ಬುಧವಾರ, ಡಿಸೆಂಬರ್ 1, 2021
20 °C
ಹೊಟ್ಟೆಯಲ್ಲಿದ್ದ ಸತ್ತ ಕರು ಶಸ್ತ್ರಚಿಕಿತ್ಸೆಯಿಂದ ಹೊರಕ್ಕೆ

ಹಸುವಿನ ಜೀವ ಉಳಿಸಿದ ಪಶು ವೈದ್ಯರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಶ್ರೀನಿವಾಸಪುರ: ತಾಲ್ಲೂಕಿನ ಕದಿರಂಪಲ್ಲಿ ಗ್ರಾಮದಲ್ಲಿ ಸುಮಾರು ₹ 1 ಲಕ್ಷ ಬೆಲೆ ಬಾಳುವ ಸೀಮೆ ಹಸುವಿಗೆ ಪಶು ವೈದ್ಯರು ಶಸ್ತ್ರಚಿಕಿತ್ಸೆ ನಡೆಸಿ ಹೊಟ್ಟೆಯಲ್ಲಿ ಅಸಹಜವಾಗಿ ಬೆಳೆದು ಸತ್ತಿದ್ದ ಕರುವನ್ನು ಹೊರತೆಗೆದು ಹಸುವಿನ ಜೀವ ಉಳಿಸಿದ್ದಾರೆ.

ಕದಿರಿಂಪಲ್ಲಿ ಗ್ರಾಮದ ಶ್ರೀಕಂಠರೆಡ್ಡಿ ಎಂಬುವರಿಗೆ ಸೇರಿದ ಸೀಮೆ ಹಸುವಿನ ಆರೋಗ್ಯದಲ್ಲಿ ಏರುಪೇರಾಯಿತು. ಅದನ್ನು ಗಮನಿಸಿದ ಶ್ರೀಕಂಠರೆಡ್ಡಿ, ರಾಯಲ್ಪಾಡ್ ಪಶುವೈದ್ಯ ಶಾಲೆಯ ವೈದ್ಯರಿಗೆ ವಿಷಯ ತಿಳಿಸಿದರು. ಗರ್ಭ ಪರೀಕ್ಷೆ ಬಳಿಕ ಹಸುವಿನ ಹೊಟ್ಟೆಯಲ್ಲಿ ಕರು ಅಸಹಜವಾಗಿ ಬೆಳೆದಿರುವುದು ತಿಳಿಯಿತು.

ಹಸುವಿನ ಆರೋಗ್ಯ ಕ್ಷಣ ಕ್ಷಣಕ್ಕೂ ಹದಗೆಡುತ್ತಿತ್ತು. ಈ ಬಗ್ಗೆ ತಾಲ್ಲೂಕು ಪಶುಪಾಲನಾ ಇಲಾಖೆಯ ಸಹಾಯಕ ನಿರ್ದೇಶಕ ಮಂಜುನಾಥರೆಡ್ಡಿ ಅವರಿಗೆ ತಿಳಿಸಲಾಯಿತು. ಅವರು ಪ್ರಸೂತಿ ತಜ್ಞ ಡಾ.ಪುನೀತ್ ಮತ್ತು ಪಶು ವೈದ್ಯರ ತಂಡದೊಂದಿಗೆ ಸ್ಥಳಕ್ಕೆ ಆಗಮಿಸಿ ಶಸ್ತ್ರಚಿಕಿತ್ಸೆಗೆ ವ್ಯವಸ್ಥೆ ಮಾಡಿದರು.

ಪಶು ವೈದ್ಯಾಧಿಕಾರಿಗಳಾದ ಡಾ.ಆರ್. ನಾಗಭೂಷಣರೆಡ್ಡಿ, ಡಾ.ವೆಂಕಟಶಿವಾರೆಡ್ಡಿ, ಡಾ.ವಿನಯ್ ಪ್ರಸೂತಿ ತಜ್ಞರಿಗೆ ನೆರವಾದರು. ಶಸ್ತ್ರಚಿಕಿತ್ಸೆ ಮಾಡಿ ಅಸಹಜವಾಗಿ ಮುದ್ದೆಯಂತೆ ಬೆಳೆದು ಅಸುನೀಗಿದ್ದ ಕರುವನ್ನು ಹೊರಗೆ ತೆಗೆಯಲಾಯಿತು. ಹಸುವಿನ ಜೀವ
ಉಳಿಸಲಾಯಿತು.

ತಾಲ್ಲೂಕು ಪಶುಪಾಲನಾ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಮಂಜುನಾಥರೆಡ್ಡಿ ಮಾತನಾಡಿ, ‘ಪಶು ಪಾಲಕರು ತಮ್ಮ ರಾಸುಗಳ ಆರೋಗ್ಯಕ್ಕೆ ಆದ್ಯತೆ ನೀಡಬೇಕು. ಸಮಸ್ಯೆ ಎದುರಾದಾಗ ಮೂಢನಂಬಿಕೆ ಬಿಟ್ಟು ತಜ್ಞ ಪಶು ವೈದ್ಯರ ಸಲಹೆ ಪಡೆದು ರಾಸುಗಳಿಗೆ ಚಿಕಿತ್ಸೆ ಕೊಡಿಸಬೇಕು. ತಡಮಾಡಿದರೆ ಹಸುವನ್ನು ಕಳೆದುಕೊಳ್ಳುವ ಅಪಾಯ ಇರುತ್ತದೆ’ ಎಂದು ಹೇಳಿದರು.

ಗಬ್ಬದ ಹಸುಗಳ ಆರೋಗ್ಯವನ್ನು ಆಗಾಗ ಪರೀಕ್ಷೆ ಮಾಡಿಸಬೇಕು. ಸಮಸ್ಯೆ ಕಂಡುಬಂದಲ್ಲಿ ಪಶು ವೈದ್ಯರು ನಿವಾರಣೆಗೆ ಕ್ರಮಕೈಗೊಳ್ಳುತ್ತಾರೆ. ಹಸುಗಳಲ್ಲಿ ಕೆಲವೊಮ್ಮೆ ಶಿಸ್ಟಾಸೊಮ ರಿಫ್ಲೆಕ್ಸ್ ಸಮಸ್ಯೆ ಕಂಡುಬರುತ್ತದೆ. ನಿರ್ಲಕ್ಷ್ಯ ಮಾಡದೆ ವೈದ್ಯರ ಸಲಹೆ ಪಡೆದು, ಚಿಕಿತ್ಸೆ ಕೊಡಿಸಬೇಕು ಎಂದು ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು