ಮುಳಬಾಗಿಲು: ತಾಲ್ಲೂಕಿನ ಯಲುವಹಳ್ಳಿ ಹಾಗೂ ಅಂಬ್ಲಿಕಲ್ ಮಧ್ಯೆ ರಸ್ತೆಯಲ್ಲಿ ಸೋಮವಾರ ಸಂಜೆ ಅಪರಿಚಿತ ವಾಹನವೊಂದು ಡಿಕ್ಕಿ ಹೊಡೆದು ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ. ಈ ಸಂಬಂಧ ನಂಗಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಕೃತ್ಯವೆಸಗಿದವರ ಪತ್ತೆಗಾಗಿ ಪೊಲೀಸರು ಶೋಧ ಕಾರ್ಯಾಚರಣೆ ನಡೆಸಿದ್ದಾರೆ.
ಮುಳಬಾಗಿಲು ತಾಲ್ಲೂಕಿನ ಕಲ್ಕೆರೆ ಗ್ರಾಮದ ಗಂಗರಾಜು (27) ಮೃತ ವ್ಯಕ್ತಿ.
ಗಂಗರಾಜು ಅವರು ಕೆಲಸದ ನಿಮಿತ್ತ ಎನ್.ವಡ್ಡಹಳ್ಳಿ ಗ್ರಾಮಕ್ಕೆ ತೆರಳಿ ವಾಪಸ್ ಸ್ವಗ್ರಾಮಕ್ಕೆ ಮರಳುವ ವೇಳೆ ಈ ದುರ್ಘಟನೆ ನಡೆದಿದೆ. ಅಪಘಾತದಲ್ಲಿ ಸಿಲುಕಿದ ಗಂಗರಾಜು ಅವರನ್ನು ಸ್ಥಳೀಯರು ಮುಳಬಾಗಿಲು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ, ಹೆಚ್ಚಿನ ಚಿಕಿತ್ಸೆಗೆ ಕೋಲಾರಕ್ಕೆ ಕರೆದೊಯ್ಯುವಾಗ ಮಾರ್ಗಮಧ್ಯೆ ಮೃತಪಟ್ಟಿದ್ದಾರೆ.
ಘಟನೆ ಕುರಿತು ಮಾಹಿತಿ ಪಡೆದು ಸ್ಥಳಕ್ಕೆ ಭೇಟಿ ನೀಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ. ನಿಖಿಲ್, ಡಿವೈಎಸ್‌ಪಿ ಡಿ.ಸಿ. ನಂದಕುಮಾರ್, ಸರ್ಕಲ್ ಇನ್‌ಸ್ಪೆಕ್ಟರ್ ಸತೀಶ್, ನಂಗಲಿ ಸಬ್ ಇನ್‌ಸ್ಪೆಕ್ಟರ್ ಅರ್ಜುನ್ ಎಸ್. ಆರ್. ಗೌಡ ಪರಿಶೀಲನೆ ನಡೆಸಿದರು.