ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋಲಾರ ರೈಲು ನಿಲ್ದಾಣಕ್ಕೆ ಮುತ್ತಿಗೆ ಯತ್ನ: ವಾಟಾಳ್‌ ನಾಗರಾಜ್‌ ಬಂಧಿನ, ಬಿಡುಗಡೆ

ನಗರ ರೈಲು ನಿಲ್ದಾಣಕ್ಕೆ ಮುತ್ತಿಗೆ ಯತ್ನ: ಪೊಲೀಸರ ತಡೆ
Last Updated 28 ಸೆಪ್ಟೆಂಬರ್ 2019, 15:03 IST
ಅಕ್ಷರ ಗಾತ್ರ

ಕೋಲಾರ: ನಗರದ ರೈಲು ನಿಲ್ದಾಣವನ್ನು ಮಾದರಿ ನಿಲ್ದಾಣವಾಗಿಸುವುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಇಲ್ಲಿ ಶನಿವಾರ ರೈಲು ನಿಲ್ದಾಣಕ್ಕೆ ಮುತ್ತಿಗೆ ಹಾಕಲೆತ್ನಿಸಿದ ಕನ್ನಡ ಚಳವಳಿ ವಾಟಾಳ್‌ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಅವರನ್ನು ಪೊಲೀಸರು ಬಂಧಿಸಿ ಬಿಡುಗಡೆ ಮಾಡಿದರು.

ಕನ್ನಡಪರ ಸಂಘಟನೆಗಳ ಸದಸ್ಯರು ವಾಟಾಳ್ ನಾಗರಾಜ್ ನೇತೃತ್ವದಲ್ಲಿ ರೈಲು ನಿಲ್ದಾಣಕ್ಕೆ ಮುತ್ತಿಗೆ ಹಾಕಿ ಧರಣಿ ಮಾಡಲೆತ್ಸಿಸಿದರು. ಇದಕ್ಕೆ ಪೊಲೀಸರು ಅವಕಾಶ ಕೊಡದಿದ್ದರಿಂದ ಆಕ್ರೋಶಗೊಂಡ ಧರಣಿನಿರತರು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

‘ಅನುಮತಿ ಇಲ್ಲದೆ ನಿಲ್ದಾಣದ ಒಳಗೆ ಹೋಗುವಂತಿಲ್ಲ’ ಎಂದು ಪೊಲೀಸರು ಧರಣಿನಿರತರನ್ನು ಪ್ರವೇಶ ಭಾಗದಲ್ಲೇ ತಡೆದರು. ಇದಕ್ಕೆ ಸಿಡಿಮಿಡಿಗೊಂಡ ವಾಟಾಳ್ ನಾಗರಾಜ್‌, ‘ಯಾರ ಅನುಮತಿ ಬೇಕು. ನಾನು ಸಾಮಾನ್ಯ ಪ್ರಯಾಣಿಕನಂತೆ ಒಳ ಹೋಗುತ್ತಿದ್ದೇನೆ. ಅಲ್ಲಿ ಧರಣಿ ಮಾಡಿದರೆ ಬಂಧಿಸಿ. ದೆಹಲಿ ಹಾಗೂ ಬೆಂಗಳೂರಿನಲ್ಲಿರುವ ನಿಮ್ಮ ಹಿರಿಯ ಅಧಿಕಾರಿಗಳಿಂದ ಅನುಮತಿ ಬರುವವರೆಗೂ ನಾನು ಇಲ್ಲೇ ಇರಬೇಕಾ?’ ಎಂದು ಪ್ರಶ್ನಿಸಿದರು.

‘ನಮ್ಮನ್ನು ನಿಲ್ದಾಣದೊಳಗೆ ಬಿಡದೆ ಹೋರಾಟಕ್ಕೆ ಅಡ್ಡಿಪಡಿಸಿರಬಹುದು. ಅ.6ರಂದು ಬಂಗಾರಪೇಟೆ ಸೇರಿದಂತೆ ಎಲ್ಲಾ ರೈಲು ನಿಲ್ದಾಣಗಳಲ್ಲೂ ಕಪ್ಪು ಬಾವುಟ ಪ್ರದರ್ಶಿಸಿ ದೊಡ್ಡ ಹೋರಾಟ ನಡೆಸುತ್ತೇವೆ. ಶಾಂತಿಯುತ ಧರಣಿಗೆ ಅವಕಾಶ ನೀಡದಿರುವುದು ಅಪರಾಧ ಮತ್ತು ದೌರ್ಜನ್ಯ’ ಎಂದು ಕಿಡಿಕಾರಿದರು.

ವಿವಿಧ ಸಂಘಟನೆ ಮುಖಂಡರಾದ ವೆಂಕಟಪ್ಪ, ಎಪಿಎಂಪಿ ಪುಟ್ಟರಾಜು, ರಾಜೇಶ್, ನಳಿನಿ, ರಾಮುಶಿವಣ್ಣ, ನಾರಾಯಣಸ್ವಾಮಿ ಪಾಲ್ಗೊಂಡಿದ್ದರು.

ಸೇವೆ ಸ್ಥಗಿತಕ್ಕೆ ಸಂಚು: ಧರಣಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ವಾಟಾಳ್ ನಾಗರಾಜ್, ‘ಕೋಲಾರಕ್ಕೆ ಬರುತ್ತಿರುವ ರೈಲಿನ ಸೇವೆ ಸ್ಥಗಿತಗೊಳಿಸುವ ಸಂಚು ನಡೆದಿದೆ. ರೈಲು ನಿಲ್ಲಿಸಿದರೆ ಮುಂದಿನ ಅನಾಹುತಕ್ಕೆ ಸರ್ಕಾರವೇ ಹೊಣೆ’ ಎಂದು ಎಚ್ಚರಿಕೆ ನೀಡಿದರು.

‘ಕೋಲಾರ ರೈಲು ನಿಲ್ದಾಣವನ್ನು ಸ್ಮಾರಕವಾಗಿ ಉಳಿಸಬೇಕು. ನಿಲ್ದಾಣದಲ್ಲಿ ಶೌಚಾಲಯ ಹಾಗೂ ಕುಡಿಯುವ ನೀರಿನ ಸೌಲಭ್ಯ ಕಲ್ಪಿಸಬೇಕು. ಮಹಾತ್ಮ ಗಾಂಧೀಜಿಯನ್ನು ಬೆಂಗಳೂರಿನಿಂದ ನಂದಿ ಗಿರಿಧಾಮಕ್ಕೆ ಕರೆದುಕೊಂಡು ಹೋಗಿದ್ದ ಚಿಕ್ಕ ರೈಲನ್ನು ಕೋಲಾರದಲ್ಲಿ ಸಾರ್ವಜನಿಕರ ಪ್ರದರ್ಶನಕ್ಕೆ ಇಡಬೇಕು. ರೈಲ್ವೆ ಇಲಾಖೆಯಲ್ಲಿನ ಉದ್ಯೋಗಗಳನ್ನು ಕನ್ನಡಿಗರಿಗೆ ನೀಡಬೇಕು. ರೈಲ್ವೆ ಕೆಳ ಸೇತುವೆಗಳಲ್ಲಿ ಮಳೆ ನೀರು ನಿಂತು ಆಗುತ್ತಿರುವ ಸಮಸ್ಯೆ ಪರಿಹರಿಸಬೇಕು’ ಎಂದು ಒತ್ತಾಯಿಸಿದರು.

‘ಕೇಂದ್ರ ಚುನಾವಣಾ ಆಯೋಗವು ಅನರ್ಹ ಶಾಸಕರ ಕ್ಷೇತ್ರಗಳಿಗೆ ಉಪ ಚುನಾವಣೆ ಘೋಷಿಸಿ ನಂತರ ಚುನಾವಣಾ ದಿನಾಂಕ ಮುಂದೂಡಿರುವುದು ಸರಿಯಲ್ಲ. ನಾಮಪತ್ರ ಸಲ್ಲಿಸಿರುವವರ ಗತಿ ಏನು?’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT