ಸೋಮವಾರ, ಜನವರಿ 24, 2022
29 °C

ಗ್ರಾಮಗಳ ಅಭಿವೃದ್ಧಿಗೆ ಗ್ರಾಮ ವಾಸ್ತವ್ಯ: ಸಂಸದ ಎಸ್.ಮುನಿಸ್ವಾಮಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋಲಾರ: ‘ಹಿಂದುಳಿದಿರುವ ಗ್ರಾಮಗಳ ಸಮಗ್ರ ಅಭಿವೃದ್ಧಿಗೆ ಜಿಲ್ಲೆಯಲ್ಲಿ ತಿಂಗಳಿಗೊಮ್ಮೆ ಗ್ರಾಮ ವಾಸ್ತವ್ಯ ಮಾಡುತ್ತೇನೆ’ ಎಂದು ಸಂಸದ ಎಸ್.ಮುನಿಸ್ವಾಮಿ ಹೇಳಿದರು.

ಹೊಸ ವರ್ಷದ ಹಿನ್ನೆಲೆಯಲ್ಲಿ ಮನ್ವಂತರ ಪ್ರಕಾಶನ ಹಾಗೂ ಮನ್ವಂತರ ಜನ ಸೇವಾ ಟ್ರಸ್ಟ್ ವತಿಯಿಂದ ಇಲ್ಲಿ ಶನಿವಾರ ಹಮ್ಮಿಕೊಂಡಿದ್ದ ‘ಹೊಸ ವರ್ಷ ಹೊಸ ಸಂಕಲ್ಪ’ ಕಾರ್ಯಕ್ರಮದಲ್ಲಿ ಮಾತನಾಡಿ. ‘ತೀರಾ ಹಿಂದುಳಿದ ಗಡಿ ಭಾಗದ ಗ್ರಾಮದಲ್ಲಿ ರಾತ್ರಿ ವಾಸ್ತವ್ಯ ಹೂಡಿ ಅಲ್ಲಿನ ಜನರ ಅಹವಾಲು ಆಲಿಸಿ ಪರಿಹರಿಸುವ ಪ್ರಯತ್ನ ಮಾಡುತ್ತೇವೆ’ ಎಂದರು.

‘ಪರಿಸರ ಉಳಿಸಲು ಪ್ರತಿಯೊಬ್ಬರೂ ದೃಢ ಸಂಕಲ್ಪ ಮಾಡಬೇಕು. ಪರಿಸರ ಸಂರಕ್ಷಣೆಗೆ ಜಾತ್ಯಾತೀತವಾಗಿ, ಪಕ್ಷಾತೀತವಾಗಿ ಎಲ್ಲರೂ ಕೈಜೋಡಿಸಬೇಕು. ರಸ್ತೆಗಳ ಅಕ್ಕಪಕ್ಕ ಗಿಡ ಬೆಳೆಸುವ ಅಗತ್ಯವಿದೆ. ಆಲ, ಅರಳಿಯಂತಹ ದೊಡ್ಡ ಮರಗಳನ್ನು ಬೆಳೆಸಬೇಕು’ ಎಂದು ಸಲಹೆ ನೀಡಿದರು.

‘ಮರಳು ಮಾಫಿಯಾಗೆ ಕಡಿವಾಣ ಹಾಕಿ ಕೆರೆ, ಕಾಲುವೆಗಳನ್ನು ಉಳಿಸಬೇಕು. ಜಿಲ್ಲೆಯಲ್ಲಿ ದುಂದು ವೆಚ್ಚಕ್ಕೆ ಕಡಿವಾಣ ಹಾಕಬೇಕು. ಇದಕ್ಕೆ ನಾವೇ ಮೊದಲು ಮಾದರಿಯಾಗಬೇಕು. ಪಕ್ಷದ ಕಾರ್ಯಕರ್ತರು ಮತ್ತು ಅಭಿಮಾನಿಗಳು ನನ್ನನ್ನು ಅಭಿನಂದಿಸಲು ಹಾರ, ತುರಾಯಿ ತರುವುದು ಬೇಡ’ ಎಂದು ವಿಧಾನ ಪರಿಷತ್ ಸದಸ್ಯ ಎಂ.ಎಲ್.ಅನಿಲ್‌ಕುಮಾರ್ ಮನವಿ ಮಾಡಿದರು.

‘ನಗರದ ಸುತ್ತ ವರ್ತುಲ ರಸ್ತೆ ನಿರ್ಮಿಸಿ ಸಂಚಾರ ಸಮಸ್ಯೆ ಪರಿಹರಿಸುವ ಪ್ರಯತ್ನ ಮಾಡುತ್ತೇವೆ. 18 ಕಿ.ಮೀ ವರ್ತುಲ ರಸ್ತೆಗೆ ₹ 314 ಕೋಟಿ ಅಗತ್ಯವಿದ್ದು, ಯೋಜನೆಯ ನೀಲನಕ್ಷೆ ರೂಪಿಸಿ ಸರ್ಕಾರಕ್ಕೆ ಸಲ್ಲಿಸಲಾಗಿದೆ’ ಎಂದು ಕೋಲಾರ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಓಂಶಕ್ತಿ ಚಲಪತಿ ಮಾಹಿತಿ ನೀಡಿದರು.

ಮನ್ವಂತರ ಪ್ರಕಾಶನ ಸಂಸ್ಥಾಪಕ ಪಾ.ಶ್ರೀ.ಅನಂತರಾಮ್, ಆಧ್ಯಾತ್ಮಿಕ ವಿಭಾಗದ ರಾಜ್ಯ ಸಂಚಾಲಕ ಎಸ್.ಮಂಜುನಾಥ್, ಖಜಾಂಚಿ ಎಸ್.ಎನ್.ಪ್ರಕಾಶ್, ಪರಿಸರ ವಿಭಾಗದ ಸಂಚಾಲಕ ಎ.ಬಾಲನ್, ಗ್ರಾಮೀಣಾಭಿವೃದ್ದಿ ಸಂಚಾಲಕ ಎಲ್.ನಿರಂಜನ್, ಸಾಹಿತ್ಯ ಮತ್ತು ಸಾಂಸ್ಕೃತಿಕ ವಿಭಾಗದ ಸಂಚಾಲಕ ರವೀಂದ್ರ ಸಿಂಗ್, ರೈತ ವಿಭಾಗದ ಸಂಚಾಲಕ ನಾಗರಾಜ್ ಪಾಲ್ಗೊಂಡರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.