ಭಾನುವಾರ, ಜುಲೈ 25, 2021
22 °C
ಸೆಸ್‌ ಸಂಗ್ರಹಣೆಗೆ ಎಪಿಎಂಸಿ ವರ್ತಕರು– ದಲ್ಲಾಳಿಗಳ ವಿರೋಧ

ತರಕಾರಿ ಹರಾಜು ಸ್ಥಗಿತ: ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋಲಾರ: ಕೋವಿಡ್–19 ಹಿನ್ನೆಲೆಯಲ್ಲಿ 3 ತಿಂಗಳವರೆಗೆ ಬಳಕೆದಾರರ ಶುಲ್ಕ (ಸೆಸ್‌) ಸ್ಥಗಿತಗೊಳಿಸುವಂತೆ ಆಗ್ರಹಿಸಿ ಎಪಿಎಂಸಿ ವರ್ತಕರು ಹಾಗೂ ಜೈ ಕರ್ನಾಟಕ ದಲ್ಲಾಳಿಗಳ ಕ್ಷೇಮಾಭಿವೃದ್ಧಿ ಸಂಘದ ಸದಸ್ಯರು ಇಲ್ಲಿನ ಎಪಿಎಂಸಿಯಲ್ಲಿ ಶನಿವಾರ ತರಕಾರಿ ಹರಾಜು ಸ್ಥಗಿತಗೊಳಿಸಿ ದಿಢೀರ್ ಪ್ರತಿಭಟನೆ ಮಾಡಿದರು.

‘ಕೋವಿಡ್–19 ಕಾರಣಕ್ಕೆ ಲಾಕ್‌ಡೌನ್‌ ಜಾರಿಯಾದ ದಿನದಿಂದ ಕೇಂದ್ರ ಹಾಗೂ ರಾಜ್ಯ ಸರ್ಕಾರ, ಜಿಲ್ಲಾಡಳಿತ, ಪೊಲೀಸ್ ಇಲಾಖೆ ಆದೇಶದನ್ವಯ ರೈತರ ಹಿತದೃಷ್ಟಿಯಿಂದ ಸವಾಲಿನ ರೀತಿ ವಹಿವಾಟು ನಡೆಸಿಕೊಂಡು ಬಂದಿದ್ದೇವೆ. ಆದರೆ, ಸರ್ಕಾರ ಎಪಿಎಂಸಿಗಳಲ್ಲಿ ಸೆಸ್‌ ಸಂಗ್ರಹಿಸಲು ಮುಂದಾಗಿದೆ’ ಎಂದು ಪ್ರತಿಭಟನಾಕಾರರ ಅಸಮಾಧಾನ ವ್ಯಕ್ತಪಡಿಸಿದರು.

‘ಕೋವಿಡ್‌–19 ಆತಂಕದ ನಡುವೆಯೂ ಎಪಿಎಂಸಿಗಳಲ್ಲಿ ಟೊಮೆಟೊ, ಹಣ್ಣು ಮತ್ತು ತರಕಾರಿ ವಹಿವಾಟು ನಡೆಸುತ್ತಿದ್ದೇವೆ. ವಹಿವಾಟಿನ ನಂತರ ವ್ಯಾಪಾರಸ್ಥರಿಂದ ಹಣ ಸರಿಯಾಗಿ ವಸೂಲಿಯಾಗುತ್ತಿಲ್ಲ. ಆದರೂ ಸಾಲ ಮಾಡಿ ರೈತರಿಗೆ ಹಣ ಪಾವತಿಸಿ ಅವರ ಹಿತ ಕಾಪಾಡುತ್ತಿದ್ದೇವೆ’ ಎಂದು ಜೈ ಕರ್ನಾಟಕ ದಲ್ಲಾಳಿಗಳ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಆರ್.ಎ.ನಾರಾಯಣಸ್ವಾಮಿ ಹೇಳಿದರು.

‘ಹಣ್ಣು ಮತ್ತು ತರಕಾರಿಗಳ ಬೆಲೆ ಹೆಚ್ಚಿದ್ದರೂ ವ್ಯಾಪಾರಸ್ಥರಿಂದ ಸರಿಯಾಗಿ ಹಣ ವಸೂಲಿಯಾಗದೆ ಕಷ್ಟದ ಪರಿಸ್ಥಿತಿಯಲ್ಲೇ ವಹಿವಾಟು ನಡೆಸುವಂತಾಗಿದೆ. ಇದರ ನಡುವೆ ಪುನಃ ಬಳಕೆದಾರರ ಶುಲ್ಕ ಜಾರಿ ಮಾಡಿದರೆ ರೈತರಿಗೆ ಹೊರೆಯಾಗುವ ಜತೆಗೆ ಮಂಡಿ ಮಾಲೀಕರು ದಿವಾಳಿ ಹಂತಕ್ಕೆ ತಲುಪುತ್ತಾರೆ’ ಎಂದು ಆತಂಕ ವ್ಯಕ್ತಪಡಿಸಿದರು.

ಆರ್ಥಿಕ ಸಂಕಷ್ಟ: ‘ತರಕಾರಿ ವಹಿವಾಟಿನ ಸಂಬಂಧ ಬಳಕೆದಾರರ ಶುಲ್ಕ ಕಾಲ ಕಾಲಕ್ಕೆ ಎಪಿಎಂಸಿಗೆ ಪಾವತಿಸುತ್ತಿದ್ದೇವೆ. ವರ್ತಕರು ಹಾಗೂ ದಲ್ಲಾಳಿಗಳು ಆರ್ಥಿಕ ಸಂಕಷ್ಟದಲ್ಲಿರುವ ಕಾರಣ ಮುಂದಿನ 3 ತಿಂಗಳ ಕಾಲ ಶುಲ್ಕ ಸ್ಥಗಿತಗೊಳಿಸಬೇಕು’ ಎಂದು ಸಂಘಟನೆ ಸದಸ್ಯರು ಮನವಿ ಮಾಡಿದರು.

ಜೈ ಕರ್ನಾಟಕ ದಲ್ಲಾಳಿಗಳ ಕ್ಷೇಮಾಭಿವೃದ್ಧಿ ಸಂಘದ ಉಪಾಧ್ಯಕ್ಷ ಕೆ.ಆರ್.ಬೈಚೇಗೌಡ, ಕಾರ್ಯದರ್ಶಿ ಕೆ.ಎನ್‌.ಪ್ರಕಾಶ್‌, ಖಜಾಂಚಿ ಸೈಯದ್ ಸಾದಿಕ್‌ ಪಾಲ್ಗೊಂಡರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.