ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಂಗ್ರೆಸ್‌ ಪಕ್ಷ ಸೇರಲು ತೀರ್ಮಾನ: ವರ್ತೂರು ಪ್ರಕಾಶ್ ಘೋಷಣೆ

ಪತ್ರಿಕಾಗೋಷ್ಠಿಯಲ್ಲಿ ಮಾಜಿ ಸಚಿವ ವರ್ತೂರು ಪ್ರಕಾಶ್ ಘೋಷಣೆ
Last Updated 15 ಫೆಬ್ರುವರಿ 2021, 14:46 IST
ಅಕ್ಷರ ಗಾತ್ರ

ಕೋಲಾರ: ‘ಬೆಂಬಲಿಗರು ಹಾಗೂ ಕಾರ್ಯಕರ್ತರ ಒತ್ತಾಯದಂತೆ ಕಾಂಗ್ರೆಸ್‌ ಸೇರಲು ತೀರ್ಮಾನಿಸಿದ್ದು, ಈಗಾಗಲೇ ಆ ಪಕ್ಷದ ಮುಖಂಡರೊಂದಿಗೆ ಚರ್ಚಿಸಿದ್ದೇನೆ. ಸದ್ಯದಲ್ಲೇ ಅಂತಿಮ ನಿರ್ಧಾರವಾಗಲಿದೆ’ ಎಂದು ಮಾಜಿ ಸಚಿವ ವರ್ತೂರು ಪ್ರಕಾಶ್ ಹೇಳಿದರು.

ಇಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ಬಿಜೆಪಿ ಕಂಡರೆ ನನಗೆ ಮೊದಲಿನಿಂದಲೂ ಆಗುವುದಿಲ್ಲ. ಜೆಡಿಎಸ್ ಸಹವಾಸ ಬೇಡ. ನನ್ನನ್ನು ಪಕ್ಷಕ್ಕೆ ಸೇರಿಸಿಕೊಳ್ಳಲು ಕಾಂಗ್ರೆಸ್‌ ಮುಖಂಡರು ಒಪ್ಪದಿದ್ದರೆ ಹೊಲಿಗೆ ಯಂತ್ರದ ಗುರುತಿನಲ್ಲಿ ರಾಜಕೀಯ ಮುಂದುವರಿಸುತ್ತೇನೆ’ ಎಂದರು.

‘ವಿಧಾನಸಭೆ ಚುನಾವಣೆಗೆ 26 ತಿಂಗಳು ಬಾಕಿಯಿದೆ. ಯಾರ ಬಗ್ಗೆಯೂ ಹೆಚ್ಚು ಮಾತನಾಡುವುದಿಲ್ಲ. ಶಾಸಕನಾಗುವುದಷ್ಟೇ ನನ್ನ ಗುರಿ. ಹಿಂದಿನ ವಿಧಾನಸಭಾ ಚುನಾವಣೆಯಲ್ಲಿ ‘ನಮ್ಮ ಕಾಂಗ್ರೆಸ್’ ಪಕ್ಷದಿಂದ ಗೆಲ್ಲಲು ಸಾಧ್ಯವಾಗಲಿಲ್ಲ. ನನಗೆ 54 ವರ್ಷ ವಯಸ್ಸಾಗಿದ್ದು, ಒಂದಷ್ಟು ಕಾಲ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದಲ್ಲಿ ಇರಬೇಕೆಂದು ಬಯಸಿದ್ದೇನೆ. ಜತೆಗೆ ಕಾರ್ಯಕರ್ತರ ಒತ್ತಾಯವೂ ಇದೆ’ ಎಂದು ತಿಳಿಸಿದರು.

‘ಸಿದ್ದರಾಮಯ್ಯ ನನ್ನ ರಾಜಕೀಯ ಗುರು. ಅವರ ಹಾದಿಯಲ್ಲೇ ಸಾಗುತ್ತೇನೆ. ಅಹಿಂದ ಸಮಾವೇಶಕ್ಕೆ ನನ್ನ ಬೆಂಬಲವಿದ್ದು, ಅವರು ಒಪ್ಪಿದರೆ ಕೋಲಾರ ಕ್ಷೇತ್ರದಲ್ಲೇ 2 ಲಕ್ಷಕ್ಕೂ ಹೆಚ್ಚು ಮಂದಿಯನ್ನು ಸೇರಿಸಿ ಸಮಾವೇಶ ನಡೆಸಲು ಸಿದ್ಧ’ ಎಂದು ಘೋಷಿಸಿದರು.

‘ಮಾಜಿ ಸಂಸದ ಕೆ.ಎಚ್.ಮುನಿಯಪ್ಪ ಅವರಿಗೆ ಕೋಲಾರದಲ್ಲಿ ಪ್ರತಿ ಹಳ್ಳಿಯೂ ಗೊತ್ತು. ಆದರೆ, ಮುಖಂಡರು ಗೊತ್ತಿಲ್ಲ. ಗ್ರಾ.ಪಂ ಚುನಾವಣೆಯಲ್ಲಿ ಕೋಲಾರ ವಿಧಾನಸಭಾ ಕ್ಷೇತ್ರದಲ್ಲಿ 7 ಮಂದಿ ಕಾಂಗ್ರೆಸ್‌ ಬೆಂಬಲಿತರು ಮಾತ್ರ ಗೆದ್ದಿದ್ದಾರೆ. ಕಾಂಗ್ರೆಸ್‌ ಮುಖಂಡರು ಈ ಬಗ್ಗೆ ಮುನಿಯಪ್ಪ ಅವರಿಗೆ ಮಾಹಿತಿ ನೀಡಿಲ್ಲ. ಖುದ್ದು ಮುನಿಯಪ್ಪ ಅವರನ್ನು ಭೇಟಿಯಾಗಿ ಎಲ್ಲಾ ವಿಚಾರ ಚರ್ಚಿಸುತ್ತೇನೆ’ ಎಂದರು.

ನಿದ್ರಾವಸ್ಥೆಯಲ್ಲಿ ಶಾಸಕರು: ‘ಕ್ಷೇತ್ರದ ಶಾಸಕ ಕೆ.ಶ್ರೀನಿವಾಸಗೌಡರು 3 ವರ್ಷದಿಂದ ನಿದ್ರಾವಸ್ಥೆಯಲ್ಲಿದ್ದು, ಅಭಿವೃದ್ಧಿ ಕುಂಠಿತಗೊಂಡಿದೆ. ಕೋಲಾರ ಕ್ಷೇತ್ರ ಸರ್ವ ನಾಶವಾಗಿದೆ. ನಾನು ಶಾಸಕನಾಗಿದ್ದಾಗ ಬಿಡುಗಡೆ ಮಾಡಿಸಿದ್ದ ಅನುದಾನದಲ್ಲೇ ರಸ್ತೆ ಅಭಿವೃದ್ಧಿ, ಯುಜಿಡಿ ಕಾಮಗಾರಿ ನಡೆಯುತ್ತಿವೆ. ಶ್ರೀನಿವಾಸಗೌಡರು ಶಾಸಕರು ಕನಿಷ್ಠ ₹ 10 ಲಕ್ಷ ಅನುದಾನ ತಂದಿದ್ದರೆ ಸಾಬೀತುಪಡಿಸಲಿ’ ಎಂದು ಸವಾಲು ಹಾಕಿದರು.

‘ಗಂಗಾ ಕಲ್ಯಾಣ ಯೋಜನೆಯಡಿ 3 ವರ್ಷದಿಂದ ಫಲಾನುಭವಿಗಳಿಗೆ ಪಂಪ್‌ ಮೋಟರ್‌ ವಿತರಣೆಯಾಗಿಲ್ಲ. ಆಗ ನನ್ನನ್ನು ಟೀಕಿಸುತ್ತಿದ್ದ ಶ್ರೀನಿವಾಸಗೌಡರು ಪಂಪ್‌ ಮೋಟರ್‌ ವಿತರಣೆ ಮಾಡಲಿ. ಮೊದಲಿನಿಂದಲೂ ಹಿಂದುಳಿದ ವರ್ಗದವರು, ಪರಿಶಿಷ್ಟರನ್ನು ತುಳಿಯುತ್ತಾ ಬಂದಿರುವ ಅವರು ಜನಪರವಾಗಿ ಕೆಲಸ ಮಾಡಲಿ’ ಎಂದು ಕುಟುಕಿದರು.

‘ಶ್ರೀನಿವಾಸಗೌಡರ ನಡೆಯಿಂದ ಬೇಸತ್ತಿರುವ ಅವರ ಸಾಕಷ್ಟು ಬೆಂಬಲಿಗರು ಜೆಡಿಎಸ್ ತೊರೆದು ನಮ್ಮೊಂದಿಗೆ ಸೇರ್ಪಡೆಯಾಗಲು ನಿರ್ಧರಿಸಿದ್ದಾರೆ. ಕ್ಷೇತ್ರದಲ್ಲಿ ವರ್ತೂರು ಹವಾ ಜೋರಾಗಿದ್ದು, ಪಕ್ಷಾಂತರ ಪರ್ವ ಆರಂಭವಾಗಿದೆ. ನಮ್ಮ ಮುಖಂಡರ ಸಮಿತಿ ರಚಿಸಿ ಅವರು ಒಪ್ಪುವವರನ್ನು ಸೇರ್ಪಡೆ ಮಾಡಿಕೊಳ್ಳುತ್ತೇವೆ’ ಎಂದು ಸ್ಪಷ್ಟಪಡಿಸಿದರು.

ಜಿಲ್ಲಾ ಪಂಚಾಯಿತಿ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಸಿ.ಎನ್.ಅರುಣ್‌ಪ್ರಸಾದ್, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಎಂ.ಆಂಜಿನಪ್ಪ, ವರ್ತೂರು ಪ್ರಕಾಶ್‌ ಬೆಂಬಲಿಗರಾದ ಬೆಗ್ಲಿ ಪ್ರಕಾಶ್, ಮಂಜು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT