ಗುರುವಾರ , ಜನವರಿ 21, 2021
27 °C
ಸಾರ್ವಜನಿಕ ಶಿಕ್ಷಣ ಇಲಾಖೆ ಶಿಕ್ಷಣಾಧಿಕಾರಿ ಅಶೋಕ್ ಅಭಿಪ್ರಾಯ

ವಿದ್ಯಾಗಮ ಶೈಕ್ಷಣಿಕ ಪ್ರಗತಿಗೆ ಪೂರಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋಲಾರ: ‘ಶಿಕ್ಷಕರು ಮತ್ತು ಮಕ್ಕಳ ನಡುವಿನ ಬಾಂಧವ್ಯಕ್ಕೆ ಸೇತುವೆಯಾಗಿರುವ ವಿದ್ಯಾಗಮ ಕಾರ್ಯಕ್ರಮವು ಮಕ್ಕಳ ಶೈಕ್ಷಣಿಕ ಪ್ರಗತಿಗೆ ಪೂರಕ’ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಶಿಕ್ಷಣಾಧಿಕಾರಿ ಸಿ.ಆರ್.ಅಶೋಕ್ ಅಭಿಪ್ರಾಯಪಟ್ಟರು.

ತಾಲ್ಲೂಕಿನ ಹರಟಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶುಕ್ರವಾರ ವಿದ್ಯಾಗಮ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ‘ಶಾಲೆಗಳು ಯಾವುದೇ ಅಡಚಣೆ ಇಲ್ಲದೆ ಸುಸೂತ್ರವಾಗಿ ನಡೆಯುತ್ತಿದ್ದು, ಮಕ್ಕಳು ಶಾಲೆಗೆ ಬಂದು ಸಮರ್ಪಕವಾದ ಶಿಕ್ಷಣ ಪಡೆಯಬೇಕು’ ಎಂದು ಹೇಳಿದರು.

‘ಈಗಾಗಲೇ ಮಕ್ಕಳು ಕೋವಿಡ್- ಕಾರಣಕ್ಕೆ ರಜೆಯಲ್ಲಿ ಮನೆಯಲ್ಲಿದ್ದು, ಕಲಿತಿರುವುದು ಸೇರಿದಂತೆ ಕಲಿಕೆಗೆ ಪೂರಕವಾಗಿ ಪಠ್ಯಕ್ರಮ ವಿಭಾಗ ಮಾಡಿ ಕಲಿಯ ಗುರಿ ಸಾಧಿಸಲು ಶಿಕ್ಷಕರು ಸಹಕಾರಿಯಾಗುತ್ತಿರುವುದು ಶ್ಲಾಘನೀಯ. ಶಾಲೆಗಳಲ್ಲಿ ಕೋವಿಡ್‌ ಸುರಕ್ಷತಾ ಮಾರ್ಗಸೂಚಿ ಕಟ್ಟುನಿಟ್ಟಾಗಿ ಪಾಲಿಸಬೇಕು’ ಎಂದು ಸೂಚಿಸಿದರು.

‘ಶಾಲೆಗಳಲ್ಲಿ ವಿದ್ಯಾರ್ಥಿಗಳನ್ನು ಗುಂಪುಗಳಾಗಿ ವಿಂಗಡಿಸುವುದರಿಂದ ಮೊಬೈಲ್, ಇಂಟರ್‌ನೆಟ್‌ ಸೌಲಭ್ಯವಿಲ್ಲದ ಬಡ ಮತ್ತು ಹಿಂದುಳಿದ ವಿದ್ಯಾರ್ಥಿಗಳಿಗೆ ಕಲಿಕೆಯ ನಿರಂತರತೆ ಕಾಪಾಡಿಕೊಳ್ಳಲು ಸಹಾಯವಾಗುತ್ತದೆ. ಜತೆಗೆ ಸ್ವಯಂ ಕಲಿಕೆ ಮತ್ತು ಮಕ್ಕಳು ಅನವಶ್ಯಕವಾಗಿ ಕಾಲಹರಣ ಮಾಡುವುದನ್ನು ತಪ್ಪಿಸಲು ಸಾಧ್ಯವಾಗುತ್ತದೆ’ ಎಂದರು.

‘ಶಾಲೆ ಸ್ವಚ್ಛವಾಗಿಡಬೇಕು. ಈಗಾಗಲೇ ಪಂಚಾಯಿತಿ ವ್ಯಾಪ್ತಿಯ ಎಲ್ಲಾ ಶಾಲೆಗಳನ್ನು ಸ್ಯಾನಿಟೈಸ್ ಮಾಡಲಾಗಿದೆ. ಶಾಲಾ ವಾತಾವರಣ ಸುಂದರಗೊಳಿಸಲು ಮತ್ತು ಕಲಿಕೆಗೆ ಪೂರಕ ವಾತಾವರಣ ಸೃಷ್ಟಿಸಲು ಶಿಕ್ಷಕರು, ಪೋಷಕರು ಶ್ರಮಿಸಬೇಕು’ ಎಂದು ಹರಟಿ ಗ್ರಾ.ಪಂ ಅಭಿವೃದ್ಧಿ ಅಧಿಕಾರಿ ನಾಗರಾಜ್ ಮನವಿ ಮಾಡಿದರು.

ಸಂತಸದ ವಿಚಾರ: ‘ಶಿಕ್ಷಣ ಇಲಾಖೆಯು ವಿದ್ಯಾಗಮ ಪುನರ್ ಆರಂಭಿಸಿರುವುದರಿಂದ ವಿದ್ಯಾರ್ಥಿಗಳಲ್ಲಿ, ಶಿಕ್ಷಕರಲ್ಲಿ ಕಲಿಯುವ ಹಾಗೂ ಕಲಿಸುವ ಆಸಕ್ತಿ ಉಂಟಾಗಿದೆ. ಮಕ್ಕಳ ಸುಲಲಿತ ಶಿಕ್ಷಣ ಮುಂದುವರಿಯುತ್ತಿರುವುದು ಸಂತಸದ ವಿಚಾರ. ಮಕ್ಕಳ ಶೈಕ್ಷಣಿಕ ಭವಿಷ್ಯ ಉತ್ತಮವಾಗಲಿ’ ಎಂದು ಹರಟಿ ಶಾಲೆಯ ಮುಖ್ಯೋಪಾಧ್ಯಾಯ ಜಿ.ಶ್ರೀನಿವಾಸ್ ಆಶಿಸಿದರು.

‘ವಿದ್ಯಾರ್ಥಿಗಳು ಜ್ಞಾನಾರ್ಜನೆಗೆ ಹೆಚ್ಚು ಒತ್ತು ನೀಡಿ ನಿಗದಿತ ಸಮಯಕ್ಕೆ ಶಾಲೆಗೆ ಬರಬೇಕು. ನಿಗದಿತ ಕಲಿಕಾ ಗುರಿ ಪೂರ್ಣಗೊಳಿಸಿದಾಗ ಪೋಷಕರು ತಮ್ಮ ಮೇಲಿಟ್ಟಿರುವ ಗೌರವ ಹೆಚ್ಚುತ್ತದೆ’ ಎಂದು ಕ್ಷೇತ್ರ ಸಮನ್ವಯ ಸಂಪನ್ಮೂಲ ವ್ಯಕ್ತಿ ಕೆ.ಚಂದ್ರಯ್ಯ ಕಿವಿಮಾತು ಹೇಳಿದರು.

ಸಮೂಹ ಸಂಪನ್ಮೂಲ ವ್ಯಕ್ತಿಗಳಾದ ವಿ.ರೂಪಾ, ರವಿ, ಸಹ ಶಿಕ್ಷಕರಾದ ಪಿ.ಎಂ.ಗೋವಿಂದಪ್ಪ, ಕೆ.ಆರ್.ಸೊಣ್ಣೇಗೌಡ, ಎಂ.ಆರ್.ಮೀನಾ, ಎಚ್.ಮುನಿಯಪ್ಪ, ಕೆ.ಮಮತಾ ಪಾಲ್ಗೊಂಡರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು