ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿದ್ಯಾಗಮ: ವಿದ್ಯಾರ್ಥಿ ಕೇಂದ್ರೀಕೃತವಾಗಿಸಿ

ಯೋಜನೆ ರಾಜ್ಯ ನೋಡಲ್ ಅಧಿಕಾರಿ ಗೋಪಾಲಕೃಷ್ಣ ಸೂಚನೆ
Last Updated 29 ಆಗಸ್ಟ್ 2020, 12:26 IST
ಅಕ್ಷರ ಗಾತ್ರ

ಕೋಲಾರ: ‘ವಿದ್ಯಾಗಮ ವಿನೂತನ ಯೋಜನೆಯಾಗಿದ್ದು, ಇದನ್ನು ವಿದ್ಯಾರ್ಥಿ ಕೇಂದ್ರೀಕೃತವಾಗಿಸಿ ಪೋಷಕರು, ಎಸ್‌ಡಿಎಂಸಿ ಸದಸ್ಯರು ಹಾಗೂ ಸ್ವಯಂ ಸೇವಕರ ಸಹಭಾಗಿತ್ವದಲ್ಲಿ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಿ’ ಎಂದು ವಿದ್ಯಾಗಮ ಯೋಜನೆ ರಾಜ್ಯ ನೋಡಲ್ ಅಧಿಕಾರಿ ಗೋಪಾಲಕೃಷ್ಣ ಸೂಚಿಸಿದರು.

ಇಲ್ಲಿ ಶನಿವಾರ ನಡೆದ ವಿದ್ಯಾಗಮ ಯೋಜನೆ ಪ್ರಗತಿ ಪರಿಶೀಲನೆ ಸಭೆಯಲ್ಲಿ ಮಾತನಾಡಿ, ‘ತಾಲ್ಲೂಕುವಾರು ಮ್ಯಾಪಿಂಗ್ ಆಗದಿರುವ ಮಕ್ಕಳನ್ನು ಗುರುತಿಸಿ ವಿದ್ಯಾಗಮ ಯೋಜನೆಯಡಿ ತರಲು ಮೊಬೈಲ್ ಸ್ಕೂಲ್ ಮಾಡಲು ಅವಕಾಶವಿದೆ. ಇದಕ್ಕೆ ಸಂಚಾರ ದಳ ನೇಮಿಸಬೇಕು’ ಎಂದು ತಿಳಿಸಿದರು.

‘ಶಿಕ್ಷಕರು ಮಕ್ಕಳನ್ನು ಶಾಲೆಗೆ ಕರೆಸದೆ ಅವರು ಇರುವ ಸ್ಥಳಗಳಿಗೆ ಹೋಗಿ ಕಲಿಕೆಗೆ ನೆರವಾಗಬೇಕು. ಜಿಲ್ಲೆಯಲ್ಲಿ ಯಾವುದೇ ಸೌಲಭ್ಯವಿಲ್ಲದ ವಿದ್ಯಾರ್ಥಿಗಳ ಸಂಖ್ಯೆ ಶೇ 20ರಷ್ಟಿದೆ. ಪ್ರತಿ 15 ದಿನಕ್ಕೊಮ್ಮೆ ಈ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿ ವರದಿ ಸಲ್ಲಿಸಬೇಕು’ ಎಂದು ಸೂಚನೆ ನೀಡಿದರು.

‘ವಿದ್ಯಾಗಮ ಯೋಜನೆ ಅನುಷ್ಠಾನಕ್ಕೆ ಶಿಕ್ಷಕರಿಗೆ ತರಬೇತಿ ನೀಡಬೇಕು. ಸಾಮಾನ್ಯ ವಿದ್ಯಾರ್ಥಿಗಳೊಂದಿಗೆ ಜಿಲ್ಲೆಯ 1,660 ಅಂಗವಿಕಲ ವಿದ್ಯಾರ್ಥಿಗಳನ್ನು ಗಣನೆಗೆ ತೆಗೆದುಕೊಳ್ಳಬೇಕು. ತಾಲ್ಲೂಕುವಾರು ಹಾಗೂ ಕ್ಲಸ್ಟರ್‌ವಾರು ಮ್ಯಾಪಿಂಗ್ ಮಾಡಿ ಯಾವುದೇ ವಿದ್ಯಾರ್ಥಿ ವಿದ್ಯಾಗಮ ಯೋಜನೆಯಿಂದ ಹೊರಗುಳಿಯದಂತೆ ಯೋಜನೆ ರೂಪಿಸಿ ಜಾರಿಗೊಳಿಸಿ’ ಎಂದು ಆದೇಶಿಸಿದರು.

ದಾಖಲಾತಿ ಆಂದೋಲನ: ‘ಮಕ್ಕಳ ದಾಖಲಾತಿಗೆ ಆದ್ಯತೆ ನೀಡಿ. ಸಿಆರ್‌ಪಿ ಮತ್ತು ಬಿಆರ್‌ಪಿಗಳು ದಾಖಲಾತಿ ಆಂದೋಲನ ನಡೆಸಬೇಕು. ವಲಸೆ ಮಕ್ಕಳು ಸಹ ವಿದ್ಯಾಗಮ ಯೋಜನೆಯಿಂದ ಹೊರಗುಳಿಯಬಾರದು. ಪಠ್ಯಪುಸ್ತಕ ವಿತರಣೆಯಲ್ಲಿ ವ್ಯತ್ಯಯವಾಗಬಾರದು. ಪ್ರತಿ ವಿದ್ಯಾರ್ಥಿ ಮನೆಗೆ ಪುಸ್ತಕ ಮತ್ತು ಅಭ್ಯಾಸ ಪುಸ್ತಕ ತಲುಪಿಸಬೇಕು. ಜತೆಗೆ ಪುಸ್ತಕ ಬಳಸುತ್ತಿರುವ ಕುರಿತು ಪರಿಶೀಲನೆ ನಡೆಸಬೇಕು’ ಎಂದು ಹೇಳಿದರು.

‘ಮಧ್ಯಾಹ್ನ ಉಪಾಹಾರ ಯೋಜನೆಯಡಿ ಪೋಷಕರಿಗೆ ಆಹಾರ ಧಾನ್ಯ ಸೂಕ್ತ ರೀತಿಯಲ್ಲಿ ವಿತರಿಸಿ. ವಿದ್ಯಾಗಮ ಯೋಜನೆಗಾಗಿ 2ನೇ ಹಂತದ ಶಾಲಾನುದಾನ ಶೀಘ್ರವೇ ಬಿಡುಗಡೆಯಾಗಲಿದ್ದು, ಈ ಅನುದಾನ ಬಳಸಿಕೊಂಡು ಕಲಿಕೋಪಕರಣ ಸಿದ್ಧಪಡಿಸಿ’ ಎಂದು ಸಲಹೆ ನೀಡಿದರು.

‘ಎಲ್ಲಾ ಪಠ್ಯ ಪುಸ್ತಕಗಳನ್ನು ಸಂಕ್ಷಿಪ್ತವಾಗಿ ಬೋಧಿಸಬೇಕು. ಗಣಿತ ವಿಷಯಕ್ಕೆ ಸಂಬಂಧಿಸಿದ ವರ್ಕ್‌ಶೀಟ್ ಸಿದ್ಧಪಡಿಸಲಾಗಿದ್ದು, ಇದನ್ನು ಎಲ್ಲಾ ವಿಷಯವಾರು ವಿಸ್ತರಿಸಿ ವಿದ್ಯಾರ್ಥಿಗಾಳಿಗೆ ನೀಡಿ ಪರಿಶೀಲನೆ ಮಾಡಿ. ಪ್ರತಿ ಶಿಕ್ಷಕರು ಎಷ್ಟು ವಿದ್ಯಾರ್ಥಿಗಳನ್ನು ತಲುಪಲು ಸಾಧ್ಯವಾಗಿದೆ ಎಂಬ ಮಾಹಿತಿ ಸಂಗ್ರಹಿಸಿ. ಪ್ರತಿ ಶಿಕ್ಷಕರಿಗೆ ಚೆಕ್‌ಲಿಸ್ಟ್‌ ಸಿದ್ಧಪಡಿಸಿ ಕೊಟ್ಟು ಅದರಂತೆ ಕಾರ್ಯ ನಿರ್ವಹಿಸಲು ಮಾರ್ಗದರ್ಶನ ನೀಡಿ’ ಎಂದರು.

ಚಂದನದಲ್ಲಿ ತರಗತಿ: ‘ಚಂದನ ವಾಹಿನಿಯ ಸಂವೇದ ಕಾರ್ಯಕ್ರಮದಲ್ಲಿ 6 ಮತ್ತು 7ನೇ ತರಗತಿಯ ಬೋಧನಾ ಕಾರ್ಯ ಆರಂಭಿಸಲಾಗುವುದು. 6ನೇ ತರಗತಿಯಿಂದ ಎಸ್ಸೆಸ್ಸೆಲ್ಸಿವರೆಗೂ ಆಂಗ್ಲ ಮಾಧ್ಯಮದಲ್ಲಿ ಬೋಧಿಸಲು ಯೋಜಿಸಲಾಗಿದೆ. ಈ ಕಾರ್ಯಕ್ರಮ ವೀಕ್ಷಿಸಲು ಗ್ರಾ.ಪಂ ಹಂತದಲ್ಲಿ ಟಿ.ವಿ ವ್ಯವಸ್ಥೆ ಮಾಡಬೇಕು. ಪ್ರತಿ ವಿದ್ಯಾರ್ಥಿ ಕಾರ್ಯಕ್ರಮ ವೀಕ್ಷಣೆ ಮಾಡಿದ ಬಗ್ಗೆ ಪರಿಶೀಲನೆ ನಡೆಸಿ ಪ್ರಶ್ನೋತ್ತರ ನೀಡಿ ಕಲಿಕೆಯಲ್ಲಿ ನಿರಂತರತೆ ಕಾಪಾಡಿ’ ಎಂದು ಸೂಚಿಸಿದರು.

ಎಸ್ಸೆಸ್ಸೆಲ್ಸಿ ಜಿಲ್ಲಾ ಪರೀಕ್ಷಾ ನೋಡಲ್ ಅಧಿಕಾರಿ ಎ.ಎನ್.ನಾಗೇಂದ್ರಪ್ರಸಾದ್, ಶಿಕ್ಷಣಾಧಿಕಾರಿ ಸಿ.ಆರ್.ಅಶೋಕ್, ಬಿಇಒ ಕೆ.ಎಸ್.ನಾಗರಾಜಗೌಡ, ಡಿವೈಪಿಸಿ ಮೋಹನ್‌ಬಾಬು, ವಿಷಯ ಪರೀಕ್ಷಕರಾದ ಗಾಯತ್ರಿ, ಶಶಿವಧನ, ಕೃಷ್ಣಪ್ಪ, ವೆಂಕಟೇಶಪ್ಪ, ಎವೈಪಿಸಿ ಸಿದ್ದೇಶ್ ಪಾಲ್ಗೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT