ಭಾನುವಾರ, ಆಗಸ್ಟ್ 7, 2022
21 °C
ಮಳೆಗೆ ನೆಲಕಚ್ಚಿದ ಬೆಳೆಗಳು: ಮಾರುಕಟ್ಟೆಯಲ್ಲಿ ತರಕಾರಿ–ಸೊಪ್ಪು ಆವಕ ಕಡಿಮೆ

ಕೋಲಾರ | ತರಕಾರಿ ದುಬಾರಿ: ಗ್ರಾಹಕರ ಜೇಬಿಗೆ ಕತ್ತರಿ

ಜೆ.ಆರ್‌.ಗಿರೀಶ್‌ Updated:

ಅಕ್ಷರ ಗಾತ್ರ : | |

Prajavani

ಕೋಲಾರ: ಕೋವಿಡ್‌ ಮತ್ತು ಲಾಕ್‌ಡೌನ್‌ ಸಂಕಷ್ಟದ ನಡುವೆ ತರಕಾರಿ ಹಾಗೂ ಸೊಪ್ಪುಗಳ ಬೆಲೆ ಗಗನಮುಖಿಯಾಗಿದ್ದು, ತರಾವರಿ ತರಕಾರಿ ಹಾಗೂ ಸೊಪ್ಪು ಹಾಕಿ ರುಚಿ ರುಚಿಯಾದ ಅಡುಗೆ ಮಾಡಬೇಕು ಎನ್ನುವವರು ಈಗ ದುಬಾರಿ ಬೆಲೆ ತೆರಬೇಕಾಗಿದೆ.

ರಾಜ್ಯ ಸೇರಿದಂತೆ ಎಲ್ಲೆಡೆ ಹೆಚ್ಚಿನ ಮಳೆ ಆಗುತ್ತಿರುವುದರಿಂದ ತೋಟಗಾರಿಕೆ ಬೆಳೆಗಳು ನೆಲಕಚ್ಚಿದ್ದು, ದಿನದಿಂದ ದಿನಕ್ಕೆ ತರಕಾರಿ ಮತ್ತು ಸೊಪ್ಪಿನ ಬೆಲೆ ಏರು ಗತಿಯಲ್ಲಿ ಸಾಗಿದೆ. ಕೋವಿಡ್‌ ಸಂಕಷ್ಟದ ಜತೆಗೆ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಗ್ರಾಹಕರ ಜೇಬಿಗೆ ಕತ್ತರಿ ಬಿದ್ದಿದೆ.

ಮಾರುಕಟ್ಟೆಯಲ್ಲಿ ಯಾವುದೇ ತರಕಾರಿಯ ಬೆಲೆ ಒಂದಂಕಿ ಬೆಲೆಗೆ ಇಳಿದಿಲ್ಲ. ದಿನಬಳಕೆಯ ಆಲೂಗಡ್ಡೆ, ಕ್ಯಾರೆಟ್, ತೊಂಡೆಕಾಯಿ, ಬೆಂಡೇ ಕಾಯಿ, ಬೀನ್ಸ್, ನುಗ್ಗೇಕಾಯಿ, ಹೂಕೋಸು, ಹಣ್ಣು ಬೀನ್ಸ್‌, ಬದನೆಕಾಯಿ, ಹಸಿ ಬಟಾಣಿ ಬೆಲೆ ಏರಿಕೆಯಾಗಿದೆ. ಮಾರುಕಟ್ಟೆಗಳಲ್ಲಿ ಬಹುತೇಕ ತರಕಾರಿಗಳ ದರ ದುಬಾರಿಯಾಗಿದೆ. ಗಗನಕ್ಕೇರಿದ ತರಕಾರಿ ಬೆಲೆ ನೋಡಿ ಗ್ರಾಹಕರು ದಂಗಾಗಿದ್ದಾರೆ.

ಕೆಲ ವಾರಗಳ ಹಿಂದೆ ತರಕಾರಿ ಮತ್ತು ಸೊಪ್ಪಿನ ಬೆಲೆ ಸ್ವಲ್ಪ ಮಟ್ಟಿಗೆ ಇಳಿಕೆ ಕಂಡಿದ್ದರಿಂದ ಗ್ರಾಹಕರು ನಿಟ್ಟುಸಿರು ಬಿಟ್ಟಿದ್ದರು. ಆದರೆ, ರೈತರು ಬೆಲೆ ಕುಸಿತದಿಂದ ನಷ್ಟ ಅನುಭವಿಸಿದ್ದರು. ಇದೀಗ ಮಧ್ಯವರ್ತಿ ವ್ಯಾಪಾರಿಗಳ ಮೊಗದಲ್ಲಿ ಸಂತಸ ಮೂಡಿದ್ದು, ಗ್ರಾಹಕರಿಗೆ ಬೆಲೆ ಏರಿಕೆ ಬಿಸಿ ತಟ್ಟಲಾರಂಭಿಸಿದೆ.

ಮೂರ್ನಾಲ್ಕು ವಾರದಿಂದ ಲಾಕ್‌ಡೌನ್‌ ಕಾರಣಕ್ಕೆ ತರಕಾರಿಗಳ ಬೆಲೆ ತೀವ್ರ ಕುಸಿತ ಕಂಡಿತ್ತು. ಹೀಗಾಗಿ ಸಾಕಷ್ಟು ರೈತರು ತರಕಾರಿ ಕೊಯ್ಲು ಮಾಡುವುದನ್ನೇ ನಿಲ್ಲಿಸಿದ್ದರು. ಮತ್ತೆ ಕೆಲ ರೈತರು ಬೆಳೆಗಳನ್ನು ನಾಶಪಡಿಸಿದ್ದರು. ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಭವಿಷ್ಯದ ಬಗ್ಗೆ ಅಸ್ಪಷ್ಟತೆಯಿದ್ದ ಕಾರಣ ಬಹುಪಾಲು ರೈತರು ಹೆಚ್ಚಾಗಿ ತರಕಾರಿ ಬೆಳೆಯುವ ಗೂಜಿಗೆ ಹೋಗಿಲ್ಲ. ಇದರಿಂದ ತರಕಾರಿ ಪೂರೈಕೆಯಲ್ಲಿ ಕೊರತೆಯುಂಟಾಗಿ ಬೆಲೆ ಹೆಚ್ಚಳವಾಗಿದೆ.

ಬೇಡಿಕೆ ಹೆಚ್ಚಳ: ಮಹಾರಾಷ್ಟ್ರ, ಆಂಧ್ರಪ್ರದೇಶ, ತಮಿಳುನಾಡು ಸೇರಿದಂತೆ ಹೊರ ರಾಜ್ಯಗಳಲ್ಲಿ ವಿಪರೀತ ಮಳೆಯಿಂದಾಗಿ ತರಕಾರಿ ಬೆಳೆಗಳು ಹಾನಿಗೀಡಾಗಿವೆ. ಮಳೆ ಮತ್ತು ಮೋಡ ಮುಸುಕಿದ ವಾತಾವರಣದ ಕಾರಣಕ್ಕೆ ರೋಗಬಾಧೆ ಕಾಣಿಸಿಕೊಂಡಿದ್ದು, ತರಕಾರಿ ಬೆಳೆಗಳು ಹೆಚ್ಚಿನ ಪ್ರಮಾಣದಲ್ಲಿ ನಾಶವಾಗಿವೆ. ಹೊರ ರಾಜ್ಯಗಳಲ್ಲಿ ತರಕಾರಿಗಳಿಗೆ ಬೇಡಿಕೆ ದಿಢೀರ್‌ ಹೆಚ್ಚಳವಾಗಿದೆ. ಬೇಡಿಕೆಗೆ ತಕ್ಕಂತೆ ಬೆಲೆಯಲ್ಲೂ ಏರಿಕೆಯಾಗಿದೆ.

ತರಕಾರಿ ಬೆಲೆ ಏರಿಕೆಯಿಂದ ಹೋಟೆಲ್‌ ಮಾಲೀಕರ ಮೇಲೆ ಹೆಚ್ಚಿನ ಆರ್ಥಿಕ ಹೊರೆ ಬಿದ್ದಿದೆ. ಈ ಕಾರಣಕ್ಕೆ ತಿಂಡಿ ತಿನಿಸುಗಳ ಬೆಲೆ ಏರಿಕೆ ಮಾಡಿದರೆ ವಹಿವಾಟು ಕುಸಿಯುವ ಸಾಧ್ಯತೆ ಇರುವುದರಿಂದ ಮಾಲೀಕರು ಬೆಲೆ ಪರಿಷ್ಕರಣೆ ಮಾಡಿಲ್ಲ. ಬೆಲೆ ಇಳಿಯಬಹುದೆಂಬ ನಿರೀಕ್ಷೆಯಲ್ಲೇ ವಹಿವಾಟು ಮುಂದುವರಿಸಿದ್ದಾರೆ.

ಕೊಳೆತ ಸೊಪ್ಪು: ಜಮೀನುಗಳಲ್ಲಿ ಮಳೆ ನೀರು ನಿಂತು ಸೊಪ್ಪಿನ ಗಿಡಗಳು ಕೊಳೆಯಲಾರಂಭಿಸಿವೆ. ಇದರಿಂದ ಮಾರುಕಟ್ಟೆಯಲ್ಲಿ ಸೊಪ್ಪುಗಳು ಸಿಗುವುದೇ ಕಷ್ಟವಾಗಿದೆ. ಕೊತ್ತಂಬರಿ ಸೊಪ್ಪು ಒಂದು ಕಟ್ಟಿಗೆ ₹ 40, ದಂಟು ಮತ್ತು ಸಬ್ಬಕ್ಕಿ ಸೊಪ್ಪು ₹ 25, ಮೆಂತೆ ಸೊಪ್ಪು ₹ 30 ಇದೆ.

ಬೆಲೆ ಏರಿಕೆ ಕಾರಣಕ್ಕೆ ಜಿಲ್ಲೆಯ ಕೆಲ ಹಾಪ್‌ಕಾಮ್ಸ್‌ ಮಳಿಗೆಗಳಲ್ಲಿ ತರಕಾರಿ ಮಾರಾಟ ಸ್ಥಗಿತಗೊಳಿಸಲಾಗಿದೆ. ಬೆಲೆ ಏರಿಕೆಯಿಂದ ತತ್ತರಿಸಿರುವ ಗ್ರಾಹಕರು ತರಕಾರಿ ಖರೀದಿ ಪ್ರಮಾಣ ಕಡಿಮೆ ಮಾಡಿದ್ದಾರೆ. ಶಾಖಾಹಾರಿಗಳು ಮೀನು, ಕೋಳಿ ಮತ್ತು ಕುರಿ ಮಾಂಸದತ್ತ ಮುಖ ಮಾಡಿದ್ದಾರೆ. ಮಾರುಕಟ್ಟೆಗಳಲ್ಲಿ ದಿನದಿಂದ ದಿನಕ್ಕೆ ತರಕಾರಿಗಳ ಆವಕ ಕಡಿಮೆಯಾಗುತ್ತಿದ್ದು, ಸದ್ಯಕ್ಕೆ ಬೆಲೆ ಇಳಿಯುವ ಲಕ್ಷಣ ಗೋಚರಿಸುತ್ತಿಲ್ಲ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು