ಶನಿವಾರ, ಜೂನ್ 19, 2021
28 °C
ಜಿಲ್ಲಾ ಕೇಂದ್ರದಲ್ಲಿ ಉಪ ವಿಭಾಗಾಧಿಕಾರಿ–ತಹಶೀಲ್ದಾರ್‌ ನಗರ ಪ್ರದಕ್ಷಿಣೆ

ಮಾರ್ಗಸೂಚಿ ಉಲ್ಲಂಘನೆ: ಶಿಸ್ತುಕ್ರಮದ ಬಿಸಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋಲಾರ: ಜಿಲ್ಲಾ ಕೇಂದ್ರದಲ್ಲಿ ಶುಕ್ರವಾರ ನಗರ ಪ್ರದಕ್ಷಿಣೆ ನಡೆಸಿದ ಉಪ ವಿಭಾಗಾಧಿಕಾರಿ ಸೋಮಶೇಖರ್ ಮತ್ತು ತಹಶೀಲ್ದಾರ್ ಶೋಭಿತಾ ಅವರು ಕೋವಿಡ್‌ ಮಾರ್ಗಸೂಚಿ ಪಾಲಿಸದ ಅಂಗಡಿ ಮಾಲೀಕರು ಹಾಗೂ ಜನರಿಗೆ ಶಿಸ್ತುಕ್ರಮದ ಬಿಸಿ ಮುಟ್ಟಿಸಿದರು.

ಎಪಿಎಂಸಿ ಹಾಗೂ ತರಕಾರಿ ಮಾರಾಟ ಸ್ಥಳದಲ್ಲಿ ಜನರು ಅಂತರ ಕಾಯ್ದುಕೊಳ್ಳದೆ ಅಂಗಡಿಗಳ ಮುಂದೆ ಗುಂಪುಗೂಡಿರುವುದನ್ನು ಕಂಡು ಅಸಮಾಧಾನಗೊಂಡ ಅಧಿಕಾರಿಗಳು ಅಂಗಡಿ ಮಾಲೀಕರನ್ನು ತರಾಟೆಗೆ ತೆಗೆದುಕೊಂಡರು.

ಮಾರುಕಟ್ಟೆಗಳಲ್ಲಿ ಜನರು ಅಂತರ ಕಾಯ್ದುಕೊಳ್ಳದೆ ಮತ್ತು ಮಾಸ್ಕ್‌ ಧರಿಸದೆ ವಸ್ತುಗಳ ಖರೀದಿಯಲ್ಲಿ ತೊಡಗಿರುವುದು ಸಾಮಾನ್ಯವಾಗಿತ್ತು. ಮತ್ತೊಂದೆಡೆ ತರಕಾರಿ ವ್ಯಾಪಾರಿಗಳು ಸಹ ಮಾಸ್ಕ್ ಧರಿಸದೆ ವ್ಯಾಪಾರ ಮಾಡುತ್ತಿದ್ದ ದೃಶ್ಯ ಕಂಡುಬಂತು.

ನಗರದ ಹಾಗೂ ಅಕ್ಕಪಕ್ಕದ ಗ್ರಾಮಗಳ ಜನರು ಅಗತ್ಯ ವಸ್ತುಗಳ ಖರೀದಿಗಾಗಿ ಬೆಳಿಗ್ಗೆಯೇ ಜಿಲ್ಲಾ ಕೇಂದ್ರಕ್ಕೆ ಬಂದಿದ್ದರು. ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಅಂಗಡಿಗಳು ಬಂದ್ ಆಗುವ ಕಾರಣಕ್ಕೆ ಜನರು ಅಗತ್ಯ ವಸ್ತುಗಳ ಖರೀದಿಗೆ ಮುಗಿಬಿದ್ದರು. ಇದನ್ನು ಗಮನಿಸಿದ ಅಧಿಕಾರಿಗಳು ಸಂಬಂಧಪಟ್ಟ ಅಂಗಡಿಗಳಿಗೆ ಬೀಗಮುದ್ರೆ ಹಾಕುವಂತೆ ಸಿಬ್ಬಂದಿಗೆ ಸೂಚಿಸಿದರು.

ಆಟೊ ಚಾಲಕರಿಗೆ ದಂಡ: ಜನತಾ ಕರ್ಫ್ಯೂ ನಡುವೆಯೂ ನಿಯಮಬಾಹಿರವಾಗಿ ತೆರೆದಿದ್ದ ಅಂಗಡಿಗಳನ್ನು ಉಪ ವಿಭಾಗಾಧಿಕಾರಿ ಸೋಮಶೇಖರ್ ಬಂದ್‌ ಮಾಡಿಸಿದರು. ಅಲ್ಲದೇ, ಅನಗತ್ಯವಾಗಿ ರಸ್ತೆಗಳಲ್ಲಿ ಸಂಚರಿಸುತ್ತಿದ್ದ ಆಟೊಗಳನ್ನು ತಡೆದು ಚಾಲಕರಿಗೆ ದಂಡ ವಿಧಿಸಿದರು. ಅನಗತ್ಯವಾಗಿ ಮನೆಯಿಂದ ಹೊರ ಬಂದು ರಸ್ತೆಗಳಲ್ಲಿ ಸಂಚರಿಸುತ್ತಿದ್ದ ವಾಹನ ಸವಾರರಿಗೆ ತಹಶೀಲ್ದಾರ್‌ ಎಚ್ಚರಿಕೆ ನೀಡಿದರು.

ಜನತಾ ಕರ್ಫ್ಯೂ ಜಾರಿಯಾದರೂ ಕೊರೊನಾ ಸೋಂಕು ಹರಡುವಿಕೆ ಪ್ರಮಾಣ ತಗ್ಗದ ಹಿನ್ನೆಲೆಯಲ್ಲಿ ಅಧಿಕಾರಿಗಳು ಬೆಳಿಗ್ಗೆ 9 ಗಂಟೆಗೆ ಅಂಗಡಿಗಳನ್ನು ಮುಚ್ಚಿಸಿದರು.

ಕಾಳಮ್ಮಗುಡಿ ರಸ್ತೆ, ಅಮ್ಮವಾರಿಪೇಟೆ, ಎಂ.ಜಿ ರಸ್ತೆಯಲ್ಲಿ ಸಂಚರಿಸಿದ ಅಧಿಕಾರಿಗಳು ದಿನಸಿ, ತರಕಾರಿ, ಹಾಲು, ಔಷಧ ಮಳಿಗೆಗಳನ್ನು ಹೊರತುಪಡಿಸಿ ನಿಯಮಬಾಹಿರವಾಗಿ ಅಂಗಡಿ ತೆರೆದು ವಹಿವಾಟು ನಡೆಸುತ್ತಿದ್ದವರನ್ನು ತರಾಟೆಗೆ ತೆಗೆದುಕೊಂಡರು. ಕೆಲ ಅಂಗಡಿ ಮಾಲೀಕರು ಅಧಿಕಾರಿಗಳನ್ನು ಕಂಡು ಅಂಗಡಿಯ ಬಾಗಿಲು ಬಂದ್ ಮಾಡಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು