು ಜಿಲ್ಲೆಯಲ್ಲಿ ದೊಡ್ಡ ಮಟ್ಟದಲ್ಲಿ ಕಾರ್ಯಕ್ರಮ ಆಯೋಜಿಸಲಾಗುವುದು ಎಂದರು.

ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಅಗತ್ಯ ವಸ್ತುಗಳ ಬೆಲೆ ಗಗನಕ್ಕೆ ಏರುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಅವರಿಗೆ ಜನ ಸಾಮಾನ್ಯರ ಕಷ್ಟ ಗೊತ್ತಿಲ್ಲ. ರೈತರು ಕಳೆದ ಎರಡು ತಿಂಗಳಿನಿಂದಲೂ ನಿರಂತರವಾಗಿ ಪ್ರತಿಭಟನೆ ಮಾಡುತ್ತಲೇ ಇದ್ದಾರೆ. ಅದರ ಬಗ್ಗೆ ಕಿಂಚಿತ್ತೂ ಕಾಳಜಿ ತೋರಿಸುತ್ತಿಲ್ಲ. ಬಿಜೆಪಿಯದು ಕಾರ್ಪೋರೇಟ್ ಕಂಪನಿಗಳನ್ನು ಉದ್ಧಾರ ಮಾಡುವ ನೀತಿಯಾಗಿದೆ ಎಂದು ಕಿಡಿಕಾರಿದರು.

ಕಾಂಗ್ರೆಸ್ ಸಮಿತಿ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಚಂದ್ರಾರೆಡ್ಡಿ ಮಾತನಾಡಿ, ಗ್ಯಾಸ್, ಪೆಟ್ರೋಲ್-ಡೀಸೆಲ್ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಏರಿಕೆ ಖಂಡಿಸಿ ದೆಹಲಿ ರೈತರ ಹೋರಾಟವನ್ನು ಬೆಂಬಲಿಸಿ ಕೋಲಾರದಲ್ಲಿ ಪ್ರತಿಭಟನೆ ನಡೆಯಲಿದೆ
ಎಂದರು.

ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಕಾಂಗ್ರೆಸ್ ವಕ್ತಾರ ಎಲ್.ಎ.ಮಂಜುನಾಥ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎ.ಪ್ರಸಾದ್‍ಬಾಬು, ನಗರಸಭೆ ಸದಸ್ಯ ಬಿ.ಎಂ.ಮುಬಾರಕ್ ಹಾಜರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು