ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅವಿಶ್ವಾಸ ನಿರ್ಣಯಕ್ಕೆ ಜಯ: ಉಪಾಧ್ಯಕ್ಷರ ಪದಚ್ಯುತಿ

ನಗರಸಭೆ ಇತಿಹಾಸದಲ್ಲೇ ಮೊದಲು: ರಾಜಕೀಯ ಮುಸುಕಿನ ಗುದ್ದಾಟಕ್ಕೆ ತೆರೆ
Last Updated 7 ಏಪ್ರಿಲ್ 2022, 14:42 IST
ಅಕ್ಷರ ಗಾತ್ರ

ಕೋಲಾರ: ಕೋಲಾರ ನಗರಸಭೆ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಉಪಾಧ್ಯಕ್ಷರ ವಿರುದ್ಧ ಗುರುವಾರ ಅವಿಶ್ವಾಸ ನಿರ್ಣಯ ಮಂಡಿಸಿ, ಉಪಾಧ್ಯಕ್ಷ ಎನ್‌.ಎಸ್‌.ಪ್ರವೀಣ್‌ಗೌಡ ಅವರನ್ನು ಪದಚ್ಯುತಿಗೊಳಿಸಲಾಯಿತು.

ಶಾಸಕ ಕೆ.ಶ್ರೀನಿವಾಸಗೌಡರು ಹಾಗೂ ಸಭೆಯಲ್ಲಿ ಹಾಜರಿದ್ದ 31 ಮಂದಿ ನಗರಸಭಾ ಸದಸ್ಯರ ಪೈಕಿ 23 ಮಂದಿ ಉಪಾಧ್ಯಕ್ಷರ ವಿರುದ್ಧದ ಅವಿಶ್ವಾಸ ನಿರ್ಣಯಕ್ಕೆ ಬೆಂಬಲ ಸೂಚಿಸಿದರು. ಇದರೊಂದಿಗೆ ಉಪಾಧ್ಯಕ್ಷರ ಪದಚ್ಯುತಿ ವಿಚಾರವಾಗಿ ಆರೇಳು ತಿಂಗಳಿಂದ ನಡೆಯುತ್ತಿದ್ದ ರಾಜಕೀಯ ಮುಸುಕಿನ ಗುದ್ದಾಟಕ್ಕೆ ತೆರೆ ಬಿದ್ದಿತು.

ಪ್ರವೀಣ್‌ಗೌಡರ ವಿರೋಧಿ ಗುಂಪು ಅವಿಶ್ವಾಸ ನಿರ್ಣಯದ ಪತ್ರಕ್ಕೆ ಸಹಿ ಹಾಕಿ ಮಾರ್ಚ್ 18ರಂದು ನಗರಸಭೆ ಅಧ್ಯಕ್ಷರು ಹಾಗೂ ಆಯುಕ್ತರಿಗೆ ಸಲ್ಲಿಸಿತ್ತು. ಅವಿಶ್ವಾಸ ನಿರ್ಣಯದ ಪತ್ರಕ್ಕೆ ಕಾಂಗ್ರೆಸ್‌, ಬಿಜೆಪಿ ಸದಸ್ಯರ ಜತೆಗೆ ಸ್ವಪಕ್ಷೀಯರಾದ ಜೆಡಿಎಸ್‌ ಸದಸ್ಯರು ಸಹ ಹಾಕಿದ್ದರು. ನಗರಸಭೆಯ 35 ಸದಸ್ಯರ ಪೈಕಿ 22 ಮಂದಿ ಪತ್ರಕ್ಕೆ ಸಹಿ ಮಾಡಿದ್ದರು.

ಹೀಗಾಗಿ ನಗರಸಭೆ ಅಧ್ಯಕ್ಷೆ ಆರ್‌.ಶ್ವೇತಾ ಅವರು ಅವಿಶ್ವಾಸ ನಿರ್ಣಯ ಮಂಡನೆಗೆ ಗುರುವಾರ ವಿಶೇಷ ಸಾಮಾನ್ಯ ಸಭೆ ಕರೆದಿದ್ದರು. ಸಭೆ ಹಿನ್ನೆಲೆಯಲ್ಲಿ ಕಾಂಗ್ರೆಸ್‌, ಬಿಜೆಪಿ, ಜೆಡಿಎಸ್‌ ಪಕ್ಷವು ಸದಸ್ಯರಿಗೆ ವಿಪ್‌ ಜಾರಿ ಮಾಡಿದ್ದವು. ಸಭೆಯಲ್ಲಿ ಮಂಡನೆಯಾದ ಅವಿಶ್ವಾಸದ ನಿರ್ಣಯದ ಪರವಾಗಿ ಶಾಸಕರು ಹಾಗೂ ಸದಸ್ಯರು ಕೈ ಎತ್ತುವ ಮೂಲಕ ಬೆಂಬಲ ಸೂಚಿಸಿದರು.

ವಿಶ್ವಾಸ ಇಲ್ಲದಕ್ಕೆ ಅವಿಶ್ವಾಸ: ಉಪಾಧ್ಯಕ್ಷರ ಪದಚ್ಯುತಿ ಬಳಿಕ ಮಾತನಾಡಿದ ನಗರಸಭೆ ಸದಸ್ಯ ಬಿ.ಎಂ.ಮುಬಾರಕ್‌, ‘ನಗರಸಭೆ ಅಧ್ಯಕ್ಷರು ಮತ್ತು ಉಪಾಧ್ಯಕ್ಷರನ್ನು ಮಾಡುವುದು ಸುಲಭ. ಆದರೆ, ಅವರನ್ನು ಆ ಸ್ಥಾನದಿಂದ ಕೆಳಗಿಳಿಸುವುದು ಕಷ್ಟ. ಕೋಲಾರ ನಗರಸಭೆಯಲ್ಲಿ ಪ್ರಪ್ರಥಮ ಬಾರಿಗೆ ಉಪಾಧ್ಯಕ್ಷರ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಿ ಯಶಸ್ವಿಯಾಗಿದ್ದೇವೆ. ಉಪಾಧ್ಯಕ್ಷರ ಮೇಲೆ ವಿಶ್ವಾಸ ಇಲ್ಲದ ಕಾರಣಕ್ಕೆ ಅವಿಶ್ವಾಸ ನಿರ್ಣಯ ಮಂಡಿಸಲಾಯಿತು’ ಎಂದು ತಿಳಿಸಿದರು.

‘ವೈಯಕ್ತಿಕವಾಗಿ ಪ್ರವೀಣ್‌ಗೌಡರ ಜತೆ ನನಗೆ ಯಾವುದೇ ದ್ವೇಷವಿಲ್ಲ. ಆದರೆ, ಅವರು ನನ್ನ ವಿರುದ್ಧ ಸುಳ್ಳು ಆರೋಪ ಮಾಡುತ್ತಿದ್ದಾರೆ. ಆರೋಪಿಸುವುದು ಸುಲಭ. ಆದರೆ, ಅದನ್ನು ಸಾಬೀತುಪಡಿಸುವುದು ಕಷ್ಟ. ನಗರಸಭೆ ಅನುದಾನವನ್ನು ಕಾಲ ಮಿತಿಯೊಳಗೆ ಬಳಸಬೇಕು. ವಿಳಂಬ ಮಾಡಿ ಅನುದಾನ ಬಳಕೆಯಾಗದೆ ಸರ್ಕಾರಕ್ಕೆ ವಾಪಸ್‌ ಹೋದರೆ ಜನರು ಪ್ರಶ್ನಿಸುತ್ತಾರೆ. ಕೊಟ್ಟಿರುವ ಅಧಿಕಾರ ದುರ್ಬಳಕೆ ಮಾಡಿದರೆ ಜನರಿಗೆ ತೊಂದರೆ ಆಗುತ್ತೆ. ಈ ಕಾರಣಕ್ಕೆ ಉಪಾಧ್ಯಕ್ಷರ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಿದೆವು’ ಎಂದರು.

ಹೋರಾಟ ಮುಂದುವರಿಸುತ್ತೇನೆ: ‘ಅಕ್ರಮಗಳ ವಿರುದ್ಧ ಹೋರಾಟ ಮಾಡಿದ ಕಾರಣಕ್ಕೆ ನಾನು ಉಪಾಧ್ಯಕ್ಷಗಾದಿಯಿಂದ ಕೆಳಗಿಳಿಯುವಂತೆ ಆಗಿದೆ. ನನ್ನ ವಿರುದ್ಧ ಸ್ವಪಕ್ಷಿಯರೇ ಅಡ್ಡ ಮತದಾನ ಮಾಡಿದ್ದಾರೆ. ಒಂದೂವರೆ ವರ್ಷದ ಅಧಿಕಾರಾವಧಿಯಲ್ಲಿ ಜನರ ಹಿತಾಸಕ್ತಿಗಾಗಿ ಕೆಲಸ ಮಾಡಿದ್ದೇನೆ. ನಗರಸಭೆಯಲ್ಲಿ ನಡೆದಿರುವ ಅಕ್ರಮಗಳನ್ನು ಬಯಲಿಗೆಳೆದಿದ್ದೇನೆ. 4 ದಶಕದಿಂದ ಹರಾಜು ಆಗದೆ ಇದ್ದ ಮಳಿಗೆಗಳ ಹಂಚಿಕೆಗೆ ಹೋರಾಟ ಮಾಡಿದ್ದೇನೆ’ ಎಂದು ಪ್ರವೀಣ್‌ಗೌಡ ಹೇಳಿದರು.

‌‘ನಗರಸಭೆಗೆ ನಷ್ಟ ಉಂಟಾಗುತ್ತಿದ್ದರೂ ಯಾರೂ ಪ್ರಶ್ನೆ ಮಾಡುತ್ತಿರಲಿಲ್ಲ. ನಾನು ಈ ಅನ್ಯಾಯದ ವಿರುದ್ಧ ಧ್ವನಿ ಎತ್ತಿದೆ. ಇದನ್ನು ಸಹಿಸದ ಕೆಲವರು ನಗರಸಭಾ ಸದಸ್ಯರ ಮೇಲೆ ಒತ್ತಡ ತಂದು ಆಮಿಷವೊಡ್ಡಿ ನನ್ನ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆ ಆಗುವಂತೆ ಮಾಡಿದ್ದಾರೆ. ಸ್ವಪಕ್ಷೀಯ 4 ಸದಸ್ಯರು ಸಹ ನನ್ನ ವಿರುದ್ಧ ಕೆಲಸ ಮಾಡಿದ್ದಾರೆ. ಅಧಿಕಾರ ಶಾಶ್ವತವಲ್ಲ. ಸದಸ್ಯನಾಗಿ ಇದ್ದುಕೊಂಡೆ ಅಕ್ರಮಗಳ ವಿರುದ್ಧ ಹೋರಾಟ ಮುಂದುವರಿಸುತ್ತೇನೆ’ ಎಂದು ಗುಡುಗಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT